ಕೆಜಿಎಫ್ ಬಸ್ ನಿಲ್ದಾಣ ದುರಸ್ತಿ ಎಂದು?
ಆರ್. ರಜನೀಕಾಂತ್
ಕೆಜಿಎಫ್: ಹಳ್ಳಕೊಳ್ಳಗಳಿಂದ ಕೂಡಿರುವ ಬಸ್ ನಿಲ್ದಾಣದಲ್ಲಿ ಎಷ್ಟೋ ಮಂದಿ ಬಸ್ ಹತ್ತಲು ಹೋಗಿ ಕೆಳಗೆ ಬಿದ್ದು ಗಾಯಗೊಂಡಿರುವ ಘಟನೆಗಳು ಪಟ್ಟದಲ್ಲಿ ನಡೆದಿವೆ.
ಬಸ್ ನಿಲ್ದಾಣದಲ್ಲಿ ಡಾಂಬರು ಕಿತ್ತು ಹೋಗಿ ಎದ್ದಿರುವ ಜಲ್ಲಿಕಲ್ಲುಗಳು ಬಸ್ ಚಕ್ರದಡಿಯಿಂದ ಹಾರಿ ಎಷ್ಟೋ ಮಂದಿ ಪ್ರಯಾಣಿಕರಿಗೆ ಹೊಡೆದು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಮಳೆ ಬಂದರೆ ಕೆಸರುಗದ್ದೆಯಂತಾಗುವ ಬಸ್ ನಿಲ್ದಾಣದಲ್ಲಿ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಕಾಲು ಜಾರಿ ಬಿದ್ದು ಬಿದ್ದಿರುವ ಉದಾಹರಣೆಗಳಿವೆ. ನಗರಸಭೆ ಸಿಬ್ಬಂದಿ ನಿರ್ಲಕ್ಷ್ಯತೆಯಿಂದ ಬಸ್ ನಿಲ್ದಾಣದಲ್ಲಿ ಎಲ್ಲಂದರೆ ಅಲ್ಲಿ ರಾಶಿಯಾಗಿ ಬಿದ್ದಿರುವ ಕಸ ವಿಲೇವಾರಿಯಾಗದೆ ಪ್ರಯಾಣಿಕರು ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಿಂದ ಮೂಗುಮುಚ್ಚಿಕೊಂಡು ಕೂರುವ ಪರಿಸ್ಥಿತಿ ಎದುರಾಗಿದೆ. ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕುಡಿಯಲು ನೀರಿನ ವ್ಯವಸ್ಥೆಯಿಲ್ಲ, ತಂಗುದಾಣವಿಲ್ಲದೆ ಪ್ರಯಾಣಿಕರು ಎಲ್ಲಂದರಲ್ಲೇ ಕೂರುವಸ್ಥಿತಿ ಕೆಜಿಎಫ್ ನಗರಸಭೆ ಬಸ್ ನಿಲ್ದಾಣದಲ್ಲಿ ಉದ್ಭವಿಸಿದೆ. ಬಸ್ ನಿಲ್ದಾಣವನ್ನು ದುರಸ್ತಿಗೊಳಿಸುವಂತೆ ಒತ್ತಾಯಿಸಿ ಇಲ್ಲಿನ ಕನ್ನಡಪರ ಸಂಘಟನೆಗಳು ನಾನಾ ರೀತಿಯ ಹೋರಾಟ ನಡೆಸಿ, ಜಿಲ್ಲಾಧಿಕಾರಿಗಳಿಗೆ, ಸಾರಿಗೆ ಸಚಿವರಿಗೆ, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ.
2009ರಲ್ಲಿ ಬಸ್ ನಿಲ್ದಾಣದ ದುರಸ್ತಿಗೆ 1 ಕೋಟಿ ಅನುದಾನ ಬಿಡುಗಡೆಗೊಳಿಸಿ ಇ-ಟೆಂಡರ್ ಬಿಡಲಾಗಿದೆ. ಆದರೆ ಇಲ್ಲಿನ ಅಧಿಕಾರಿಗಳ ಮತ್ತು ವಿವಿಧ ರಾಜಕೀಯ ಪಕ್ಷಗಳ ಒಳ ಜಗಳಕ್ಕೆ ಟೆಂಡರ್ ಕರೆದವರಿಗೆ ವರ್ಕ್ ಆರ್ಡ್ರ್ ನೀಡಿಲ್ಲ. ಆದರೆ 2013 ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಮಾಜಿ ಶಾಸಕರು ಬಸ್ ನಿಲ್ದಾಣದಲ್ಲಿ ಅಡಿಕಲ್ಲು ನೆಟ್ಟಿ ಭೂಮಿ ಪೂಜೆ ನೆರವೇರಿಸಲು ಮುಂದಾಗಿದ್ದರೇ ಹೊರತು ಚುನಾವಣೆ ಮುಗಿದು 6 ತಿಂಗಳಾದರು ನಿಲ್ದಾಣದ ಪರಿಸ್ಥಿತಿ ಹಾಗೆಯೇ ಇದೆ. ಇನ್ನಾದರೂ ಸಂಬಂಧಪಟ್ಟವರು ಬಸ್ ನಿಲ್ದಾಣದತ್ತ ಗಮನಹರಿಸಿ ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ನಿಲ್ದಾಣ ದುರಸ್ತಿ ಪಡಿಸುವರೇ ಎಂಬುದು ಸಾರ್ವಜನಿಕರ ಬೇಡಿಕೆಯಾಗಿದೆ.