ಆನ್‌ಲೈನ್ ಅವ್ಯವಸ್ಥೆ
ಮುಳಬಾಗಲು: ಅನ್ ಲೈನ್‌ನಲ್ಲಿಯೇ ಫಲಾನುಭವಿಗಳಿಗೆ ಸೌಲಭ್ಯ ನೀಡಬೇಕಿದ್ದು, ಅನ್ ಲೈನ್ ವ್ಯವಸ್ಥೆ ಇನ್ನು ಪೂರ್ಣವಾಗಿ ಜಾರಿಗೆ ಬಾರದ ಕಾರಣ ಹಲವಾರು ಯೋಜನೆಗಳು ಫಲಾನುಭವಿಗಳಿಗೆ ಸಿಗದ ಕುರಿತು ತಾಪಂ ಕಚೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಚರ್ಚೆಗೆ ಗ್ರಾಸವಾಯಿತು.
ತಾಪಂ ಅಧ್ಯಕ್ಷೆ ಸುಬ್ಬಮ್ಮ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ, ಸಮಾಜ ಕಲ್ಯಾಣ ಮತ್ತು ಹಿಂದುಳಿದವರ್ಗಗಳ ಹಾಸ್ಟೆಲ್ ಮುಖ್ಯಸ್ಥರು, ಯಾವುದೇ ಹಣಕಾಸಿನ ನೆರವು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಉಳಿತಾಯ ಖಾತೆಗೆ ಹೋಗಬೇಕು ಎನ್ನುವುದು ನಿಯಮ, ಆದರೆ ಹಲವಾರು ಮಂದಿ ವಿದ್ಯಾರ್ಥಿಗಳು ಬ್ಯಾಂಕ್‌ನಲ್ಲಿ ಖಾತೆ ಹೊಂದಿಲ್ಲ, ಇದಕ್ಕೆ ಒಂದು ಕಡೆ ವಿದ್ಯಾರ್ಥಿಗಳ ನಿರ್ಲಕ್ಷ್ಯ ಕಾರಣವಾದರೇ ಮತ್ತೂಂದು ಕಡೆ ಬ್ಯಾಂಕ್‌ಗಳು ವಿದ್ಯಾರ್ಥಿಗಳ ಖಾತೆ ತೆರೆಯಲು ತೋರಿಸುತ್ತಿರುವ ನಿರ್ಲಕ್ಷ್ಯ ಕಾರಣವಾಗಿದೆ ಎಂದು ಸಭೆಯಲ್ಲಿ ದೂರಲಾಯಿತು.
ತಾಪಂ ಕಾರ್ಯನಿರ್ವಹಣಾಧಿಕಾರಿ ಅರುಣಕುಮಾರ್ ಮಾತನಾಡಿ, ತಾವು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ಗಳವರನ್ನು ಸಂಪರ್ಕಿಸಿ ಡಿ.10,11,12 ನೇ ದಿನಾಂಕಗಳಂದು ತಾಲೂಕಿನ ಮೂವತ್ತು ಗ್ರಾಪಂ ಕೇಂದ್ರಗಳಿಗೂ ಬ್ಯಾಂಕ್ ಸಿಬ್ಬಂದಿ ಭೇಟಿ ನೀಡಲಿದ್ದು ಅಂದು ಎಲ್ಲಾ ವಿದ್ಯಾರ್ಥಿಗಳು ಖಾತೆ ತೆರೆಯುವಂತೆ ನೋಡಿಕೊಳ್ಳಲು ಶಿಕ್ಷಕರಿಗೆ ಸೂಚಿಸಲು ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ತಾಖೀತು ಮಾಡಿದರು.
ತಾಲೂಕಿನಲ್ಲಿ 424 ಅಂಗನವಾಡಿ ಕೇಂದ್ರಗಳಿದ್ದು 90 ಕಡೆ ನಿವೇಶನ ಹೊಂದಿದ್ದರೆ ಅಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಲು ಪ್ರಸ್ತಾವನೆ ಕಳುಹಿಸಿರುವುದಾಗಿ ತಿಳಿಸಿದರು. ರಾಜೀವ್ ಗಾಂಧಿ ವಸತಿ ಯೋಜನೆಯಡಿ ಅಂಗನವಾಡಿಗಳಿಗೆ ಕಟ್ಟಡ ನಿರ್ಮಿಸುವುದಾಗಿ ವಿವರ ಪಡೆದುಕೊಂಡು ಹೋದ ಅವರು ಇದುವರೆವಿಗೂ ಇತ್ತಕಡೆ ನೋಡಿಲ್ಲವೆಂದು ರಾಮಪ್ಪ ಸಭೆಗೆ ಮಾಹಿತಿ ನೀಡಿದರು. ತಾಲೂಕಿನಲ್ಲಿ ಇನ್ನು ಜಾನುವಾರುಗಳ ಕಾಲುಬಾಯಿ ಜ್ವರ ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲು ಸಾಧ್ಯವಾಗಿಲ್ಲವೆಂದು ಪಶುಪಾಲನೆ ಸಹಾಯಕ ನಿರ್ದೇಶಕ ಡಾ. ರಮಾನಂದ್ ತಿಳಿಸಿದರು. ಸಭೆಯಲ್ಲಿ ಸಾಮಾಜಿಕ ಅರಣ್ಯ, ತೋಟಗಾರಿಕೆ ಇತರೆ ಇಲಾಖೆಗಳ ಕಾರ್ಯಗಳನ್ನು ಸಮೀಕ್ಷಿಸಲಾಯಿತು. ತಾಪಂ ಅಧಿಕಾರಿ ಶ್ರೀನಿವಾಸ್ ಇದ್ದರು.