ಅಂಬೇಡ್ಕರ್ ಆದರ್ಶಗಳನ್ನು ಮೈಗೂಡಿಸಿಕೊಳ್ಳಿ
ಕೋಲಾರ: ಸಮಾಜದಲ್ಲಿ ಪ್ರತಿಯೊಬ್ಬರಿಗೂ ಸಮಾನತೆ ಸಿಗಬೇಕೆಂಬ ನಿಟ್ಟಿನಲ್ಲಿ ಅಸಮಾನತೆ ವಿರುದ್ಧ ಹೋರಾಟ ನಡೆಸಿದ ಡಾ. ಅಂಬೇಡ್ಕರ್ ಆದರ್ಶ ಗುಣಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕೆಂದು ಸರ್ಕಾರಿ ಬಾಲಕರ ಜೂನಿಯರ್ ಕಾಲೇಜಿನ ಪ್ರಾಂಶುಪಾಲ ವೆಂಕಟಸ್ವಾಮಿ ಹೇಳಿದರು.
ನಗರದ ಸರ್ಕಾರಿ ಜೂನಿಯರ್ ಬಾಲಕರ ಕಾಲೇಜಿನಲ್ಲಿ ಪಾರಮಿತ ಅಧ್ಯಯನ ಕೇಂದ್ರ ಹಮ್ಮಿಕೊಂಡಿದ್ದ ಅಂಬೇಡ್ಕರ್ 57ನೇ ಪರಿನಿರ್ವಾಣ ದಿನಾಚರಣೆ ಅಂಗವಾಗಿ ಅಂಬೇಡ್ಕರ್ ಮತ್ತು ಜಾತಿ ನಿರ್ಮೂಲನೆ ವಿಷಯ ಆದಾರಿತ ಪ್ರಬಂಧ ಸ್ಪರ್ಧೆ ಮತ್ತು ಗೋಷ್ಟಿಯನ್ನು ಉದ್ಘಾಟಿಸಿ ಮಾತನಾಡುತ್ತಾ, ಪ್ರತಿಯೊಬ್ಬ ವ್ಯಕ್ತಿಗೂ ಸ್ವಾತಂತ್ರ್ಯ ಸಮಾನತೆ ಸಿಗುವ ಮೂಲಕ ಸಮಾಜದಲ್ಲಿ ಸಾಮಾಜಿಕವಾಗಿ, ರಾಜಕೀಯವಾಗಿ ಜಾಗೃತಿಗೊಳ್ಳಲು ಅಂಬೇಡ್ಕರ್ ಸಂವಿಧಾನವನ್ನು ರಚಿಸಿ ಸಮಾನತೆಯನ್ನು ಸಾಕಾರಗೊಳಿಸಲು ಪ್ರಯತ್ನಿಸಿದರು. ಆದರೆ ಸಮಾಜದಲ್ಲಿ ಇಂದಿಗೂ ಅಸಮಾನತೆ ಕಾಡುತ್ತಲೆ ಇದೆ ಅಸಮಾಧಾನ ವ್ಯಕ್ತಪಡಿಸಿದರು.
ಸಮಾತನೆ ಬಗ್ಗೆ ಚಿಂತನೆ, ಆಲೋಚನೆ, ಅಧ್ಯಯನ ಆಗಬೇಕಾಗಿದೆ ಎಂದ ಅವರು, ಸಂವಿಧಾನವನ್ನು ಓದಿದರೆ ಸಾಲದು ಅದನ್ನು ಪ್ರಯೋಗಿಕವಾಗಿ ತೆಗೆದುಕೊಂಡು ಸರಿಯಾದ ಮಾರ್ಗದಲ್ಲಿ ನಡೆಯಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಗಣೇಶ್ ಅಖಂಡ ಭಾರತದ ಕನಸನ್ನು ಕಂಡಿದ್ದ ಅಂಬೇಡ್ಕರ್ ಅವರ ಚಿಂತನೆಗಳನ್ನು ಭಾರತ ನಿರ್ಲಕ್ಷ್ಯ ಮಾಡುತ್ತಾ ಬರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಂಬೇಡ್ಕರ್ ಪರಿನಿರ್ವಾಣ ದಿನದಂತೆ ದಕ್ಷಿಣ ಆಫ್ರಿಕದ ಮಾಜಿ ಪ್ರಧಾನಿ ನೆಲ್ಸನ್ ಮಂಡೆಲ ನಿಧನವಾಗಿರುವುದು ಕಾಕತಳೀಯವಾಗಿದ್ದು, ಈ ಎರಡು ವ್ಯಕ್ತಿಗಳ ಆಶಯಗಳನ್ನು ಜಾರಿಗೆ ತರುವುದು ನಮ್ಮೆಲ್ಲರ ಕರ್ತವ್ಯ ಎಂದರು.
