'ಪ್ರತಿಭೆ ಅನಾವರಣಕ್ಕೆ ಪೂರಕ'
ಚಾಮರಾಜನಗರ: ಕಲೆ, ಸಂಸ್ಕೃತಿ ಅಭಿವ್ಯಕ್ತಿಸಲು ಅವಕಾಶ ಮಾಡಿಕೊಡುವ ಯುವಜನೋತ್ಸವದಂತಹ ಕಾರ್ಯಕ್ರಮದಲ್ಲಿ ಯುವಜನರು ಉತ್ಸಾಹದಿಂದ ಹೆಚ್ಚಾಗಿ ತೊಡಗಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಎ.ಎಂ. ಕುಂಜಪ್ಪ ತಿಳಿಸಿದರು.
ಯುವಜನೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಯುವಜನರ ಸುಪ್ತ ಪ್ರತಿಭಾ ಕೌಶಲ್ಯ ಅನಾವರಣಕ್ಕೆ ಯುವಜನೋತ್ಸವ ಸಹಕಾರಿಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಪ್ರದರ್ಶನಕ್ಕೆ ಅವಕಾಶ ಒದಗಿಸುತ್ತಿರುವ ಯುವ ಸಂಸ್ಕೃತಿ ಕಾರ್ಯಕ್ರಮಕ್ಕೆ ಯುವಜನರು ಹೆಚ್ಚಿನ ಒಲವು ತೋರುತ್ತಿಲ್ಲ. ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ನುಡಿದರು.
ಜಿಪಂ ಅಧ್ಯಕ್ಷೆ ಯಶೋಧ ಪ್ರಭುಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆ ಜಾನಪದ ಕಲೆಗಳ ಆಶ್ರಯ ತಾಣವಾಗಿದೆ. ಕಂಸಾಳೆ, ಗೊರವರ ಕುಣಿತ, ವೀರ ಮಕ್ಕಳ ಕುಣಿತ, ನಂದೀಕಂಬ ಹೀಗೆ ಹಲವಾರು ಕಲಾ ಪರಂಪರೆಗೆ ಹೆಸರುವಾಸಿಯಾಗಿದೆ. ಮೇರುನಟ ಡಾ. ರಾಜ್ಕುಮಾರ್ ಕೂಡ ಈ ಜಿಲ್ಲೆಯವರೇ ಆಗಿದ್ದಾರೆ. ಇಂಥಹ ಕಲಾ ಇತಿಹಾಸವುಳ್ಳ ಜಿಲ್ಲೆಯಲ್ಲಿ ನಡೆಯುವ ಸಾಂಸ್ಕೃತಿಕ ಉತ್ಸವಗಳಿಗೆ ಉತ್ತೇಜನ ಸಹಕಾರ ನೀಡಬೇಕು ಎಂದು ತಿಳಿಸಿದರು.
ತಾಪಂ ಉಪಾಧ್ಯಕ್ಷೆ ಪಾರ್ವತಮ್ಮ ಟಿ.ಕೆ. ರಂಗಯ್ಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಎಂ.ಎಲ್. ದೇವಿಕಾ, ಅಧೀಕ್ಷಕ ಚೆಲುವಯ್ಯ, ತೀರ್ಪುಗಾರರಾಗಿ ಆಗಮಿಸಿದ್ದ ಕಲಾವಿದರಾದ ಬಸವರಾಜು, ಹರದನಹಳ್ಳಿ ನಟರಾಜು. ಶಶಿಕಲಾ ಚಂದ್ರಶೇಖರ್, ನಾಗೇಶ್ಸೋಸ್ಲೆ, ಸಿ.ಎಂ. ನರಸಿಂಹಮೂರ್ತಿ ಇದ್ದರು.