'ಗರ್ಭಿಣಿಯರಿಗೆ ಜಾಗೃತಿ ಮೂಡಿಸಿ'
ಕೋಲಾರ: ಗರ್ಭೀಣಿಯರಿಗೆ ಜಾಗೃತಿ ಮೂಡಿಸಿದಾಗ ವಿಕಲಚೇತನ ಮಕ್ಕಳ ಜನನ ಸಂಖ್ಯೆ ಕಡಿಮೆ ಮಾಡಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಎ. ಶಕುಂತಲ ತಿಳಿಸಿದರು.
ನಗರದ ಪದವಿ ಪೂರ್ವ ಬಾಲಕರ ಕಾಲೇಜಿನ ಆವರಣದಲ್ಲಿ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಅಂತರಗಂಗೆ ವಿದ್ಯಾ ಸಂಸ್ಥೆ ಸಹೋಗದೊಂದಿಗೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ಜನ ಜಾಗೃತಿ ಅಭಿಯಾನದಲ್ಲಿ ಪ್ರಮಾಣವಚನ ಭೋದಿಸಿ ಮಾತನಾಡಿ, ಕೋಲಾರ ಜಿಲ್ಲೆಯಲ್ಲಿ ನೀರಿನ ಸಮಸ್ಯೆ, ಗಾಳಿ ಮತ್ತು ಪರಿಸರದಿಂದ ವಿಕಲಚೇತನರ ಜನನ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಪರಿಶೋಧನೆಯಿಂದ ತಿಳಿದು ಬಂದಿರುವುದರಿಂದ ಇದನ್ನು ತಡೆಗಟ್ಟಲು ವಿಶೇಷ ಕ್ರಿಯಾಯೋಜನೆ ತಯಾರು ಮಾಡಲಾಗುತ್ತಿದೆ ಎಂದರು.
ಈ ನಿಟ್ಟಿನಲ್ಲಿ ನ್ಯಾಷನೆಲ್ ಟ್ರಸ್ಟ್ ಬಡ್ತೆ ಕದಂ ಜನ ಜಾಗೃತಿ ಅಭಿಯಾನ ಹಮ್ಮಿಕೊಂಡಿದೆ. ಅಂಗವಿಕಲರ ಮೇಲೆ ನಡೆಯುವ ಲೈಂಗಿಕ ಹಲ್ಲೆ, ಹಿಂಸೆ ಕುರಿತು ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಜಾಗೃತಿ ಅಭಿಯಾನವನ್ನು ಕಳೆದ ಮೂರು ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ವಿಕಲಚೇತನರ ನ್ಯೂನತೆ ಸ್ಥಿತಿ ಮತ್ತು ಸಮಾಜದ ನಕಾರಾತ್ಮಕ ಮನೋಭಾವಣೆಯಿಂದ ಇವರ ದೂರುಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ರೈಂಗಿಕ ಕಿರುಕುಳ ಮತ್ತು ಹಿಂಸೆಯಿಂದ ಅವರನ್ನು ರಕ್ಷಿಸಲು ಸಾಮೂಹಿಕವಾಗಿ ಅರಿವನ್ನುಂಟು ಮಾಡುವುದು ಅವಶ್ಯಕವಾಗಿದೆ ಎಂದರು. ರಾಜ್ಯ ನೋಡಲ್ ಏಜೆನ್ಸಿ ಕೇಂದ್ರದ ತುಳಸಿ, ಜಿಲ್ಲೆಯ ಕ್ಷೇತ್ರ ಮಾಹಿತಿ ಅಧಿಕಾರಿ ಅರುಣ್ಕುಮಾರ್, ಸರ್ಕಾರಿ ಕಾಲೇಜಿನ ಉಪ ಪ್ರಾಂಶುಪಾಲ ಗೋವಿಂದಪ್ಪ, ಎಚ್.ಸಿ.ನಾಗಮಣಿ ಇದ್ದರು. ಇದಕ್ಕೂ ಮುನ್ನ ಕಾಲೇಜು ಮೈದಾನದಿಂದ ಬಡ್ತೆ ಕದಂ ಜಾಗೃತಿ ಜಾಥಾಗೆ ಚಾಲನೆ ನೀಡಲಾಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ಜಾಥ ಸಂಚರಿಸಿತು.