ವರದಕ್ಷಿಣೆ ಕಿರುಕುಳ; ಗೃಹಿಣಿ ಆತ್ಮಹತ್ಯೆ
ಶಿಡ್ಲಘಟ್ಟ: ವರದಕ್ಷಿಣೆ ಕಿರುಕುಳ ತಾಳಲಾರದೇ ವಿವಾಹಿತ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ತಾಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಅಗಲಗುರ್ಕಿ ಗ್ರಾಮದಲ್ಲಿ ಸಂಭವಿಸಿದೆ. ದೇವನಹಳ್ಳಿ ತಾಲೂಕಿನ ಕುರುಬನಕುಂಟೆ ಗ್ರಾಮದ ಮುನಿಯಪ್ಪನವರ ಪುತ್ರಿ ಗಾಯಿತ್ರಿ(24) ಮೃತಪಟ್ಟ ನತದೃಷ್ಟೆ. ಮೃತ ಗಾಯಿತ್ರಿಯನ್ನು ತಾಲೂಕಿನ ಅಗಲಗುರ್ಕಿ ಗ್ರಾಮದ ಗಂಗರೆಡ್ಡಿ ಎಂಬಾತನೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಕಳೆದ ಐದು ವರ್ಷಗಳ ಹಿಂದೆ ನಡೆದ ಮದುವೆ ಸಂದರ್ಭದಲ್ಲಿ ಚಿನ್ನದ ಒಡವೆ ನೀಡಲಾಗಿತ್ತು ಎನ್ನಲಾಗಿದೆ. ದಂಪತಿಗಳಿಗೆ ಒಬ್ಬ ಮಗಳಿದ್ದು ಪತಿ ಗಂಗರೆಡ್ಡಿಯಿಂದ ದೈಹಿಕ ಹಾಗೂ ಮಾನಸಿಕ ಕಿರುಕುಳ ತಾಳಲಾರದೇ ಮೃತಪಟ್ಟಿದ್ದಾಳೆ ಎಂದು ಮುನಿಯಪ್ಪ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕ ತಬ್ರೇ ಆಲಂ ಪಾಷ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿಕೊಂಡು ಆರೋಪಿ ಗಂಗರೆಡ್ಡಿಯನ್ನು ಬಂಧಿಸಿ ನ್ಯಾಯಾಲಯ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಚಿನ್ನದ ಸರ ಅಪಹರಣ
ಬಂಗಾರಪೇಟೆ: ಮಹಿಳೆ ಗಮನ ಬೇರೆಡೆ ಸೆಳೆದು ದುಷ್ಕರ್ಮಿಗಳು ಒಂದೂವರೆ ಲಕ್ಷ ರು. ಮೌಲ್ಯದ ಚಿನ್ನದ ಸರ ಕಸಿದುಕೊಂಡು ಹೋಗಿರುವ ಘಟನೆ ಪಟ್ಟಣದಲ್ಲಿ ಹಾಡಹಗಲೇ ನಡೆದಿದೆ. ಪಟ್ಟಣದ ಪಲವತಿಮ್ಮನಹಳ್ಳಿ ಬಡಾವಣೆಯ ಜೆಡಿಎಸ್ ಮುಖಂಡ ರಾಮಚಂದ್ರ ತಾಯಿ ಗಂಗಮ್ಮರ ಗಮನ ಬೆರೆಡೆ ಸೆಳೆದು ದುಷ್ಕರ್ಮಿಗಳು ಚಿನ್ನದ ಸರ ಕಸಿದುಕೊಂಡು ಹೋಗಿದ್ದು, ಬುಧವಾರ ಮಧ್ಯಾಹ್ನ 12ರ ವೇಳೆ ಅಪರಿಚಿತ ಯುವತಿ ಹಾಗೂ ಯುವಕನೊಬ್ಬ ಮಹಿಳೆಗೆ ಡಿಕ್ಕಿ ಹೊಡೆದು ನಂತರ ಮಹಿಳೆಯನ್ನು ಸಮಾಧಾನಪಡಿಸುವಾಗ ಆಕೆ ಗಮನ ಇತರೇ ಕಡೆ ವಾಲುವಂತೆ ಮಾಡಿ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. ಇತ್ತೀಚೆಗೆ ಇಂತಹ ಪ್ರಕರಣಗಳು ನಡೆದಿರಲಿಲ್ಲ ಈಗ ಮತ್ತೆ ಮರುಕಳಿಸುತ್ತಿರುವುದರಿಂದ ನಾಗರಿಕರು ಒಂಟಿಯಾಗಿ ಓಡಾಡಲು ಹಿಂಜರಿಯುವಂತಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗಾಂಜಾ: ಮಹಿಳೆ ಬಂಧನ: ಪಟ್ಟಣದಿಂದ ಬಲಮಂದೆ ಗ್ರಾಮಕ್ಕೆ ಬಸ್ಸೊಂದರಲ್ಲಿ 5 ಕೆಜಿ ಗಾಂಜಾವನ್ನು ಚೀಲದಲ್ಲಿ ಇಟ್ಟುಕೊಂಡು ಹೋಗುವ ವೇಳೆ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಬಸ್ನಲ್ಲಿದ್ದ ಮಹಿಳೆಯನ್ನು ಮಾಲು ಸಮೇತ ಕಾಮಸಮುದ್ರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಹಿಳೆ ಬಲಮಂದೆ ಗ್ರಾಮದ ಭೂಲಕ್ಷ್ಮಮ್ಮ. ಈಕೆ ಹಲವು ವರ್ಷಗಳಿಂದ ಗಾಂಜಾ ಮಾರಾಟದಲ್ಲಿ ತೊಡಗಿದ್ದಳು ಎನ್ನಲಾಗಿದೆ. ಆದರೆ ಈ ಮಹಿಳೆಗೆ ಎಲ್ಲಿಂದ ಸರಬರಾಜಾಗುತ್ತಿತ್ತು ಎಂಬುದು ಮಾತ್ರ ಇನ್ನೂ ನಿಗೂಢವಾಗಿಯೇ ಇದೆ.