ನಗರಸಭೆ ಸದಸ್ಯ ಮುಬಾರಕ್ ಮಾತನಾಡಿ ಅಂಬೇಡ್ಕರ್ ಅವರ ಜೀವನ ಉದ್ದಕೂ ಸ್ವಾಭಿಮಾನದ ಜೀವನ ನಡೆಸಿದ್ದರು ಎಂಬುದಕ್ಕೆ ಅಂವರ ಅಂತಿಮ ದಿನಗಳೇ ಸಾಕ್ಷಿಯಾಗಿದದವು ಎಂದು ತಿಳಿಸಿದರು.ಮಹಿಳೆಯರು ಸಮಾನತೆ ಬಗ್ಗೆ ಹೋರಾಟ ಮಾಡುತ್ತಿರುವುದು ಅಂಬೇಡ್ಕರ್ ಆಶಯವಾಗಿತ್ತು. ಮೀಸಲಾತಿ ಮುಖಾಂತರ ಸಮಾಜದಲ್ಲಿ ಸಮಾನತೆಯನ್ನು ಕಾಣಲು ಅಂಬೇಡ್ಕರ್ ಹೊರಟಿದ್ದರು ಎಂದು ಹೇಳಿದರು.
ಇತಿಹಾಸ ಉಪನ್ಯಾಸಕ ಡಾ.ಶಿವಣ್ಣ ಉಪನ್ಯಾಸ ನೀಡಿ ಅಂಬೇಡ್ಕರ್ ಅವರನ್ನು ಒಂದು ವರ್ಗಕ್ಕೆ ಸೀಮಿತಗೊಳಿಸದೆ ಅವರ ವಿಚಾರಧಾರೆಗಳನ್ನು ಹರಡುವ ಮೂಲಕ ವಿಶಾಲತೆಯ ಮನೋಭಾವವನ್ನು ಬೆಳೆಸಿಕೊಳ್ಳಬೇಕು, ಸಮಾಜದಲ್ಲಿ ಇಂದು ವಿಶ್ವಮಾನವರಾಗುತ್ತಿದ್ದೇವೆ ಎಂದು ಒಂದು ಕಡೆ ಹೇಳಿದರೆ ಮತ್ತೊಂದು ಕಡೆ ಸಮಾಜವನ್ನು ಹೊಡೆದು ಜಾತಿ ಸಂಕುಚಿತ ಮನೋಭಾವಗಳನ್ನು ಗಟ್ಟಿಗೊಳಿಸುವ ಪ್ರಯತ್ನ ನಡೆಯುತ್ತಾ ಬಂದಿದೆ ಎಂದು ವಿಷಾದಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಜೆ.ಜೆ. ನಾಗರಾಜ್ ಸ್ಪರ್ಧೆಗಳಲ್ಲಿ ಗೆದ್ದವರಿಗೆ ಬಹುಮಾನ ವಿತರಿಸಿದರು. ಪಾರಮಿತ ಅಧ್ಯಯನ ಕೇಂದ್ರ ಹೂವಹಳ್ಳಿ ನಾಗರಾಜ್ ಪ್ರಾಸ್ತಾವಿಕ ಭಾಷಣ ಮಾಡಿದರು. ಖಾದಿ ಗ್ರಾಮೀಣಾಭಿವೃದ್ಧಿ ಆಯೋಗದ ಸದಸ್ಯ ಬೆಳಗಾನಹಳ್ಳಿ ಮುನಿವೆಂಕಟಪ್ಪ ಉಪಸ್ಥಿತರಿದ್ದರು. ಪಾರಮಿತ ಅಧ್ಯಯನ ಕೇಂದ್ರ ಸಲಹೆಗಾರ ಸಿ.ಎಂ. ವಿಜಯಕುಮಾರ್ ಪ್ರಾರ್ಥಿಸಿದರು. ಮಂಜುನಾಥ್ ಸ್ವಾಗತಿಸಿದರು.
ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ನಡೆದ ಡಾ. ಅಂಬೇಡ್ಕರ್ 57ನೇ ಪರಿನಿರ್ವಾಣ ದಿನಾಚರಣೆಗೆ ಜಿಲ್ಲಾದಿಕಾರಿ ಡಿ.ಕೆ.ರವಿ ಚಾಲನೆ ನೀಡಿದರು.ಜಿಲ್ಲಾರಕ್ಷಣಾಧಿಕಾರಿ ರಾವಮ್ನಿವಾಸ್ ಸಫೆಟ್, ಜಿ.ಪಂ.ಕಾರ್ಯನಿರ್ವಾಹಣಾಧಿಕಾರಿ ಜುಲ್ಫಿಕರುಲ್ಲಾ, ಎಸಿ ಮಂಜುನಾಥ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಫಯಾಜ್ ಖಾನ್ ಕ ನ್ನಡ ಮತ್ತು ಸಂಸ್ಕೃತಿ ಇಲಾಖೆ ವೆಂಕಟಾಚಲಪತಿ, ದಲಿತ ಮುಖಂಡರಾದ ಚಂದ್ರಶೇಖರ್, ವಿಜಿಕುಮಾರ್, ಕೃಷ್ಣಪ್ಪ, ನಾಗನಾಳ ಮುನಿಯಪ್ಪ ಮತ್ತಿತರರು ಇದ್ದರು.