ವಿಕಲಚೇತನರಿಗೆ ಪ್ರೋತ್ಸಾಹ ನೀಡಿ
ಕೆಜಿಎಫ್: ವಿಕಲಚೇತನರು ಕೊರಗನ್ನು ಪಕ್ಕಕ್ಕಿಟ್ಟು ಎಲ್ಲರಂತೆ ಜೀವಿಸಲು ಮುಂದಾಗುತ್ತಿರುವ ನಿಟ್ಟಿನಲ್ಲಿ ಎಲ್ಲಾ ಜನಸಾಮಾನ್ಯರು ಅವರೊಂದಿಗೆ ಕೈಜೊಡಿಸಿ ಅವರ ಯಶಸ್ಸಿಗೆ ಪಣ ತೊಡಬೇಕಾಗಿದೆ ಎಂದು ಕೆಜಿಎಫ್ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಆರ್.ಪಿ. ನಂದೀಶ್ ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಕೆಜಿಎಫ್ ವಲಯ ವತಿಯಿಂದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಆಯೋಜಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ವಿಕಲಚೇತನರು ತಮ್ಮಲ್ಲಿರುವ ಪ್ರತಿಭೆ ಹೊರತರಬೇಕು ಎಂದು ತಿಳಿಸಿದರು. ನ್ಯಾಯಾಧೀಶರಾದ ಬಸವರಾಜು ಮಾತನಾಡಿ, ವಿಕಲಚೇತನರು ಇತ್ತೀಚೆಗೆ ಜನಸಾಮಾನ್ಯರು ಮಾಡಲು ಸಾಧ್ಯವಾಗ ಸಾಧನೆಗಳನ್ನು ಮಾಡುತ್ತಿದ್ದಾರೆ ಎಂದರು. ಅಂಗವಿಕಲರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರುಯೋಜನೆಗಳನ್ನು ಜಾರಿಗೊಳಿಸಿದೆ. ಪ್ರತಿಯೊಬ್ಬ ವಿಕಲಚೇತನರು ಇದರ ಸದುಪಯೋಗ ಪಡೆಯಲು ಮುಂದಾಗಬೇಕು ಎಂದು ತಿಳಿಸಿದರು.
ಈ ವೇಳೆ ಕೆಜಿಎಫ್ ಕ್ಷೇತ್ರದ ವಿವಿಧ ಕಡೆಗಳಿಂದ ಅಂಗವಿಕಲರು ಬಂದಿದ್ದು ಅವರ ಕುಂದುಕೊರತೆಗಳನ್ನು ವೇದಿಕೆಯ ಮೇಲಿದ್ದ ಮುಖಂಡರಲ್ಲಿ ತಿಳಿಸಿದರು. ಈ ವೇಳೆ ವಿಕಲಚೇತನ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಕೆಜಿಎಫ್ ಸಿವಿಲ್ ನ್ಯಾಯಾಲಯದ ಸರ್ಕಾರಿ ವಕೀಲಜಗದೀಶ್ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ. ಕೃಷ್ಣಮೂರ್ತಿ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಮುಖ್ಯಸ್ಥರು, ಶಾಲಾ ಕಾಲೇಜುಗಳ ಉಪನ್ಯಾಸಕರು, ಶಿಕ್ಷಕರು ಸೇರಿದಂತೆ ವಿದ್ಯಾರ್ಥಿಗಳು ಪೋಷಕರು ಭಾಗವಹಿಸಿದ್ದರು.