ಯುವಕರೇ ಇಲ್ಲದ ಯುವಜನೋತ್ಸವ...
ಕನ್ನಡಪ್ರಭ ವಾರ್ತೆ ಚಾಮರಾಜನಗರ ಡಿ. 7
ಯುವಜನರ ಕಲ್ಯಾಣಕ್ಕಾಗಿ, ಅವರ ಶ್ರೇಯೋಭಿವೃದ್ಧಿಗಾಗಿ ಅವರಿಗಾಗಿಯೇ ಇರುವ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಶನಿವಾರ ನಡೆದ, ಜಿಲ್ಲಾ ಯುವಜನೋತ್ಸವ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ತೀವ್ರ ನಿರ್ಲಕ್ಷ್ಯದಿಂದಾಗಿ ಕಾಟಾಚಾರಕ್ಕೆ ಎಂಬಂತೆ ನಡೆದು, ಮುಖ್ಯವಾಗಿ ಭಾಗವಹಿಸ ಬೇಕಾದ ಯುವ ಜನರೇ ಇಲ್ಲದೆ ಅಂತೂ ಇಂತೂ ಮುಕ್ತಾಯವಾಯಿತು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ನಡೆದ ಉತ್ಸವವನ್ನು ಜಿಲ್ಲಾಧಿಕಾರಿ ಎ.ಎಂ. ಕುಂಜಪ್ಪ ಉದ್ಘಾಟಿಸಿ, ಉತ್ಸವದಲ್ಲಿ ಯುವ ಸಮೂಹ ಹೆಚ್ಚು ಭಾಗವಹಿಸದೇ ಇದ್ದುದಕ್ಕೆ ಬೇಸರ ವ್ಯಕ್ತಪಡಿಸಿದರು.
ಒಂದೆರಡು ಯುವಕ ಸಂಘ ಮಾತ್ರ: ಜಿಲ್ಲೆಯ ನಾಲ್ಕು ತಾಲೂಕುಗಳಿಂದ ನೋಂದಾಯಿಸಿ ಕೊಂಡಿರುವ ಯುವಕ ಸಂಘಗಳಲ್ಲಿ ಮೂರರಿಂದ ನಾಲ್ಕು ಸಂಘಗಳು ಭಾಗವಹಿಸಿದ್ದರೂ ಇಡೀ ಸಭಾಂಗಣ ತುಂಬುತ್ತಿತು. ಆದರೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಸರಿಯಾದ ಮಾಹಿತಿ ಕೊಡದ ಕಾರಣ ಜಿಲ್ಲೆಯ ಒಂದೆರಡು ಯುವಕ ಸಂಘದವರನ್ನು ಬಿಟ್ಟರೆ ಇನ್ನುಳಿದವು ಪ್ರೌಢಶಾಲೆ ಮತ್ತು ಕಾಲೇಜು ತಂಡಗಳು ಮಾತ್ರ. ಭಾಗವಹಿಸಿದ್ದ ಒಂದೆರಡು ತಂಡಗಳು ಸಹ ಕಳಪೆ ಪ್ರದರ್ಶನ ನೀಡಿದವು.
ಹಾಗಾಗಿ ಹಾಳೂರಿಗೆ ಉಳಿದವನೇ ಗೌಡ ಎಂಬಂತೆ ಭಾಗವಹಿಸಿದ್ದ ತಂಡಗಳೇ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಧಾನ ಪಡೆದುಕೊಂಡವು. ಇವುಗಳ ತಯಾರಿ ರಾಜ್ಯಮಟ್ಟದಲ್ಲಿ ಏನೇನೂ ಅಲ್ಲ. ಹೀಗಾದರೇ ಜಿಲ್ಲೆಗೆ ಹೆಸರು ಹೇಗೆ ಬರುತ್ತದೆ ಎಂಬುದೇ ಪ್ರಶ್ನೆ.
ಜನಪ್ರತಿನಿಧಿಗಳ ನಿರ್ಲಕ್ಷ: ಜಿಲ್ಲೆಯ ಯುವಕ-ಯುವತಿಯರನ್ನು ಪ್ರೋತ್ಸಾಹಿಸಬೇಕಾದ ಜನಪ್ರತಿನಿಧಿಗಳು ಸಹ ಈ ಉತ್ಸವವನ್ನು ನಿರ್ಲಕ್ಷಿಸಿದರು.
ಉತ್ಸವ ಉದ್ಘಾಟಿಸ ಬೇಕಾಗಿದ್ದ ಉಸ್ತುವಾರಿ ಸಚಿವ ಎಚ್.ಎಸ್. ಮಹದೇವಪ್ರಸಾದ್, ಈ ಕಾರ್ಯಕ್ರಮ ಗುಂಡ್ಲುಪೇಟೆಯಲ್ಲಿ ನಡೆದಿದ್ದರೇ ಭಾಗವಹಿಸುತ್ತಿದ್ದರೇನೋ.
ಅಧ್ಯಕ್ಷತೆ ವಹಿಸಬೇಕಾಗಿದ್ದ ಶಾಸಕ ಪುಟ್ಟರಂಗಶೆಟ್ಟಿ, ಮುಖ್ಯ ಅತಿಥಿಗಳಾಗಿದ್ದ ಸಂಸದ ಆರ್.ಧ್ರುವನಾರಾಯಣ, ಶಾಸಕ ಎಸ್. ಜಯಣ್ಣ, ಆರ್. ನರೇಂದ್ರ, ಧರ್ಮಸೇನಾ, ಗೋ. ಮಧುಸೂದನ್, ಮರಿತಿಬ್ಬೆಗೌಡ, ಸಂದೇಶ್ ನಾಗರಾಜು, ಸಫಾಯಿ ಕರ್ಮಚಾರಿ ಆಯೋಗದ ಎಂ. ಶಿವಣ್ಣ, ಜಿಪಂ ಉಪಾಧ್ಯಕ್ಷ ಡಿ. ದೇವರಾಜು, ನಗರಸಭಾ ಅಧ್ಯಕ್ಷ ಎಸ್. ನಂಜುಂಡಸ್ವಾಮಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶಿವಮ್ಮ, ತಾಪಂ ಅಧ್ಯಕ್ಷ ವಿಜಯ ದೇವರಾಜು, ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಕೆ.ಎಚ್. ನರಸಿಂಹಮೂರ್ತಿ ಇವರ್ಯಾರೂ ಸಮಾರಂಭದಲ್ಲಿ ಭಾಗವಹಿಸಿರಲಿಲ್ಲ.
ಗಲಾಟೆ ಮಾಡಿದ ಮೇಲೆ ಬಂತು ಪೋಕಸ್ ಲೈಟ್: ಕಾರ್ಯಕ್ರಮಕ್ಕೆ ರಂಗನ್ನು ಹೆಚ್ಚಿಸ ಬೇಕಾಗಿದ್ದ ಪೋಕಸ್ ಲೈಟ್ ಇಲ್ಲದೆ ಛಾಯಗ್ರಾಹಕರೊಬ್ಬರು ಹಾಗೂ ಕೆಲ ವೇಷಭೂಷಣ ತೊಟ್ಟ ಸ್ಪರ್ಧಿಗಳು ಗಲಾಟೆ ಮಾಡಿದ್ದ
ರಿಂದ ಫೋಕಸ್ ಲೈಟ್ ಬಾಡಿಗೆ ತಂದು ಅಳವಡಿಸಲಾಯಿತು. ಅದುವರೆಗೂ ಕಾರ್ಯಕ್ರಮಕ್ಕೆ ರಂಗೇ ಇರಲಿಲ್ಲ.