ವರದಕ್ಷಿಣೆ ಕಿರುಕುಳದಿಂದ ಗೃಹಿಣಿ ಆತ್ಮಹತ್ಯೆ: ದೂರು
ಶಿಡ್ಲಘಟ್ಟ: ವರದಕ್ಷಿಣೆ ಕಿರುಕುಳ ತಾಳಲಾರದೆ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಅಗಲಗುಕರ್ ಗ್ರಾಮದಲ್ಲಿ ನಡೆದಿದೆ. ಮೂಲತಃ ದೇವನಹಳ್ಳಿ ತಾಲೂಕಿನ ಕುರುಬನಕುಂಟೆ ಗ್ರಾಮದ ಮುನಿಯಪ್ಪನವರ ಪುತ್ರಿ ಗಾಯಿತ್ರಿ (24) ಆತ್ಮಹತ್ಯೆಗೆ ಶರಣಾದವರು. ಗಾಯಿತ್ರಿಯನ್ನು ತಾಲೂಕಿನ ಅಗಲಗುಕರ್ ಗ್ರಾಮದ ಗಂಗರೆಡ್ಡಿ ಎಂಬಾತನೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಕಳೆದ ಐದು ವರ್ಷಗಳ ಹಿಂದೆ ನಡೆದ ಮಧುವೆ ಸಂದರ್ಭದಲ್ಲಿ ವಧುವಿಗೆ ಚಿನ್ನಾಭರಣಗಳನ್ನು ನೀಡಲಾಗಿತ್ತು. ದಂಪತಿಗೆ ಒಬ್ಬ ಪುತ್ರಿ ಇದ್ದು ಪತಿ ಗಂಗರೆಡ್ಡೆಯಿಂದ ದೈಹಿಕ ಹಾಗೂ ಮಾನಸಿಕ ಕಿರುಕುಳ ತಾಳಲಾರದೇ ತಮ್ಮ ಪುತ್ರಿ ಗಾಯಿತ್ರಿ ಮೃತಪಟ್ಟಿದ್ದಾಳೆ ಎಂದು ಈಕೆಯ ತಂದೆ ಮುನಿಯಪ್ಪ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.