ಸಮ್ಮೇಳನಾಧ್ಯಕ್ಷರ ಅದ್ಧೂರಿ ಮೆರವಣಿಗೆ
ಕೆಜಿಎಫ್: ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕೆಜಿಎಫ್ ಕನ್ನಡ ಸಂಘದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರಥಮ ಸಾಹಿತ್ಯ ಸಮ್ಮೇಳನದಲ್ಲಿ ರಾಷ್ಟ್ರ ಧ್ವಜಾರೋಹಣವನ್ನು ನಗರಸಭೆ ಪೌರಾಯುಕ್ತ ವಿ. ಬಾಲಚಂದ್ರ ಹಾಗೂ ಪರಿಷತ್ ಧ್ವಜವನ್ನು ಕನ್ನಡ ಸಾಹಿತ್ಯ ಪರಿಷತ್ ನಗರಾಧ್ಯಕ್ಷ ವೀರವೆಂಕಟಪ್ಪ ನೆರವೇರಿಸಿದರು.
ನಂತರ ನಗರದ ಗಾಂಧಿವೃತ್ತದಿಂದ ಮಕ್ಕಳ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಪಿ. ರಾಜೇಶ್ವರಿ ನೇತೃತ್ವದಲ್ಲಿ ಅದ್ಧೂರಿ ಮೆರವಣಿಗೆ ಮೂಲಕ ನಗರದ ಸೂರಜ್ಮುಲ್ ವೃತ್ತ, ಆಸ್ಪತ್ರೆ ರಸ್ತೆ ಮೂಲಕ ಹಾದು ಕನ್ನಡ ಸಂಘವನ್ನು ತಲುಪಿದರು. ಮೇರವಣಿಗೆಯಲ್ಲಿ ಜಿಲ್ಲಾಧಿಕಾರಿ ಡಿ.ಕೆ. ರವಿ ಸೇರಿದಂತೆ ಪರಿಷತ್ನ ಜಿಲ್ಲಾಧ್ಯಕ್ಷ ಜೆ.ಜಿ. ನಾಗರಾಜ್, ಕನ್ನಡ ಸಂಘದ ಅಧ್ಯಕ್ಷ ನರಸಿಂಹೇಗೌಡ ನಾರಾಣಪುರ, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಮತ್ತು ಕನ್ನಡ ಸಂಘಡ ಮುಖ್ಯಸ್ಥರು, ವಿವಿಧ ಕನ್ನಡಪರ ಸಂಘಟನೆಯ ಮುಖಂಡರು, ಕನ್ನಡಾಭಿಮಾನಿಗಳು, ವಿವಿಧ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ವಾಧ್ಯಗೋಷ್ಠಿಗಳು ಪಾಲ್ಗೊಂಡಿದ್ದರು. ಮೆರವಣಿಗೆ ವೀಕ್ಷಿಸಲು ವಿವಿಧ ಭಾಗಗಳಿಂದ ವಿವಿಧ ನಾಗರಿಕರು ಆಗಮಿಸಿ ತಮ್ಮ ಮನೆಗಳ ಮುಂದೆ ನಿಂತು ಮೆರವಣಿಗೆ ಕಂಡು ಆನಂದಿಸಿದರು.