ಪ್ರಸೂತಿ ತಜ್ಞರ ಕೊರತೆ; ಗರ್ಭಿಣಿ ಸಾವು
ಚಿಕ್ಕಬಳ್ಳಾಪುರ: ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞರಿಲ್ಲದ ಕಾರಣ ಗರ್ಭಿಣಿಯೊಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ನಗರದಲ್ಲಿ ಸಂಭವಿಸಿದೆ.
ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞರ ಕೊರತೆ ಇದೆ. ಇದರಿಂದ ದಿಢೀರನೇ ಹೆರಿಗೆ ನೋವು ಬಂದಾಗ ಗರ್ಭಿಣಿಯರು ತುಂಬಾ ಸಮಸ್ಯೆ ಅನುಭವಿಸುತ್ತಿದ್ದಾರೆ ಎನ್ನುವುದನ್ನು ಗಮನಕ್ಕೆ ತರುತ್ತಿದ್ದರೂ ಜನರ ಅಳಲನ್ನು ಜಿಲ್ಲಾಡಳಿತವಾಗಲಿ ಅಥವಾ ಸರ್ಕಾರವಾಗಲಿ ಕೇಳಿಸಿಕೊಳ್ಳದ ಕಾರಣ ಇದೀಗ ಗರ್ಭಿಣಿಯೊಬ್ಬಳು ಬಲಿಯಾಗಿದ್ದಾಳೆ.
ಗುಡಿಬಂಡೆ ತಾಲೂಕಿನ ಕಾಟೇನಹಳ್ಳಿಯ ವೀಣಾ (32) ಎಂಬ ಮಹಿಳೆಯೇ ಜಿಲ್ಲಾಡಳಿತ ಮತ್ತು ಸರ್ಕಾರದ ನಿರ್ಲಕ್ಷ್ಯಕ್ಕೆ ಬಲಿಯಾದ ಗರ್ಭಿಣಿ. ಹೆರಿಗೆ ನೋವು ಕಾಣಿಸಿಕೊಂಡ ತಕ್ಷಣ ಮೂರು ಆಸ್ಪತ್ರೆಗಳಿಗೆ ಅಲೆದರೂ ಪ್ರಸೂತಿ ತಜ್ಞರಿಲ್ಲದಿರುವುದು ಆಕೆಯ ಪ್ರಾಣಪಕ್ಷಿ ಹಾರಿ ಹೋಗಲು ಕಾರಣವಾಗಿದೆ.
ಘಟನೆ ಹಿನ್ನೆಲೆ: ಗ್ರಾಮದ ಮಹೇಶ್ ಅವರ ಪತ್ನಿ ವೀಣಾಗೆ ಹೊಟ್ಟೆ ನೋವು ಬುಧವಾರ ರಾತ್ರಿ 10 ಗಂಟೆಗೆ ಹೆಚ್ಚಾಗಿದೆ. ತಕ್ಷಣ ಮನೆಯವರು ಆಟೋದಲ್ಲಿ ಕಷ್ಟಪಟ್ಟು ಸಮೀಪದ ಮಿಟ್ಟೇಮರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದಾರೆ. ಆದರೆ, ಅಲ್ಲಿ ಪ್ರಸೂತಿ ತಜ್ಞರಿರಲಿಲ್ಲ. ಇದರಿಂದ ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಅಲ್ಲಿಂದ ವಾಪಸ್ಸಾಗಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಬಂದಿದ್ದು, ಅಲ್ಲೂ ಪ್ರಸೂತಿ ತಜ್ಞರ ಸಮಸ್ಯೆ ಎದುರಾಗಿದೆ. ಬೇಸರಗೊಂಡ ವೀಣಾ ಪೋಷಕರು, ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಇಲ್ಲೂ ಅದೇ ಸಮಸ್ಯೆ ಕಾಡಿದೆ. ಇನ್ನೂ ನೋವು ತೀವ್ರಗೊಳ್ಳುತ್ತಿದ್ದಂತೆ ಬೇರೆ ದಾರಿಯಿಲ್ಲದೇ ಸ್ಥಳೀಯ ಖಾಸಗೀ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಖಾಸಗಿ ಆಸ್ಪತ್ರೆಗೆ ಬರುತ್ತಿದ್ದಂತೆ ಚಿಂತಾಜನಕ ಸ್ಥಿತಿಯಲ್ಲಿದ್ದ ವೀಣಾ ಹೆರಿಗೆ ನೋವು ತಾಳಲಾರದೇ ಮೃತಪಟ್ಟಿದ್ದಾಳೆ. ಆಸ್ಪತ್ರೆಯ ವೈದ್ಯರು ಸಿಜೇರಿಯನ್ ಮಾಡಿ ಮಗುವನ್ನು ಹೊರ ತೆಗೆದಿದ್ದು ಮಗುವೂ ಸಾವನ್ನಪ್ಪಿದೆ.
