ಗ್ರಾಪಂ ಅವ್ಯವಹಾರ: ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲು ಆಗ್ರಹ
ಚಿಂತಾಮಣಿ: ಕೈವಾರ ಗ್ರಾಪಂ ಪಿಡಿಒ, ಅಧ್ಯಕ್ಷ ಹಾಗೂ ಸದಸ್ಯರುಗಳ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿ ಎಂದು ಕೈವಾರ ಸುಬ್ಬಾರೆಡ್ಡಿ, ಕೆ.ಎಚ್. ಮಂಜುನಾಥ್, ಬನಹಳ್ಳಿ ರವಿ ಇನ್ನೂ ಹಲವು ಮುಖಂಡರು ಆಗ್ರಹಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಎಪಿಎಂಸಿ ಸದಸ್ಯ ಕೈವಾರ ಸುಬ್ಬಾರೆಡ್ಡಿ ನಾಯಕತ್ವದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2012-13ನೇ ಸಾಲಿನ ಹಣಕಾಸಿನ ಯೋಜನೆಯಡಿ 1.35 ಅನುದಾನವನ್ನು ದುರುಪಯೋಗ ಪಡಿಸಿಕೊಂಡಿರುವ ಕೈವಾರ ಗ್ರಾಪಂ ಪಿಡಿಒ, ಅಧ್ಯಕ್ಷ ಹಾಗೂ ಸದಸ್ಯರ ಮೇಲೆ ಕ್ರಿಮಿನಲ್ ಕೇಸ್ ಹಾಕಬೇಕೆಂದು ಆಗ್ರಹಿಸಿದರು.
ಗ್ರಾಮದ ಅಭಿವೃದ್ಧಿಗೆ ಒತ್ತು ನೀಡದೆ ತುಘಲಕ್ ದರ್ಬಾರ್ ನಡೆಸುತ್ತಿರುವ ಅಧ್ಯಕ್ಷ ಹಾಗೂ ಪಿಡಿಒ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಕಳೆದ 6 ದಿನಗಳಿಂದ ನಡೆದ ಪ್ರತಿಭಟನೆಗೆ ಮೇಲಧಿಕಾರಿಗಳು ಸ್ಪಂದಿಸಿ ಪಿಡಿಒ ಶಂಕರಪ್ಪ ಅವರನ್ನು ಅಮಾನತ್ ಮಾಡಿ ಆದೇಶಿಸಿರುವುದು ಹೋರಾಟಕ್ಕೆ ಸಿಕ್ಕ ಜಯ ಎಂದರು.
ಮುಖಂಡರಾದ ರಾಮಚಂದ್ರಪ್ಪ, ನಾರಾಯಣಸ್ವಾಮಿ, ಚೌಡಪ್ಪ, ಚನ್ನಕೇಶವಪ್ಪ ಹಾಗೂ ಇತರರು ಇದ್ದರು.