ಹಕ್ಯುಚ್ಯುತಿಗೆ ಹೆದರಿ ಹೋರಾಟದಿಂದ ಹಿಂದೆ ಸರಿಯಲ್ಲ: ಎಸ್.ಆರ್. ಹಿರೇಮಠ
ಬೆಂಗಳೂರು: ತಮ್ಮ ವಿರುದ್ಧ ಹಕ್ಕು ಚ್ಯುತಿ ಬೆದರಿಕೆ ಹಾಕಿದರೆ, ತಾವು ಹೆದರಿ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖಂಡ ಎಸ್.ಆರ್.ಹಿರೇಮಠ್ ಸ್ಪಷ್ಟಪಡಿಸಿದ್ದಾರೆ.
ಬೆಳಗಾವಿ ಅಧಿವೇಶನದಲ್ಲಿ ತಮ್ಮ ವಿರುದ್ಧ ಹಕ್ಕು ಚ್ಯುತಿ ಮಂಡಿಸುವ ಶಾಸಕ ರಮೇಶ್ಕುಮಾರ್ ಅವರ ಪ್ರಸ್ತಾವನೆಗೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಯಿಸಿದ ಅವರು, ಹಕ್ಕುಚ್ಯುತಿಯನ್ನು ಯಾವ ಕಾರಣಕ್ಕಾಗಿ ಮಂಡಿಸಲಾಗುತ್ತಿದೆ ಎಂಬುದನ್ನು ಸ್ಪಷ್ಟಪಡಿಸಲಿ. ಇಂತಹ ಬೆದರಿಕೆಗಳಿಗೆ ತಾವು ಅಂಜುವುದಿಲ್ಲ. ಭ್ರಷ್ಟಾಚಾರದ ವಿರುದ್ಧ ಹೋರಾಟ ನಿಲ್ಲಿಸುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ರಮೇಶ್ಕುಮಾರ್ ಅವರು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿರುವ ಅರಣ್ಯ ಭೂಮಿಗಳ ಕುರಿತ ದಾಖಲೆಗಳನ್ನು ಬಿಡುಗಡೆ ಮಾಡಿದರು. ಕೋಲಾರದ ಶ್ರೀನಿವಾಸಪುರ ತಾಲೂಕಿನ ಹೊಸಹುಡ್ಯಾ ಗ್ರಾಮದ ಜಿನಗಲಕುಂಟೆ ಅರಣ್ಯದ ಸರ್ವೆ ಸಂಖ್ಯೆ 1ರಲ್ಲಿ 9 ಎಕರೆ 10 ಗುಂಟೆ, ಸರ್ವೆ ಸಂಖ್ಯೆ 2ರಲ್ಲಿ 52 ಎಕರೆ 29 ಗುಂಟೆ ಸೇರಿ 61 ಎಕರೆ 39 ಗುಂಟೆ ಅರಣ್ಯ ಭೂಮಿಯನ್ನು ರಮೇಶ್ಕುಮಾರ್ ಸ್ವಾಧೀನಪಡಿಸಿಕೊಂಡಿದ್ದಾರೆ. ಇದನ್ನು ತೆರವುಗೊಳಿಸುವಂತೆ ಈಗಾಗಲೇ ಅರಣ್ಯ ಸಂರಕ್ಷಣಾಧಿಕಾರಿಗಳು ರಮೇಶ್ಕುಮಾರ್ ಅವರಿಗೆ ನಿರ್ದೇಶನ ನೀಡಿದ್ದರು. ಈ ಸಂಬಂಧ ಸಂಪೂರ್ಣ ದಾಖಲೆಗಳು ತಮ್ಮ ಬಳಿ ಇವೆ. ತಾವು ದಾಖಲೆಗಳಿಲ್ಲದೆ ಆರೋಪಗಳನ್ನು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.