ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಏಕಾಗ್ರತೆ ಬೆಳೆಸುವ ಶಕ್ತಿ ಸಂಗೀತಕ್ಕಿದೆ: ಶ್ರೀನಿವಾಸ್

Rashmi Kasaragodu
Updated On : 7 Dec 2013, 12:32 pm

ಶಿಡ್ಲಘಟ್ಟ: ಸಂಗೀತ ಮನಸ್ಸಿನ ಚಂಚಲತೆ ಹಿಡಿದಿಡುತ್ತದೆ. ಜೊತೆಗೆ ಏಕಾಗ್ರತೆಯನ್ನು ಬೆಳೆಸುತ್ತದೆ. ಹೀಗಾಗಿ ನಿತ್ಯ ಸಂಗೀತ ಕೇಳುವ ಹವ್ಯಾಸ ರೂಢಿಸಿಕೊಳ್ಳುವಂತೆ ಕರ್ನಾಟಕ ಕಲಾಶ್ರೀ ಪ್ರಶಸ್ತಿ ವಿಜೇತ ಎಸ್.ವಿ.ಶ್ರೀನಿವಾಸ್ ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಾಂಸ್ಕೃತಿಕ ಸೌರಭ ಕಾರ್ಯಕ್ರಮದಡಿ ಪಟ್ಟಣದ ಉಲ್ಲೂರುಪೇಟೆಯ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈಗಿನ ಕಾಲದಲ್ಲಿ ಸಂಗೀತದ ಆವಿಷ್ಕಾರದ ನೆಪದಲ್ಲಿ ಮನಸ್ಸನ್ನು ಉದ್ರೇಕಿಸುವ, ಮನಶಾಂತಿ ಕದಡುವ ಸಂಗೀತ ಹೆಚ್ಚುತ್ತಿದೆ.
ಇದನ್ನು ಆರಾಧಿಸುವ, ಆಸ್ವಾದಿಸುವವರ ಸಂಖ್ಯೆಯೂ ಹೆಚ್ಚುತ್ತಿರುವುದು ಆತಂಕಕಾರಿ ವಿಷಯ ಎಂದರು.
ಸಂಗೀತವು ಕೇವಲ ಕಿವಿಗೆ ಇಂಪು ನೀಡುವುದು ಮಾತ್ರವಲ್ಲ, ಮನಸ್ಸಿನ ಚಂಚಲತೆ ನಿಗ್ರಹಿಸುವ ಶಕ್ತಿಯೂ ಸಂಗೀತಕ್ಕಿದೆ. ಹಾಗಾಗಿ ಈ ಮಾನವ ಸಂಕುಲ ಹುಟ್ಟಿದಾಗಿನಿಂದಲೂ ಸಂಗೀತಕ್ಕೆ ಹೆಚ್ಚಿನ ಮಾನ್ಯತೆ ಇದೆ ಎಂದು ಹೇಳಿದರು.
ಸಂಗೀತ ಎಂದರೆ ಸಿನಿಮಾದ ಹಾಡುಗಳು ಮಾತ್ರ ಎನ್ನುವ ಕಲ್ಪನೆ ಯುವಜನಾಂಗದಲ್ಲಿದ್ದು ಆ ಭಾವನೆ ಬಿಡಬೇಕು. ಸಂಗೀತಕ್ಕೆ ನಿರ್ಜೀವ ವಸ್ತುವಿಗೂ ಜೀವ ತುಂಬುವ ಶಕ್ತಿ ಇದೆ ಎಂದು ಬಲ್ಲವರು ಹೇಳುತ್ತಾರೆ. ಹಾಗಾಗಿ ಪ್ರತಿಯೊಬ್ಬರೂ ಸಂಗೀತ ಕೇಳುವ ಅಭ್ಯಾಸ ರೂಢಿಸಿಕೊಂಡು ಜೀವನದ ಜಂಜಾಟದಿಂದ ಮುಕ್ತಿ ಪಡೆದು ಶಾಂತಿಪ್ರಿಯರಾಗಬೇಕೆಂದು ಹೇಳಿದರು.
ವೈಲೀನ್ ಸೋಲೋ ವಾದಕ ಆರ್.ಜಗದೀಶ್, ಮೃದಂಗ ವಾದಕ ಷಣ್ಮುಗಾನಂದ, ಖಂಜಿರ ವಾದಕ ನಾರಾಯಣಸ್ವಾಮಿ ಹಾಗೂ ಘಟಂ ವಾದಕ ಲಕ್ಷ್ಮಿನಾರಾಯಣ್ರ ತಂಡ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿತು. ಸಂಗೀತಗಾರ್ತಿ ಮಂಜುಳ, ಎಸ್.ವಿ.ನಾರಾಯಣಸ್ವಾಮಿ, ತಿಪ್ಪಣ್ಣ ಇನ್ನಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement