ಪ್ರತಿಭೆ ಪ್ರದರ್ಶಿಸಲು ಪ್ರತಿಭಾ ಕಾರಂಜಿ ಅತ್ಯಂತ ಉಪಯುಕ್ತ'
ಚಿಂತಾಮಣಿ: ಪ್ರತಿಭೆ ಪ್ರದರ್ಶಿಸಲು ಪ್ರತಿಭಾ ಕಾರಂಜಿ ಸ್ಪರ್ಧಾ ಕಾರ್ಯಕ್ರಮ ಅತ್ಯಂತ ಉಪಯುಕ್ತವಾಗಿದೆ. ಗ್ರಾಮೀಣ ಭಾಗದ ಅವಕಾಶ ವಂಚಿತ ಪ್ರತಭಾನಿತ ಮಕ್ಕಳಿಗೆ ಇದು ವರದಾನವೂ ಹೌದು ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಟಿ.ಎನ್. ರಾಜಗೋಪಾಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ತಳಗವಾರದಲ್ಲಿ ಹಮ್ಮಿಕೊಂಡಿದ್ದ 2013-14 ನೇ ಸಾಲಿನ ಸಿ.ಆರ್.ಪಿ ಮಟ್ಟದ ಪ್ರತಿಭಾ ಕಾರಂಜಿ ವಿವಿಧ ಸ್ಪರ್ಧೆಗಳು ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಅವರಲ್ಲಿರುವ ಸಾಮರ್ಥ್ಯವನ್ನು ಹೊರ ಪ್ರಪಂಚಕ್ಕೆ ತೋರಲು ಇಂತಹ ಕಾರ್ಯಕ್ರಮಗಳು ಬಹಳ ಉಪಯುಕ್ತವೆಂದು ಹೇಳಿದರು.
ಇಂದಿನ ಆಧುನಿಕ ಯುಗದಲ್ಲಿ ಶಿಕ್ಷಣ ಮಟ್ಟ ಕುಸಿಯುತ್ತಿದ್ದು, ಶಿಕ್ಷಕರು ಸರ್ಕಾರಿ ಶಾಲೆಗಳ ಉಳಿವುಗಾಗಿ ಪ್ರಾಮಾಣಿಕ ಕೆಲಸ ಮಾಡಿದಲ್ಲಿ ಮಾತ್ರ ಗ್ರಾಮಗಳ ಸರ್ಕಾರಿ ಶಾಲೆಗಳ ಹಾಜರಾತಿ ಸಂಖ್ಯೆ ಹೆಚ್ಚಲು ಸಾಧ್ಯವೆಂದು ಹೇಳದರು. ನಂತರ ಮಾತನಾಡಿದ ಪಿಡಿಓ ಅಧಿಕಾರಿ ಮಂಜುನಾಥ್ ಮಾತನಾಡುತ್ತಾ ಮಕ್ಕಳಲ್ಲಿ ಒಬ್ಬೊಬ್ಬರಲ್ಲಿ ಒಂದೊಂದು ಪ್ರತಿಭೆ ಇರುತ್ತದೆ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಇಂತಹ ಕಾರ್ಯಕ್ರಮಗಳು ಗ್ರಾಮೀಣ ಪ್ರದೇಶಗಳಲ್ಲಿ ನಡೆಸಲು ಮುಂದಾಗಬೇಕೆಂದು ಹೇಳಿದರು.
ನಂತರ ತಳಗವಾರ ಗ್ರಾಮ ಪಂಚಾಯ್ತಿ ಅಧ್ಯಕ್ಷ ನಾರಾಯಣಸ್ವಾಮಿ, ಜಿಲ್ಲಾ ಪ್ರಾಥಮಿಕ ಶಿಕ್ಷಣ ಸಂಘದ ಅಧ್ಯಕ್ಷ ಅಶೋಕ್ ರೆಡ್ಡಿ ಮತ್ತು ಯುವ ಮುಖಂಡ ಪ್ರತಾಪ್, ಇಸಿಓ ಕೃಷ್ಣಮೂರ್ತಿ ಕಾರ್ಯಕ್ರಮವನ್ನು ಕುರಿತು ಮಾತನಾಡಿದರು. ಸಿಆರ್ಪಿ ವೀಣಾ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಕವಿತಾ, ಬೀರ್ಜೇನಹಳ್ಳಿ ಶಿಕ್ಷಕ ಮುನಿರಾಜು, ಗುನ್ನಹಳ್ಳಿ ಮುಖ್ಯ ಶಿಕ್ಷಕ ರವಿ, ವೆಂಕಟಾಚಲಮೂರ್ತಿ, ಕದಿರಾಪುರ ವೀರೇಂದ್ರ, ಎಸ್ಡಿಎಂಸಿ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.