ಇರಸವಾಡಿ ಗ್ರಾಮಸ್ಥರ ಪ್ರತಿಭಟನೆ
ಚಾಮರಾಜನಗರ: ನಗರದ ಪ್ರವಾಸಿ ಮಂದಿರದ ಬಳಿ ಶುಕ್ರವಾರ ನಡೆದ ಅಪಘಾತಕ್ಕೆ ಸಂಬಂಧಿಸಿದಂತೆ ಬೈಕ್ ಚಾಲಕನನ್ನು ಬಂಧಿಸುವಂತೆ ಆಗ್ರಹಿಸಿ ಇರಸವಾಡಿ ಗ್ರಾಮಸ್ಥರು ಹಾಗೂ ಮುಖಂಡರು ನಗರದ ಭುವನೇಶ್ವರಿ ವೃತ್ತದಲ್ಲಿ ರಸ್ತೆ ತಡೆ ನಡೆಸಿದರು.
ಪ್ರತಿಭಟನಾಕಾರರು ಮಾತನಾಡಿ, ಶುಕ್ರವಾರ ಸಂಜೆ 2 ಬೈಕ್ಗಳು ಮುಖಾ ಮುಖಿ ಡಿಕ್ಕಿ ಹೊಡೆದ ಪರಿಣಾಮ ಇರಸವಾಡಿ ಗ್ರಾಮದ ಶಿವಣ್ಣ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದರು. ಅಪಘಾತಕ್ಕೆ ಕಾರಣರಾದವರನ್ನು ಪೊಲೀಸರಿಗೆ ಒಪ್ಪಿಸಿದರೆ, ರಾತ್ರಿ ಆತನನ್ನು ಬಿಡುಗಡೆಗೊಳಿಸಿದ್ದಾರೆ. ತಕ್ಷಣ ಆತನನ್ನು ಬಂಧಿಸಿ, ಮೃತಪಟ್ಟ ವ್ಯಕ್ತಿಗೆ ಸೂಕ್ತ ಪರಿಹಾರ ನೀಡಬೇಕು. ಅವನನ್ನು ಬಂಧಿಸುವವರೆಗೂ ಜಾಗ ಬಿಟ್ಟು ಕದಲುವುದಿಲ್ಲ ಎಂದು ಹೇಳಿದರು.
ವಿಷಯ ತಿಳಿದು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ಮುತ್ತುಸ್ವಾಮಿ ನಾಯ್ಡು ಮಾತನಾಡಿ, ಅಪಘಾತಕ್ಕೆ ಕಾರಣರಾದವರನ್ನು ರಾತ್ರಿ ನಾವು ಬಂಧಿಸಿಲ್ಲ, ಬೆಳಗ್ಗೆ ಮಾತುಕತೆಗೆ ಬರುತ್ತೇನೆ ಎಂದು ಹೇಳಿ ಹೋಗಿದ್ದಾನೆ. ಸಂಜೆ ವೇಳೆಗೆ ಆತನನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು.
ಇರಸವಾಡಿ ಗ್ರಾಮಸ್ಥರು, ಸಿ.ಕೆ. ಮಂಜುನಾಥ್, ಬ್ಯಾಡಮೂಡ್ಲು ಬಸವಣ್ಣ, ಪರ್ವತರಾಜು, ನಾಗರಾಜು, ಕಾಂತ ಮತ್ತಿತರರು ಇದ್ದರು.