ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮುನಿಯಪ್ಪ ಬಿಡೋ ರೈಲಿಗೆ ಕಿಮ್ಮತ್ತಿಲ್ಲ

Rashmi Kasaragodu
Updated On : 5 Dec 2013, 1:22 am

ಕನ್ನಡಪ್ರಭ ವಾರ್ತೆ, ಕೋಲಾರ, ಡಿ.4
ಕ್ಷೇತ್ರದ ಸಂಸದರೂ ಆಗಿರುವ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಕಳೆದ 30 ವರ್ಷಗಳಿಂದ ರೈಲು ಬಿಡ್ತಾನೇ ಇದ್ದಾರೆ. ಇದಕ್ಕೆ ತಲೆ ಕೆಡಿಸಿಕೊಳ್ಳದೆ ಬೂತ್ ಮಟ್ಟದಿಂದ ಪಕ್ಷ ಸಂಘಟಿಸಿ ಈ ಬಾರಿ ಕ್ಷೇತ್ರವನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳಬೇಕೆಂದು ಬಿಜೆಪಿಯ ಜಿಲ್ಲಾ ಉಸ್ತುವಾರಿ ವಹಿಸಿರುವ ನಂದೀಶ್ ರೆಡ್ಡಿ ಕಾರ್ಯಕರ್ತರಿಗೆ ಕರೆ ನೀಡಿದರು.
ಕೋಲಾರ- ಟೇಕಲ್ರಸ್ತೆಯ ಯಾದವ ಸಮುದಾಯ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕೋಲಾರ ಲೋಕಸಭಾ ಕ್ಷೇತ್ರದ ಚುನಾವಣೆ ಸಿದ್ಧತಾ ಸಭೆಯ ಉದ್ಘಾಟಿಸಿ ಮಾತನಾಡಿ, ಸತತವಾಗಿ ಆರು ಬಾರಿ ಕೋಲಾರ ಕ್ಷೇತ್ರದಿಂದ ಆಯ್ಕೆಯಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸಿದರೂ ಹೇಳಿಕೊಳ್ಳುವಂತಹ ಯಾವುದೇ ಒಂದು ಅಭಿವೃದ್ಧಿ ಕೆಲಸ ಮಾಡಿಲ್ಲವೆಂದು ಆರೋಪಿಸಿದರು.
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರು 272 ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಬೇಕೆಂಬ ಉದ್ದೇಶದಿಂದ ರಾಷ್ಟ್ರ ಪ್ರವಾಸ ಮಾಡುತ್ತಿದ್ದಾರೆ. ಕೋಲಾರದ ಕ್ಷೇತ್ರವನ್ನು ನಾವು ಮೋದಿಯವರ ಲೆಕ್ಕಕ್ಕೆ ಕೊಡುಗೆಯಾಗಿ ನೀಡಬೇಕೆಂದರು.
ವಿದೇಶಿ ಮಾಧ್ಯಮವೊಂದು ಪ್ರಕಟಿಸಿರುವ ಜಗತ್ತಿನ ಶ್ರೀಮಂತ ರಾಜಕಾರಣಿಗಳ ಪಟ್ಟಿಯಲ್ಲಿ ಅಮೆರಿಕಾ ಅಧ್ಯಕ್ಷ ಒಬಾಮಾ ಅವರ ಹೆಸರಿಲ್ಲ. ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ 12ನೇ ಸ್ಥಾನದಲ್ಲಿದ್ದಾರೆ. ಇವರಿಗೆ ಈ ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.
ಕೃಷಿ ಭಾರತದ ಬೆನ್ನೆಲು, ರೈತರು, ಕಾರ್ಮಿಕರ ಕೈ ಬಲಪಡಿಸುವ ಪರಿಣಾಮಕಾರಿ ಯೋಜನೆ ಗುಜರಾತ್ ರಾಜ್ಯ ಬಿಟ್ಟರೆ ಇಡೀ ದೇಶದಲ್ಲಿ ಜಾರಿಗೆ ಬಂದಿಲ್ಲ. ದಿನದ 24 ಗಂಟೆಗಳ ಕಾಲ ರೈತರ ಪಂಪ್ಸೆಟ್ಗಳಿಗೆ ವಿದ್ಯುತ್ ಮತ್ತಿತರೆ ಸೌಲಭ್ಯ ಗುಜರಾತ್ ನಲ್ಲಿದೆ. ಗುಜರಾತ್ನ ಮುಖ್ಯಮಂತ್ರಿ ನರೇಂದ್ರ ಮೋದಿ ದೇಶದ ಪ್ರಧಾನಿಯಾದರೆ ಇಡೀ ರಾಷ್ಟ್ರ ಅಭಿವೃದ್ಧಿಪಥದತ್ತ ಸಾಗುತ್ತದೆ ಎಂದರು.
