ಮಡೆಸ್ನಾನ ನಿಷೇಧ ಅಗತ್ಯ
ಕೋಲಾರ: ಸ್ಥಾಪಿತ ಹಿತಾಸಕ್ತಿಗಳ ಹುನ್ನಾರದಿಂದಾಗಿ ಅನಾಗರಿಕ ಪದ್ಧತಿಯಾಗಿರುವ ಮಡೆ ಮಡೆಸ್ನಾನ, ಪಂಕ್ತಿಬೇಧ ಹಾಗೂ ಮೂಢ ನಂಬಿಕೆಯನ್ನು ನಿಷೇಧಿಸಲಾಗುತ್ತಿಲ್ಲವೆಂದು ಕಾಂ. ಗುರುಶಾಂತ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಜಿಲ್ಲಾ ಸಿಪಿಎಂನಿಂದ ಮಡೆಸ್ನಾನ, ಪಂಕ್ತಿಬೇಧ, ಮೂಢ ನಂಬಿಕೆ ವಿರುದ್ಧ ಹಮ್ಮಿಕೊಂಡಿದ್ದ ಜಿಲ್ಲಾ ಸಮಾವೇಶ ಉದ್ಘಾಟಿಸಿ ಮಾತನಾಡಿ, ಸರ್ಕಾರ ಈ ಅನಿಷ್ಟ ಆಚರಣೆ ನಿಷೇಧಿಸದಿದ್ದರೆ ಮುಗ್ಧ ಜನರ ಶೋಷಣೆ ಇನ್ನಷ್ಟು ಹೆಚ್ಚಾಗುತ್ತದೆ ಎಂದರು. ಮೂಢ ನಂಬಿಕೆ ಮತ್ತು ಮಡೆಸ್ನಾನ ನಿಷೇಧಕ್ಕಾಗಿ ರಾಜ್ಯ ಸರ್ಕಾರ ಒಲವು ತೋರಿದ್ದರೂ ಬೇರೆ ಪಕ್ಷಗಳ ರೀತಿಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿರುವ ಪಟ್ಟಭದ್ರ ಹಿತಾಸಕ್ತಿಗಳ ವಿರೋಧದಿಂದಾಗಿ ಕಾನೂನು ಜಾರಿಗೆ ತರಲಾಗುತ್ತಿಲ್ಲವೆಂದು ಆರೋಪಿಸಿದರು. ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಟಗಳಿಂದ ಏನು ಪ್ರಯೋಜನವಾಗದು, ಜನತೆಯಲ್ಲಿ ಅರಿವು ಮೂಡಿಸುವ ಕೆಲಸ ಹೆಚ್ಚಾಗಿ ಆಗಬೇಕಾಗಿದೆ, ಸಂವಿಧಾನ ಗೌರವಿಸುವ ಪ್ರತಿಯೊಬ್ಬರು ಒಗ್ಗೂಡಿದಾಗ ಮಾತ್ರ ಬದಲಾವಣೆ ತರಲು ಸಾಧ್ಯವೆಂದು ಪ್ರತಿಪಾದಿಸಿದರು. ಜನವಾದಿ ಸಂಘಟನೆಯ ರಾಜ್ಯಾಧ್ಯಕ್ಷೆ ಗೀತಾ ಮಾತನಾಡಿ, ಧರ್ಮಸ್ಥಳದ ಶ್ರೀಮಂಜುನಾಥ, ಅಣ್ಣಮ್ಮ ದೇವರಿಗೆ ಪೂಜೆ ಮಾಡದ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಹಾಗೂ ಇವರ ಮನೆತನವರು ಜೈನ ಬಸದಿಗೆ ಹೋಗಿ ಪೂಜೆ ಮಾಡುತ್ತಾರೆ. ಧರ್ಮಸ್ಥಳದ ಅಶೋಕ ನಗರದಲ್ಲಿ 150ಕ್ಕೂ ಹೆಚ್ಚು ದಲಿತ ಕುಟುಂಬಳಿದ್ದು ಬಡ ದಲಿತರನ್ನು ದೇವಾಲಯದಲ್ಲಿ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಡದೆ ಶೌಚಾಲಯಗಳ ಸ್ವಚ್ಛತೆಗೆ ಬಳಸಿಕೊಂಡು ಶೋಷಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ವಿಜಯಕುಮಾರ್, ಐಪಲ್ಲಿ ನಾರಾಯಣಸ್ವಾಮಿ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಅರ್ಜುನನ್ ಮಾತನಾಡಿದರು. ಸಮಾವೇಶದ ಅಧ್ಯಕ್ಷತೆಯನ್ನು ಸಿಪಿಐಎಂ ಜಿಲ್ಲಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ವಹಿಸಿದ್ದರು.