ಜಾಗತೀಕರಣದಿಂದ ದೇಶಕ್ಕೆ ಮಾರಕ ಸ್ಥಿತಿ
ಕ.ಪ್ರ.ವಾರ್ತೆ ಗೌರಿಬಿದನೂರು ಡಿ. 7
ಭಾರತದ ಜುಟ್ಟನ್ನು ಜಾಗತೀಕರಣ ಹಿಡಿದಿಟ್ಟುಕೊಂಡಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಜಲಶಿಕ್ಷಕ ಕೆ. ನಾರಾಯಣಸ್ವಾಮಿ ವಿಷಾದ ವ್ಯಕ್ತಪಡಿಸಿದರು.
ಪಟ್ಟಣದ ಆಚಾರ್ಯ ಪಪೂ ಕಾಲೇಜಿನ ಭಾರತಮಾತ ಪ್ರಾರ್ಥನಾ ಮಂದಿರದಲ್ಲಿ ಗೌರಿಬಿದನೂರು ಪ್ರಗತಿಶೀಲ ಕಲಾವಿದರ ವೇದಿಕೆ ಅಂಬೇಡ್ಕರ್ ಅವರ 57ನೇ ಪರಿನಿರ್ವಾಣದ ಅಂಗವಾಗಿ ಹಮ್ಮಿಕೊಂಡಿದ್ದ ಕ್ರಾಂತಿಗೀತೆಗಳ ಗಾಯನ ಹಾಗೂ ದಲಿತರ ಮುಂದಿನ ಸವಾಲುಗಳು ಚಿಂತನ ಮಂತನ ಕಾರ್ಯಕ್ರಮದಲ್ಲಿ ಮಾತನಾಡಿ, ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿ ಒಂದೇ ನಮ್ಮನ್ನು 200ವರ್ಷ ಆಳ್ವಿಕೆ ನಡೆಸಿ ದಬ್ಬಾಳಿಕೆ ನಡೆಸಿತು. ಆದರೆ ಇಂದು ಇಂತಹ ನೂರಾರು ಕಂಪನಿಗಳು ಜಾಗತೀಕರಣ, ಉದಾರೀಕರಣ, ಇಡೀ ದೇಶನ್ನು ಮತ್ತೆ ದಾಸ್ಯದೆಡೆಗೆ ದೂಡುತ್ತಿದ್ದೇವೆ ಎಂದರು.
ನಮ್ಮ ಸರ್ಕಾರಗಳು ಅಮೆರಿಕಾದಂತಹ ಅಧಿಕಾರ ಶಾಹಿ ದೇಶಹಾಗೂ ಬಹುರಾಷ್ಟ್ರೀಯ ಕಂಪನಿಗಳ ಹಿಡಿತದಲ್ಲಿ ನಡೆಸಲ್ಪಡುತ್ತಿದೆ ಪ್ರಧಾನಿ ಮನಮೋಹನ್ ಸಿಂಗ್ ಕೇವಲ ನೆಪಮಾತ್ರ. ರಾಜಕಾರಣಿಗಳು ಕೇವಲ ಭಾಷಣ ಬಿಗಿಯುತ್ತಾರೆ ಅಧಿಕಾರ ಹಣದ ಮುಂದೆ ಅವರಿಗೆ ಯಾವುದೇ ಹಿತಾಸಕ್ತಿ ಇಲ್ಲ, ಈ ವಿಷಯದಲ್ಲಿ ಎಲ್ಲಾ ಪಕ್ಷಗಳೂ ಒಂದೇ ಎಂದರು.
ಅಕ್ಷರದಾಸೋಹದ ಸಹಾಯಕ ನಿರ್ದೇಶಕ ಆಂಜನೇಯಲು ಮಾತನಾಡಿ, ದೇಶದ ಮೂಲ ನಿವಾಸಿಗಳು ನಾಗಾ ಜನಾಂಗದವರು. ಅವರು ಶ್ರಮಜೀವಿಗಳು ಇಂತಹವರು ನೂರಾರು ವರ್ಷಗಳ ಕಾಲ ಶೋಷಣೆ, ದೌರ್ಜನ್ಯ, ದಬ್ಬಾಳಿಕೆ, ಅಸಮಾನತೆಯಿಂದ ನಲುಗಿದ್ದಾರೆ ಇಂತಹವರಿಗೆ ದಾರಿದೀಪವಾಗಿ ಬಂದವರೇ ಡಾ.ಬಿ.ಆರ್.ಅಂಬೇಡ್ಕರ್ ಅವರು ಎಂದರು. ಕಾರ್ಯಕ್ರಮ ಉದ್ಘಾಸಿದ ಸಿಪಿಐಎಂ ನ ಮುನಿವೆಂಕಟಪ್ಪ ಮಾತನಾಡಿ, ಜಾಗತೀಕರಣ, ಖಾಸಗೀಕರಣ ನಮ್ಮ ಸಂವಿಧಾನದ ಮೀಸಲಾತಿಯನ್ನು ಬಗ್ಗು ಬಡಿದು ದೇಶದ ಸಂಸ್ಕೃತಿಯನ್ನು ನಾಶಮಾಡುತ್ತಿದೆ ಆದ್ದರಿಂದ ನಾವು ಎಚ್ಚೆತ್ತುಕೊಳ್ಳಬೇಕು ಎಂದರು. ಸಿಪಿಐಎಂ ಜಿಲ್ಲಾ ಮುಖಂಡ ಸಿದ್ದಗಂಗಪ್ಪ, ಗೋವಿಂದಪ್ಪ, ನಕ್ಕಲಹಳ್ಳಿ ರಾಮಕೃಷ್ಣ, ಪುರಸಭಾಸದಸ್ಯ ಮುನಿರಾಜು, ಶಿಕ್ಷಕ ಕೃಷ್ಣಪ್ಪ ಇದ್ದರು.