'ಕೌಶಲ್ಯ ತರಬೇತಿ ಸದ್ಬಳಕೆಯಾಗಲಿ'
ಗುಡಿಬಂಡೆ: ಬಡತನ ರೇಖೆಗಿಂತ ಕೆಳಗಿರುವ ನಿರುದ್ಯೋಗಿಗಳಿಗಾಗಿ ಸರ್ಕಾರದಿಂದ ಅನೇಕ ಕೌಶಲ್ಯಾಭಿವೃದ್ಧಿತರಬೇತಿ ನಡೆಯುತ್ತಿದ್ದು, ಅವುಗಳ ಸದ್ಬಳಕೆ ಮಾಡಿಕೊಂಡು ನಿರುದ್ಯೋಗ ಸಮಸ್ಯೆಯಿಂದ ದೂರವಾಗಬೇಕೆಂದು ಜಿಲ್ಲಾ ಪೌರಾಡಳಿ ಯೋಜನಾ ನಿರ್ದೇಶಕ ಎನ್. ನಾಗರಾಜಯ್ಯಶೆಟ್ಟಿ ಸಲಹೆ ನೀಡಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಪಪಂ ವ್ಯಾಪ್ತಿಯ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ನಿರುದ್ಯೋಗಿಗಳಿಗೆ ಸ್ವರ್ಣ ಜಯಂತಿ ಶಹರಿ ರೋಜಗಾರ್ ಯೋಜನೆಯಡಿ ನೀಡುವ ಕೌಶಲ್ಯಾಭಿವೃದ್ಧಿ ತರಬೇತಿ ಉದ್ಘಾಟನೆಯಲ್ಲಿ ಮಾತನಾಡಿ, ಕಳೆದ ಸಾಲಿನಲ್ಲಿ ಈ ಯೋಜನೆಯ ಅನುಷ್ಟಾನ ಸ್ವಲ್ಪ ಮಟ್ಟಿಗೆ ಕುಂಠಿತಗೊಂಡಿದ್ದು, ಈ ಸಾಲಿನಲ್ಲಿ ಇಲಾಖೆ ಸೂಕ್ತ ಕ್ರಮ ವಹಿಸಿದೆ ಎಂದರು.
ಜಿಲ್ಲಾ ಸಮುದಾಯ ಅಭಿವೃದ್ಧಿ ತಜ್ಞ ವೆಂಕಟಾಚಲಪತಿ ಮಾತನಾಡಿ, ಕೌಶಲ್ಯಾಭಿವೃದ್ದಿ ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ಸೂಕ್ತ ತರಬೇತಿ ನೀಡಲಾಗುವುದು. ತರಬೇತಿ ಪಡೆಯುವ ಮಹಿಳೆಯರು ಸ್ವಯಂ ಉದ್ಯೋಗ ಕಲ್ಪಿಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದರು.
ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನ ಅಂಬೇಡ್ಕರ್‌ರವರ 57ನೇ ಪರಿನಿರ್ವಾಣ ದಿನದ ಅಂಗವಾಗಿ ಮೌನಾಚರಣೆ ಆಚರಿಸಿದರು. ತಹಸೀಲ್ದಾರ್ ಶೈಲಜಾ, ಪಪಂ ಮುಖ್ಯಾಧಿಕಾರಿ ಶ್ರೀರಾಮರೆಡ್ಡಿ, ಕೌಶಲ್ಯಾಭಿವೃದ್ದಿ ತಜ್ಞ ಮಂಜುನಾಥ್, ರಾಜೇಶ್ವರಿ, ಅಧಿಕಾರಿ ಸುಧಾ, ಪಪಂ ಸದಸ್ಯೆ ವೆಂಕಟಲಕ್ಷ್ಮಮ್ಮ ಶ್ರೀನಿವಾಸ ಇದ್ದರು.