ಪ್ರಸೂತಿ ಸಮಸ್ಯೆ: ಜಿಲ್ಲೆಯ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರಸೂತಿ ತಜ್ಞರ ಸಮಸ್ಯೆ ಪ್ರಮುಖವಾಗಿ ಕಾಡುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಶ್ರೂಷಕಿಯರು ಹೆರಿಗೆ ಮಾಡಿಸುವ ಜವಾಬ್ದಾರಿ ನಿರ್ವಹಿಸುತ್ತಿದ್ದರೂ ಗಂಭೀರ ಪ್ರಕರಣಗಳಲ್ಲಿ ಕೈ ಚೆಲ್ಲುತ್ತಿದ್ದಾರೆ. ಅಲ್ಲದೇ ಬಹುತೇಕರು ರಿಸ್ಕ್ ತೆಗೆದುಕೊಳ್ಳುತ್ತಿಲ್ಲ. ಈ ಹಿನ್ನೆಲೆಯಲ್ಲಿ ತಾಲೂಕು ಅಥವಾ ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಗರ್ಭಿಣಿಯರನ್ನು ಪೋಷಕರು ಹೆಚ್ಚಿಗೆ ಕರೆದುಕೊಂಡು ಬರುತ್ತಿದ್ದು, ಇಲ್ಲಿ ಪ್ರಸೂತಿ ತಜ್ಞರ ಸೇವೆ ಸಮರ್ಪಕವಾಗಿ ದೊರೆಯುತ್ತಿಲ್ಲ. ಜಿಲ್ಲಾ ಕೇಂದ್ರದಲ್ಲಿರುವ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಪ್ರಸೂತಿ ತಜ್ಞರ ಸೇವೆ ಲಭ್ಯವಿದ್ದು ಚಿಂತಾಮಣಿ ಮತ್ತು ಶಿಡ್ಲಘಟ್ಟ ತಾಲೂಕು ಆಸ್ಪತ್ರೆಯಿಂದ ಪ್ರಸೂತಿ ತಜ್ಞರು ದಿನ ಬಿಟ್ಟು ದಿನ ಬಂದು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಒತ್ತಡ, ಅಸಮರ್ಪಕ ಹೊಂದಾಣಿಕೆಯಿಂದ ಗರ್ಭಿಣಿಯರು ತೊಂದರೆ ಅನುಭವಿಸುತ್ತಿದ್ದು ಇವರನ್ನು ಇಲ್ಲಿಂದ ಬೆಂಗಳೂರಿನ ವಾಣಿ ವಿಲಾಸ್ ಆಸ್ಪತ್ರೆಗೆ ಕಳುಹಿಸುವ ಕೆಲಸ ಹೆಚ್ಚಿಗೆ ನಡೆಯುತ್ತಿದೆ. ಇಲ್ಲಿನ ಖಾಸಗೀ ಆಸ್ಪತ್ರೆಗಳಿಗೆ ತೆರಳಿ ಬಹುತೇಕರು ಸಾವಿರಾರು ರುಪಾಯಿ ಖರ್ಚು ಮಾಡಿ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಇದೆಲ್ಲದರ ನಡುವೆ ಜಿಲ್ಲಾಡಳಿತ, ಜನಪ್ರತಿನಿಧಿಗಳು ಸರ್ಕಾರಿ ಆಸ್ಪತ್ರೆ ಸಮಸ್ಯೆಗಳ ಬಗ್ಗೆ ಕೇವಲ ಮಾತುಗಳನ್ನು ಹೇಳಿಕೊಂಡು ಕಾಲ ತಳ್ಳುತ್ತಿದ್ದು ಬಡಜನರು ಮಾತ್ರ ಸಂಕಷ್ಟಕ್ಕೀಡಾಗುತ್ತಿದ್ದಾರೆ.