ಸಮ್ಮೇಳನಕ್ಕೆ ಸರ್ಕಾರಿ ಶಾಲೆಗಳ ನಿರಾಸಕ್ತಿ
ಕೋಲಾರ: ಹಲವು ಕೊರತೆಗಳ ನಡುವೆಯೂ ಜಿಲ್ಲಾ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಮುಕ್ತಾಯಗೊಂಡಿರುವುದಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನನವರು ಸಮಾಧಾನ ವ್ಯಕ್ತಪಡಿಸಿದ್ದಾರೆ. ಗಡಿ ಪ್ರದೇಶದವಾದ ಕೆಜಿಎಫ್ನಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ ಅರ್ಥಪೂರ್ಣವಾಗಿ ನಡೆಯಬೇಕೆಂಬ ಉದ್ದೇಶದಿಂದ ಕಳೆದ ಎರಡು ತಿಂಗಳಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕೆಜಿಎಫ್ ವಿಶೇಷ ಘಟಕದಿಂದ ತಯಾರಿ ನಡೆಸಲಾಗಿತ್ತು. ಸಮ್ಮೇಳನಕ್ಕೆ ಕೆಜಿಎಫ್ ಸೇರಿದಂತೆ ಸುತ್ತಮುತ್ತಲ ಕನ್ನಡ ಶಾಲೆಗಳಿಂದ ಅದರಲ್ಲೂ ವಿಶೇಷವಾಗಿ ಸರ್ಕಾರಿ ಶಾಲೆಗಳಿಂದ ಮಕ್ಕಳು ಹೆಚ್ಚಿ ಸಂಖ್ಯೆಯಲ್ಲಿ ಸೇರಿಸಬೇಕೆಂಬ ಉದ್ದೇಶವನ್ನು ಸಂಘಟಕರು ಹೊಂದಿದ್ದರು. ಆದರೆ, ಶಾಲೆಗಳ ಮುಖ್ಯಸ್ಥರು ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳ ಅಸಹಕಾರದಿಂದ ಆಸೆ ಕೈಗೂಡಲಿಲ್ಲ. ಈ ಕಾರಣದಿಂದ ಕಳೆಗುಂದಬಾರದೆಂದು ಸಂಘಟಕರು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಮೊರೆ ಹೋಗಿದ್ದರಿಂದ ಕನ್ನಡ ಸಂಘದ ಸಭಾಂಗಣ ಭರ್ತಿ ಆಗುವಂತಾಯಿತು.
ಪುಸಕ್ತ ವ್ಯಾಪಾರಿಗಳ ಗೋಳು: ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಒಂದಿಷ್ಟು ಪುಸಕ್ತಗಳು ಮಾರಾಟವಾಗಬಹುದೆಂದು ಗುಂಟು ಮೂಟೆಯೊಂದಿಗೆ ಬಂದಿದ್ದ ವ್ಯಾಪಾರಿಗಳು ಪುಸಕ್ತಗಳ ಮಾರಾಟವಾಗದೆ ಗೋಳಾಡಿದರು. ಮಾಮೂಲಿನಂತೆ ನಮ್ಮ ಜಾಗದಲ್ಲಿ ವ್ಯಾಪಾರ ಮಾಡಿದ್ರೆ 200 ರಿಂದ 250 ರು.ಸಂಪಾದನೆ ಆಗುತ್ತಿತ್ತು. ಮಕ್ಕಳು ಪುಸಕ್ತ ಖರೀದಿಸುತ್ತಾರೆಂಬ ಆಸೆಯಿಂದ ಬಂದು ನಿರಾಸೆಯಿಂದ ಹೋಗಬೇಕಾಗಿದೆ ಎಂದು ವ್ಯಾಪಾರಿಗಳು ತಮ್ಮ ಅಳಲು ತೋಡಿಕೊಂಡರು. ಮತ್ತೊಂದು ಕಡೆ ಖಾಸಗಿ ಶಾಲೆಯ ಮಕ್ಕಳು ಕನ್ನಡ ಪುಸಕ್ತಗಳನ್ನು ಖರೀದಿ ಮಾಡುವುದಿರಲಿ ಅದರತ್ತ ಗಮನ ನೀಡದೆ ಇಂಗ್ಲಿಷ್ ಕೃತಿಗಳ ಮೇಲೆ ಕಣ್ಣಾಯಿಸುವ ಮೂಲಕ ಇಂಗ್ಲಿಷ್ ಭಾಷೆಯ ಮೇಲೆ ಪ್ರೀತಿ ತೋರ್ಪಡಿಸಿದರು.
