ಸಂಗೀತದಿಂದ ಮನಸ್ಸಿನ ಏಕಾಗ್ರತೆ ಸಾಧ್ಯ: ಶ್ರೀನಿವಾಸ್
ಶಿಡ್ಲಘಟ್ಟ: ಸಂಗೀತವು ಮನಸ್ಸಿನ ಚಂಚಲತೆಯನ್ನು ಹಿಡಿದಿಡುತ್ತದೆಯಷ್ಟೇ ಅಲ್ಲದೇ ಏಕಾಗ್ರತೆಯನ್ನು ಬೆಳೆಸುತ್ತದೆ.ನಿತ್ಯವೂ ಸಂಗೀತವನ್ನು ಕೇಳುವ ಹವ್ಯಾಸವನ್ನು ರೂಢಿಸಿಕೊಳ್ಳುವಂತೆ ಕರ್ನಾಟಕ ಕಲಾಶ್ರೀ ಪ್ರಶಸ್ತಿ ವಿಜೇತ ಎಸ್.ವಿ. ಶ್ರೀನಿವಾಸ್ ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಾಂಸ್ಕೃತಿಕ ಸೌರಭ ಕಾರ್ಯಕ್ರಮದಡಿ ಪಟ್ಟಣದ ಉಲ್ಲೂರುಪೇಟೆಯ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈಗಿನ ಕಾಲದಲ್ಲಿ ಸಂಗೀತದ ಆವಿಷ್ಕಾರದ ನೆಪದಲ್ಲಿ ಮನಸ್ಸನ್ನು ಉದ್ರೇಕಿಸುವ, ಮನಶಾಂತಿಯನ್ನು ಕದಡುವ ಸಂಗೀತ ಹೆಚ್ಚುತ್ತಿದೆ. ಇದನ್ನು ಆರಾದಿಸುವ, ಆಸ್ವಾದಿಸುವವರ ಸಂಖ್ಯೆಯೂ ಹೆಚ್ಚುತ್ತಿರುವುದು ಆತಂಕಕಾರಿ ವಿಷಯ ಎಂದರು.
ಸಂಗೀತವು ಕೇವಲ ಕಿವಿಗೆ ಇಂಪನ್ನು ನೀಡುವುದು ಮಾತ್ರವಲ್ಲ. ಮನಸ್ಸಿನ ಚಂಚಲತೆಯನ್ನು ನಿಗ್ರಹಿಸುವ ಶಕ್ತಿಯೂ ಸಂಗೀತಕ್ಕಿದೆ. ಹಾಗಾಗಿ ಈ ಮಾನವ ಸಂಕುಲ ಹುಟ್ಟಿದಾಗಿನಿಂದಲೂ ಸಂಗೀತಕ್ಕೆ ಹೆಚ್ಚಿನ ಮಾನ್ಯತೆ ಇದೆ ಎಂದು ಹೇಳಿದರು.
ಸಂಗೀತ ಎಂದರೆ ಸಿನಿಮಾದ ಹಾಡುಗಳು ಮಾತ್ರ ಎನ್ನುವ ಕಲ್ಪನೆ ಯುವ ಜನಾಂಗದಲ್ಲಿದ್ದು ಆ ಭಾವನೆಯನ್ನು ಬಿಡಬೇಕು. ಸಂಗೀತಕ್ಕೆ ನಿರ್ಜೀವ ವಸ್ತುವಿಗೂ ಜೀವ ತುಂಬುವ ಶಕ್ತಿ ಇದೆ ಎಂದು ಬಲ್ಲವರು ಹೇಳುತ್ತಾರೆ. ಹಾಗಾಗಿ ಪ್ರತಿಯೊಬ್ಬರೂ ಸಂಗೀತವನ್ನು ಕೇಳುವ ಅಭ್ಯಾಸವನ್ನು ರೂಢಿಸಿಕೊಂಡು ಜೀವನದ ಜಂಜಾಟದಿಂದ ಮುಕ್ತಿ ಪಡೆದು ಶಾಂತಿಪ್ರಿಯರಾಗಬೇಕೆಂದು ಹೇಳಿದರು.
ವಯೋಲಿನ್ ವಾದಕ ವಿದುಷಿ ಆರ್.ಜಗದೀಶ್, ಮೃದಂಗ ವಾದಕ ವಿದುಷಿ ಷಣ್ಮುಗಾನಂದ, ಖಂಜಿರ ವಾದಕ ವಿದುಷಿ ನಾರಾಯಣಸ್ವಾಮಿ ಹಾಗೂ ಘಟಂ ವಾದಕ ವಿದುಷಿ ಲಕ್ಷ್ಮಿನಾರಾಯಣ ತಂಡ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿತು. ಸಂಗೀತ ವಿದುಷಿ ಮಂಜುಳ, ಎಸ್.ವಿ. ನಾರಾಯಣಸ್ವಾಮಿ, ತಿಪ್ಪಣ್ಣ ಇನ್ನಿತರರು ಉಪಸ್ಥಿತರಿದ್ದರು.