ಲೋಕಸಭೆ ಚುನಾವಣೆಗೆ ನಾಲ್ಕೈದು ತಿಂಗಳು ಮಾತ್ರ ಬಾಕಿ ಇದ್ದು,  ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಗುರುತಿಸಿ ಅವರಿಂದ ಮನೆ ಮನೆ ಸಂಪರ್ಕ ಆಗಬೇಕು, ಶಕ್ತಿ ಕೇಂದ್ರಗಳು ಸಕ್ರೀಯವಾಗಿ ಮೋದಿ ಅವರ  ಅಭಿವೃದ್ಧಿ ಬಗ್ಗೆ ಮನವರಿಕೆ ಮಾಡಿಕೊಡಬೇಕೆಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಬಿಬಿಎಂಪಿ ಸದಸ್ಯ ಶಿವಕುಮಾರ್ ಮಾತನಾಡಿ, ಡಿ.1ರಿಂದ 15ರವರೆಗೆ ಶಕ್ತಿ ಕೇಂದ್ರದ ಸಂಚಾಲಕ, ಸಹ ಸಂಚಾಲಕರಿಗೆ ಕಾರ್ಯಾಗಾರ, ಜ. 1ರಿಂದ 15ರವರೆಗೆ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಬೇಕು, ಬೂತ್ ಮಟ್ಟದ ಸಮಾವೇಶ, ವಿಧಾನಸಭಾ ಕ್ಷೇತ್ರವಾರು  ಮತ್ತು ಲೋಕಸಭೆ ಕ್ಷೇತ್ರಕ್ಕೆ  ನಿರ್ವಹಣಾ ಸಮಿತಿ ರಚನೆ ನಡೆಸಬೇಕೆಂದು ವಿವಿಧ ಘಟಕಗಳ ಪದಾಧಿಕಾರಿಗಳಿಗೆ ಸೂಚಿಸಿದರಲ್ಲದೆ ಲೋಕಸಭಾ ಕ್ಷೇತ್ರವಾರು ಸಮಾವೇಶ ನಡೆಸಲಾಗುವುದು ಎಂದರು.
ಬಿಜೆಪಿಗೆ ಸೇರ್ಪಡೆಗೊಂಡು ಮಾತನಾಡಿದ ಜಿಪಂ ಮಾಜಿ ಸದಸ್ಯ ಜಿ.ಇ. ರಾಮೇಗೌಡ, ತಾವು  ಐದಾರು ವರ್ಷಗಳ ಹಿಂದೆ ಗುಜರಾತ್ಗೆ ಹೋಗಿ ಅಲ್ಲಿನ ಅಭಿವೃದ್ಧಿ ಕಂಡು ಮೋದಿಯ ಅಭಿಮಾನಿಯಾದೆ. ಗುಜರಾತ್ ಮಾದರಿಯಲ್ಲಿ ಮಾಲೂರು ಕ್ಷೇತ್ರವನ್ನು ಅಭಿವೃದ್ಧಿಪಡಿಸಬೇಕೆಂದು ಕಳೆದ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿದ್ದೆ. ಈಗ ಬಿಜೆಪಿ ಸೇರುವ ಮೂಲಕ ಮುಂದಿನ ದಿನಗಳಲ್ಲಿ ಕನಸು ನನಸಾಗಿಸುವೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಕೃಷ್ಣಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ  ಕೆ.ಸಿ. ವಿಜಯಕುಮಾರ್ ಬಿಜೆಪಿ ಸೇರ್ಪಡೆಯಾದರು. ಮಾಜಿ ಶಾಸಕ ಎಂ. ನಾರಾಯಣಸ್ವಾಮಿ, ರಘುನಾಥ್, ವೈ. ಸುರೇಂದ್ರಗೌಡ, ಹನುಮಂತಪ್ಪ, ಸತ್ಯನಾರಾಯಣ ಮಹೇಶ್, ವೆಂಕಟೇಶ ಮೌರ್ಯ, ರಾಷ್ಟ್ರೀಯ ರೈತ ಮೋರ್ಚಾದ ಶಂಕರನಾರಾಯಣರೆಡ್ಡಿ, ನೀಲಿ ಜಯಂಶಕರ್, ಕೃಷ್ಣಾರೆಡ್ಡಿ, ರಂಗಪ್ಪ, ಜಾವೀದ್, ಚಿಕ್ಕಬಳ್ಳಾಪುರದ ರಮೇಶ್ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement