ಕೈಗಾರಿಕೆಗಳ ಅಭಿವೃದ್ಧಿಗೆ ಎದುರಾಗಿರುವ ಕಂಟಕ ನಿವಾರಿಸಿ
ಕ.ಪ್ರ.ವಾರ್ತೆ ಕೋಲಾರ ಡಿ.4
ಜಿಲ್ಲೆಯಲ್ಲಿ ಕೈಗಾರಿಕೆಗಳು ಬೆಳೆದರೆ ನಿರುದ್ಯೋಗ ಸಮಸ್ಯೆ ನಿವಾರಣೆ ಆಗುತ್ತದೆ. ಆದರೆ, ಕೆಲವರು ಕ್ಷುಲ್ಲಕ ಕಾರಣಕ್ಕೆ ಕೈಗಾರಿಕೆಗಳ ಬಳಿ ಪ್ರತಿಭಟನೆ ಮಾಡುತ್ತಿರುವುದರಿಂದ ಈ ಜನರಿಗೆ ತಿಳುವಳಿಕೆ ನೀಡುವ ಮೂಲಕ ಕಂಟಕ ನಿವಾರಿಸಬೇಕೆಂದು ಶಾಸಕ ವರ್ತೂರು ಪ್ರಕಾಶ್ ವಕೀಲರಿಗೆ ಮನವಿ ಮಾಡಿದರು.
ನಗರದ ನ್ಯಾಯಾಲಯ ಸಂಕಿರಣದಲ್ಲಿ ವಕೀಲರ ಸಂಘದಿಂದ ಬುಧವಾರ ಹಮ್ಮಿಕೊಂಡಿದ್ದ ನೂತನ ಉಪಹಾರ ಗೃಹದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಬರಗಾಲ ಹಾಗೂ ನೀರಿನ ಬವಣೆಯಲ್ಲಿ ಜನತೆ ಸಂಕಷ್ಟದ ನಡುವೆ ಬದುಕು ಸಾಗಹಾಕಬೇಕಾಗಿದೆ ಇದರ ನಡುವೆ ತಾಲೂಕಿನ ನರಸಾಪುರಕ್ಕೆ ಅನೇಕ ಕೈಗಾರಿಕೆಗಳು ಬಂದು ಸಾವಿರಾರು ಮಂದಿಗೆ ಉದ್ಯೋಗ ನೀಡಿದೆ, ಈ ಹಿನ್ನಲೆಯಲ್ಲಿ ಅನೇಕ ರೀತಿಯ ಆರ್ಥಿಕ ಬೆಳವಣಿಗೆಗೆ ಅವಕಾಶವಾಗುತ್ತಿದೆ ಎಂದು ತಿಳಿಸಿದರು.
ಟಮಕದಲ್ಲಿನ ಕೈಗಾರಿಕೆಗಳ ವಿರುದ್ಧ ಹಿಂದೆ ನಡೆದ ಗಲಾಟೆಗಳ ಪರಿಣಾಮ ಅನೇಕ ಕೈಗಾರಿಕೆಗಳು ಮುಚ್ಚಿರುವುದು ನಮ್ಮ ಕಣ್ಮುಂದೆ ಇರುವುದರಿಂದ ನರಸಾಪುರದಲ್ಲಿ ಸ್ಥಾಪನೆಯಾಗಿರುವ ಕೈಗಾರಿಕೆಗಳನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಕೈಗಾರಿಕೆಗಳ ವಿರುದ್ಧ ಪ್ರತಿಭಟನೆ ಮುಂದುವರೆದರೆ ವೇಮಗಲ್ಕೈಗಾರಿಕಾ ಕ್ಷೇತ್ರದಲ್ಲಿ ಕೈಗಾರಿಕೆಗಳು ಬರುವುದು ಕಷ್ಟವಾಗುತ್ತದೆ. ಇದರಿಂದ ಆರ್ಥಿಕ ಬೆಳವಣಿಗೆ ಹಿನ್ನಡೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ ಶಾಸಕರು. ಇಂತಹ ಅನಾರೋಗ್ಯಕಾರಿ ಬೆಳವಣಿಗೆಗಳನ್ನು ತಡೆಗಟ್ಟಲು ವಕೀಲರು ತಿಳುವಳಿಕೆ ಮೂಡಿಸುವಂತಹ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದರು.
ಈ ಮೊದಲು ತಾವು ಕೊಟ್ಟ ಮಾತಿನಂತೆ ಉಪಹಾರ ಮಂದಿರ ಕಟ್ಟಡ ನಿರ್ಮಾಣಕ್ಕೆ ಸ್ವಂತ ಹಣ ನೀಡಿದ್ದು ಬಾಕಿ ಇರುವ ಸುಸಜ್ಜಿತ ಗ್ರಂಥಾಲಯ ಹಾಗೂ ಕೊಳವೆ ಬಾವಿಗೆ ಮೋಟಾರು ಪಂಪ್ ಅಳವಡಿಸಲು ಅಗತ್ಯ ಧನ ಸಹಾಯ ಮಾಡುವುದಾಗಿ ಭರವಸೆ ನೀಡಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್. ರೇಣುಕಾ ಪ್ರಸಾದ್ ಅವರು ನೂತನ ಉಪಹಾರ ಗೃಹವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಟಿ.ಎಂ. ಶಿವಣ್ಣ ಮಾತನಾಡಿ, ಶಾಸಕ ವರ್ತೂರು ಪ್ರಕಾಶ್ ಅವರು ನೀಡಿದ ಸ್ವಂತ ದುಡ್ಡಿನಲ್ಲಿ ಈ ಉಪಹಾರ ಮಂದಿರ ನಿರ್ಮಾಣ ಮಾಡಲಾಗಿದೆ. ಇದೇ ರೀತಿ ನೂತನ ಗ್ರಂಥಾಲಯ ಕಟ್ಟಡ ಹಾಗೂ ಕೊಳವೆ ಬಾವಿ ನಿರ್ಮಾಣ ಬಾಕಿ ಇದ್ದು ಇದನ್ನು ನೆರವೇರಿಸಿಕೊಡಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ವಕೀಲ ಕೆ.ಆರ್. ಶ್ರೀನಿವಾಸಯ್ಯ, ಬಿಸಪ್ಪಗೌಡ, ಡಿ. ವೆಂಕಟರಾಮೇಗೌಡ, ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಜಣ್ಣ ಹಾಗೂ ಜಿಲ್ಲಾ ನ್ಯಾಯಾಲಯದ ಎಲ್ಲಾ ನ್ಯಾಯಾಧೀಶರು, ವಕೀಲರ ಸಂಘದ ಪದಾದಿಕಾರಿಗಳು ಮತ್ತು ವಕೀಲ ಇದ್ದರು.