ರೈತ ಹೋರಾಟಕ್ಕೆ ತಾತ್ಕಾಲಿಕ ತೆರೆ
ಚಿಕ್ಕಬಳ್ಳಾಪುರ: ರಾಷ್ಟ್ರೀಯ ಹೆದ್ದಾರಿ 7 ರ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡಿರುವ ಕೃಷಿ ಭೂಮಿಗೆ ತ್ವರಿತವಾಗಿ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಶುಕ್ರವಾರ ರೈತರು ಸರ್ಕಾರದ ಅಣಕು ಶವಯಾತ್ರೆ ಕೈಗೊಂಡರು.
ತಿಥಿಯೂಟ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಈ ನಡುವೆ ಜಿಲ್ಲಾಡಳಿತದ ಭರವಸೆಯಿಂದ ರೈತರು ತಮ್ಮ ಹೋರಾಟವನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದಿದ್ದಾರೆ. ಡಿ.2 ರಂದು ನೂತನ ಜಿಲ್ಲಾಡಳಿತ ಭವನದ ಮುಂದೆ ಜಾನುವಾರುಗಳ ಸಮೇತ ಪ್ರತಿಭಟನೆ ನಡೆಸಿದ ರೈತರು ಅಹೋರಾತ್ರಿ ಧರಣಿ ಕೈಗೊಂಡಿದ್ದರು. ಜಿಲ್ಲಾಡಳಿತ ಸ್ಪಂದಿಸದ ಹಿನ್ನೆಲೆಯಲ್ಲಿ ಶುಕ್ರವಾರ ಅಣಕು ಶವಯಾತ್ರೆ ನಡೆಸಿ ಧಿಕ್ಕಾರ ಕೂಗಿದರು.
ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದ್ದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಡಿ.13 ರಂದು ಸಭೆ ನಡೆಸಿ ಚರ್ಚಿಸುವ ಭರವಸೆ ನೀಡಿದ್ದರಿಂದ ರೈತರು ತಮ್ಮ ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆದರು. ಯಲುವಹಳ್ಳಿ ಸೊಣ್ಣೇಗೌಡ, ಭಕ್ತರಹಳ್ಳಿ ಭೈರೇಗೌಡ, ಮಳ್ಳೂರು ಹರೀಶ್, ಮನೋಹರ್, ರಾಮಕೃಷ್ಣಪ್ಪ, ನಾರಾಯಣಸ್ವಾಮಿ, ಶ್ರೀನಿವಾಸ್, ಬಾಬುರೆಡ್ಡಿ, ಸೋಮಶೇಖರ್, ಆನಂದಮೂರ್ತಿ ಇದ್ದರು.