ಮಿಂಚಿದ ಗ್ರಾಮೀಣರು: ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಏರ್ಪಡಿಸಿದ್ದ ಕತೆ ಮತ್ತು ಕವಿ ಗೋಷ್ಠಿಯಲ್ಲಿ ಗ್ರಾಮೀಣ ಮಕ್ಕಳು ಮಿಂಚಿ ಮೆಚ್ಚುಗೆ ಗಳಿಸಿದರು. ಸಮ್ಮೇಳನಾಧ್ಯಕ್ಷೆ ರಾಜಲಕ್ಷ್ಮಿಯ ಮಾತಿನ ನಂತರ ಕತೆ ಮತ್ತು ಕವಿ ಗೋಷ್ಠಿ ನಮ್ಮೇಳನದಲ್ಲಿ ಕಂಡು ಬಂದ ಕೊರೆತಗಳನ್ನು ದೂರ ಮಾಡಿತು. ಕತೆ ಗೋಷ್ಠಿಯಲ್ಲಿ ಆರು ಮಕ್ಕಳ ಪೈಕಿ ಶ್ರೀನಿವಾಸಪುರ ತಾಲೂಕಿನ ಕಶೆಟ್ಟಹಳ್ಳಿಯ ಸರ್ಕಾರಿ ಶಾಲೆಯ ಪುಟ್ಟ ಹುಡುಗ ವಿ. ವೇಣು ಪರಿಸರ ನಾಶದ ಬಗ್ಗೆ ಹೇಳಿದ ಕತೆ ಎಲ್ಲರ ಮನ ಗೆದ್ದಿತು. ಈ ಹುಡುಗನ ಪ್ರತಿಭೆ ಮೆಚ್ಚಿ ಮನ್ವಂತರ ಪ್ರಕಾಶನದಿಂದ ಬಹುಮಾನ ಸಹ ನೀಡಲಾಯಿತು. ಕವಿಗೋಷ್ಠಿಯಂತೂ ದೊಡ್ಡವರು ನಾಚುವ ರೀತಿಯಲ್ಲಿತ್ತು. ಕವಿತೆಯ ವಿಷಯ, ಕವಿತೆ ಓದುವ ಶೈಲಿ, ಸಾಮಾಜಿಕ ಮತ್ತು ಕೌಟುಂಬಿಕ ತುಳಿತ, ನಾವು ಯಾವುದೇ ಕಾರಣಕ್ಕೂ ವೃದ್ಧಾಶ್ರಮಕ್ಕೆ ಹಿರಿಯರನ್ನು ತಳ್ಳುವುದಿಲ್ಲವೆಂಬ ಭರವಸೆ, ಪಾಶ್ಚಿಮಾನ್ಯ ಸಂಸ್ಕೃತಿ ನಮಗಲ್ಲ, ಕೆಟ್ಟ ರಾಜಕಾರಣ ಬೇಕಿಲ್ಲ, ಮಕ್ಕಳ ಹಕ್ಕು ಕಸಿಯಬೇಡಿ ಎಂಬ ಆಗ್ರಹಗಳು ಸಭೀಕರನ್ನು ಮಂತ್ರ ಮುಗ್ದರನ್ನಾಗಿಸಿತು.