ಗುಡಿಬಂಡೆಯಲ್ಲಿ ಅಂಬೇಡ್ಕರ್ ಮಾನವತಾವಾದಿ ಸ್ಮರಣೆ
ಗುಡಿಬಂಡೆ: ಸಂವಿಧಾನ ಶಿಲ್ಪಿ ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನಾಚರಣೆ ಪ್ರಯುಕ್ತ ಪಟ್ಟಣದ ಸಮಾಜ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ತಹಸೀಲ್ದಾರ್ ಶೈಲಜಾ ರಾಷ್ಟ್ರಕ್ಕೆ ಸಂವಿಧಾನವನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಹನೀಯ ವ್ಯಕ್ತಿಯಾದ ಅಂಬೇಡ್ಕರ್ ಆದರ್ಶಗಳು ನಮಗೆ ಮಾದರಿಯಾಗಬೇಕಾಗಿದೆ. ಶೋಷಿತ ಹಾಗೂ ಹಿಂದುಳಿದ ಜನಾಂಗದ ಕಲ್ಯಾಣಕ್ಕಾಗಿ ಶ್ರಮಿಸಿದ ಧೀಮಂತ ನಾಯಕ ಅಂಬೇಡ್ಕರ್ ಬಡತನದಲ್ಲಿ ಹುಟ್ಟಿ ಬೆಳೆದರೂ ತಮ್ಮಲ್ಲಿದ್ದ ಅಪಾರ ಪ್ರತಿಭೆಯಿಂದ ಉನ್ನತ ಸ್ಥಾನಕ್ಕೇರಿದರು. ಇಂತಹ ಮಹನೀಯರನ್ನು ಸ್ಮರಿಸುವ ಈ ದಿನ ಪವಿತ್ರವಾದದ್ದು ಎಂದರು. ರೇಷ್ಮೆ ವಿಸ್ತರಣಾಧಿಕಾರಿ ಮ.ಗ.ಹೆಗಡೆ, ಸಮಾಜ ಕಲ್ಯಾಣಾಧಿಕಾರಿ ನಜೀರ್ಸಾಬ್, ಸಿಬ್ಬಂದಿ ಲಕ್ಷ್ಮೀಪತಿ ರೆಡ್ಡಿ, ದಾಸಪ್ಪ, ಶ್ರೀರಾಮಪ್ಪ, ನಾರಾಯಣಪ್ಪ ಇದ್ದರು.
ಗುಂಪುಗಳ ನಡುವೆ ಮಾತಿನ ಚಕಮಕಿ
ಚಿಂತಾಮಣಿ: ಕೈವಾರ ಗ್ರಾಪಂ ಮುಂದೆ ಜೆಡಿಎಸ್ ಹಾಗೂ ಮಾಜಿ ಶಾಸಕ ಬೆಂಬಲಿಗರ ನಡುವೆ ಮಾತಿನ ಚಕಮಕ ನಡೆದು ಕೈ ಕೈ ಮಿಲಾಯಿಸುವ ಹಂತದಲ್ಲಿ ಪೊಲೀಸರು ಮಧ್ಯ ಪ್ರವೇಶಿಸಿ ಗುಂಪನ್ನು ಚದುರಿಸಿದ ಘಟನೆ ಶುಕ್ರವಾರ ನಡೆದಿದೆ. ತಾಲೂಕಿನ ಕೈವಾರ ಗ್ರಾಪಂ ಕಾರ್ಯಾಲಯಕ್ಕೆ ಚಿಕ್ಕಬಳ್ಳಾಪುರ ಜಿಪಂ ಯೋಜನಾಧಿಕಾರಿ ಪಂಚಾಯ್ತಿಯ ವಿವಿಧ ಕಡತಗಳನ್ನು ಪರಿಶೀಲಿಸಲು ಬಂದಾಗ ಜೆಡಿಎಸ್ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಕಳೆದ 1 ವಾರದಿಂದ ಹಾಲಿ ಶಾಸಕರ ಹಾಗೂ ಮಾಜಿ ಶಾಸಕರ ಬೆಂಬಲಿಗರ ನಡುವಿನ ಗ್ರಾಪಂನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಕುರಿತು ತನಿಖೆ ಹಾಗೂ ಪಿಡಿಒ ಅಮಾನತ್ ವಿಷಯಕ್ಕೆ ಸಂಬಂಧಿಸಿ ರಾಜಕೀಯದಾಟ ನಡೆಯುತ್ತಿದ್ದು, ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಪರಿಸ್ಥಿತಿ ಇದೆ.
