'ಮೆಕ್ಕೆಜೋಳ ಬೆಂ'ಬೆಲೆ' ರು. 1800ಗೆ ಹೆಚ್ಚಿಸಿ'
ಗೌರಿಬಿದನೂರು: ರಾಜ್ಯ ಸರ್ಕಾರ ಮೆಕ್ಕೆಜೋಳಕ್ಕೆ ಈಗ ನಿಗದಿಪಡಿಸಿರುವ 1310 ರು. ಬೆಂಬಲ ಬೆಲೆಯನ್ನು 1800ಕ್ಕೆ ಹೆಚ್ಚಿಸಬೇಕೆಂದು ರಾಜ್ಯ ರೈತಸಂಘದ ಜಿಲ್ಲಾ ಕಾರ್ಯದರ್ಶಿ ಎಂ.ಆರ್. ಲಕ್ಷ್ಮೀನಾರಾಯಣ ಹಾಗೂ ತಾಲೂಕು ರೈತ ಸಂಘದ ಅಧ್ಯಕ್ಷ ಲೋಕೇಶ್ ತಿಳಿಸಿದರು.
ಸರ್ಕಾರ ರೈತರ ಪರ ಎಂದು ಹೇಳಿಕೊಳ್ಳುತ್ತಿದೆ. ರಾಗಿಗೆ 300 ರು. ಬೆಂಬಲ ಬೆಲೆ ಘೋಷಿಸಿದೆ. ಬತ್ತಕ್ಕೆ 100ರೂ. ಕಬ್ಬಿಗೆ 150 ರು. ನೀಡುತ್ತಿದೆ. ಆದರೆ ರೈತರಿಗೆ ಜೀವನಾಧಾರವಾಗಿರುವ ವಾಣಿಜ್ಯ ಬೆಳೆ ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡದೆ ವಂಚಿಸುತ್ತಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಈಗ ಸರ್ಕಾರ 1310 ರು. ನಿಗದಿಪಡಿಸಿದ್ದರೂ ಶೇ. 12ರಿಂದ 13ರ ಒಳಗೆ ಮಾಯಿಶ್ಚರ್ ಇರಬೇಕು, ಚೀಲ ರೈತರದ್ದೇ, ತುಂಬುವ ಕೂಲಿ, ಸಾಗಾಣಿಕೆ ವೆಚ್ಚ, ಮೂಟೆ ತುಂಬುವುದು ಮತ್ತು ತೆಗೆಯುವುದು ರೈತರ ಮೇಲೆಯೇ ಬೀಳುತ್ತದೆ ಹಾಗೂ ರೈತನಿಗೆ ಹಣವನ್ನು ಚೆಕ್ ರೂಪದಲ್ಲಿ ನೀಡುವುದರಿಂದ ಹಣ ಪಾವತಿ 15ರಿಂದ 20 ದಿನ ಬೇಕಾಗುತ್ತದೆ. ಈ ಎಲ್ಲಾ ಕಾರಣಗಳಿಂದ ರೈತರು 1310 ರು.ಗಳಿಗೆ ರಾಜ್ಯ ಆಹಾರ ನಿಗಮಕ್ಕೆ ಜೋಳವನ್ನು ಮಾರಾಟ ಮಾಡುವ ಬದಲಿಗೆ 1200 ರು.ಗೆ ವರ್ತಕರಿಗೆ ಹಾಗೂ ದಲ್ಲಾಳಿಗಳಿಗೆ ಮಾರಾಟ ಮಾಡಲು ಮುಂದಾಗುತ್ತಿದ್ದಾರೆ ಎಂದ ಅವರು ಸರ್ಕಾರ ಕನಿಷ್ಠ 1800 ರು.ಗಳಿಗೆ ಬೆಲೆಯನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಖರೀದಿ ಕೇಂದ್ರ ಪ್ರಾರಂಭ: ಇಂದಿನಿಂದ ಎಪಿಎಂಸಿ ಆವರಣದಲ್ಲಿ ರಾಜ್ಯ ಆಹಾರ ನಿಗಮದ ವತಿಯಿಂದ 1310 ರು.ನಂತೆ ಖರೀದಿ ಪ್ರಾರಂಭಿಸಿದ್ದು ರೈತರಿಂದ ಸುಮಾರು 80 ಕ್ವಿಂಟಲ್ ಜೋಳವನ್ನು ಖರೀದಿಸಲಾಯಿತು ಎಂದು ಕೆಎಸ್ಎಫ್ಸಿ ಅಧಿಕಾರಿ ಪ್ರಕಾಶ್ ತಿಳಿಸಿದ್ದಾರೆ.
ಖಾಸಗಿ ಖರೀದಿ ದಾರರು ವರ್ತಕರು ಹಾಗೂ ದಲ್ಲಾಳಿಗಳು ಕೇವಲ 1050ಕ್ಕೆ ಖರೀದಿಸುತ್ತಿದ್ದವರು ಆಹಾರ ನಿಗಮದ ಖರೀದಿ ಕೇಂದ್ರ ಪ್ರಾರಂಭವಾದ ತಕ್ಷಣ ಖರೀದಿ ದರವನ್ನು 1200 ರು.ಗೆ ಹೆಚ್ಚಿಸಿದ್ದಾರೆ. ರೈತರ ಮನೆ ಬಾಗಿಲಿಗೇ ಹೋಗಿ ಖರೀದಿಸಲು ಪ್ರಾರಂಭಿಸಿದ್ದಾರೆ. ನಾಳೆಯಿಂದ 1210 ರು.ಗೆ ದಲ್ಲಾಳಿಗಳು ಖರೀದಿ ಬೆಲೆ ಹೆಚ್ಚಿಸಬಹುದು ಎಂದು ತಿಳಿಸಿರುವ ತಾಲೂಕು ರೈತ ಸಂಘದ ಅಧ್ಯಕ್ಷ ಲೋಕೇಶ್ಗೌಡ ತಕ್ಷಣವೇ ಸರ್ಕಾರ 1800 ರು.ಗೆ ಬೆಲೆ ಹೆಚ್ಚಿಸದಿದ್ದಲ್ಲಿ ದಿನಂಕ 11-12-2013ರ ಬುಧವಾರದಿಂದ ತಾಲೂಕು ಕಚೇರಿ ಮುತ್ತಿಗೆ ಹಾಗೂ ಅನಿದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗುವುದು ಪಕ್ಷಾತೀತ ಹಾಗೂ ರೈತ ಪರವಾದ ಹೋರಾಟವಾಗಿರುವುದರಿಂದ ಜನಪ್ರತಿನಿಧಿಗಳು, ಸಾರ್ವಜನಿಕರು ಪ್ರಮುಖವಾಗಿ ರೈತರು ಈ ನ್ಯಾಯಯುತ ಹೋರಟಕ್ಕೆ ಬೆಂಬಲಿಸಬೇಕೆಂದು ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಕಲ್ಲೂಡಿ ಮುದ್ದುರಂಗಪ್ಪ, ಗಂಗಸಂದ್ರ ಸನತ್ಕುಮಾರ್, ಪ್ರಧಾನ ಕಾರ್ಯದರ್ಶಿ ದಿನೇಶ್ಕುಮಾರ್, ಕಾನೂನು ಸಲಹೆಗಾರರಾದ ಸುರೇಶ್ರೆಡ್ಡಿ, ಶೇಂದಿ ಅಶ್ವತ್ಥಪ್ಪ, ನಾರಾಯಣರೆಡ್ಡಿ, ಶ್ರೀನಿವಾಸಗೌಡ ಇದ್ದರು