ಗ್ರಾಪಂ ಅಧ್ಯಕ್ಷೆ ಲೋಕಾಯುಕ್ತ ಬಲೆಗೆ
ಮುಳಬಾಗಲು; ನೆರೇಗಾ ಯೋಜನೆಯ 7 ಲಕ್ಷ ರುಪಾಯಿ ಬಿಲ್ ಪಾವತಿ ಚೆಕ್ಗೆ ಸಹಿ ಮಾಡಲು 30 ಸಾವಿರ ರುಪಾಯಿ ಲಂಚ ಪಡೆದ ತಾಲೂಕಿನ ಮೋತಕಪಲ್ಲಿ ಗ್ರಾಪಂ ಅಧ್ಯಕ್ಷೆ ರಾಜೇಶ್ವರಿ ಕೋಲಾರ ಲೋಕಾಯುಕ್ತ ಪೊಲೀಸರಿಗೆ ಸಿಲುಕಿದ್ದಾರೆ. ಜೊತೆಗೆ ರಾಜೇಶ್ವರಿ ಸಹಾಯಕ ಅತ್ಮ ಎಂಬವನನ್ನು ಬಂಧಿಸಲಾಗಿದೆ. ಮೋತಕಪಲ್ಲಿ ವ್ಯಾಪ್ತಿಯ ಅಚಂಪಲ್ಲಿ ಗ್ರಾಮದ ರಾಜೇಶ್ವರಿ ಅವರ ತೋಟದಲ್ಲಿ ಗ್ರಾಪಂ ಸದಸ್ಯ ಕುಪ್ಪಂಪಾಳ್ಯದ ಅನಂದಬಾಬು ಅವರಿಂದ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಎಸ್ಪಿ ಮೋಹನದಾಸ್ ಮತ್ತು ಇನ್ಸ್ ಪೆಕ್ಟರ್ ಅಶ್ವಥನಾರಾಯಣ ಕೈಗೆ ಸಿಕ್ಕಿಬಿದ್ದಿದ್ದಾರೆ. ಅವರಿಂದ ಹಣ ಪಡೆದ ರಾಜೇಶ್ವರಿ ಅವರು ತಮ್ಮ ಸಹಾಯಕ ಆತ್ಮರವರಿಗೆ ಎಣಿಸಲು ಕೊಟ್ಟಿದ್ದಾರೆ. ತಕ್ಷಣ ಎಚ್ಚೆತ್ತ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಇಬ್ಬರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಮುಳಬಾಗಲು ಪ್ರವಾಸಿ ಮಂದಿರಕ್ಕೆ ಕರೆ ತಂದು ವಿಚಾರಣೆ ನಡೆಸಿದ್ದಾರೆ.
ಅನಾಥ ವೃದ್ಧ ಸಾವು
ಗುಡಿಬಂಡೆ: ಪಟ್ಟಣದ ಹೊರವಲಯದ ಅಮಾನಿಬೈರಸಾಗರ ಕೆರೆ ಬಳಿಯಿರುವ ಈಶ್ವರನ ದೇವಾಲಯದ ಆವರಣದಲ್ಲಿ ಕಳೆದ 7 ದಿನಗಳಿಂದ ನೀರು ಆಹಾರವಿಲ್ಲದೇ ಚಳಿ ಗಾಲಿಯನ್ನು ತಡೆದುಕೊಂಡು ಒಬ್ಬಂಟಿಯಾಗಿ ಮಲಗಿದ್ದ ವೃದ್ಧ ಶುಕ್ರವಾರ ಸಾವನ್ನಪ್ಪಿದ್ದಾನೆ. ಈ ವೃದ್ಧ ದೈಹಿಕವಾಗಿ ದುರ್ಬಲನಾಗಿದ್ದು, ತನ್ನ ಹೆಸರು ನರಸಿಂಹರೆಡ್ಡಿ ಮತ್ತು ನನ್ನೂರು ಪೈಯೂರು ಎಂಬುದನ್ನು ಮಾತ್ರ ಹೇಳುತ್ತಿದ್ದ, ಆದರೆ ಇಲ್ಲಿವರೆಗೂ ಆತನ ಸಂಬಂಧಿಕರು ಯಾರು ಎಂದು ಈವರೆಗೂ ತಿಳಿದಿಲ್ಲ. ಸ್ಥಳಕ್ಕೆ ಗುಡಿಬಂಡೆ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.