ವಿರೋಧದ ನಡುವೆಯೂ ನಿಲ್ಲದ ಮಡೆಸ್ನಾನ
ಚಿಕ್ಕಬಳ್ಳಾಪುರ: ಈ ವರ್ಷ ಮಡೆಸ್ನಾನ ಆಚರಣೆ ನಿಲ್ಲಿಸಲಾಗಿದೆ ಎಂದು ಸಂಘಟಕರು ಹೇಳುತ್ತಲೇ ಇಲ್ಲಿನ ಹಳೆಯ ಶ್ರೀ ಸುಬ್ರಮಣ್ಯೇಶ್ವರ ಸ್ವಾಮಿ ದೇವಾಲಯದಲ್ಲಿ ಮಡೆಸ್ನಾನ ಆಚರಣೆ ಸಂಪ್ರದಾಯ ಬದ್ಧವಾಗಿ ನಡೆಯಿತು.
ಮಡೆಸ್ನಾನ ಮೂಢನಂಬಿಕೆ ಮತ್ತು ಅವೈಜ್ಞಾನಿಕ ಪದ್ಧತಿಯಾಗಿರುವುದರಿಂದ ಸ್ಥಗಿತಗೊಳಿಸಬೇಕೆಂದು ಒತ್ತಡಗಳು ಹೆಚ್ಚಾದ ಹಿನ್ನೆಲೆಯಲ್ಲಿ ಒಂದು ದಿನ ಮುಂಚೆಯೇ ಮಡೆಸ್ನಾನ ಆಚರಣೆ ಸಂಘಟಕರೊಂದಿಗೆ ಅಧಿಕಾರಿಗಳು ಚರ್ಚಿಸಿ ಮನವೊಲಿಸುವ ಕೆಲಸ ಮಾಡಿದ್ದರು. ಇದಕ್ಕೆ ಕೆಲವರು ಸಹಮತ ವ್ಯಕ್ತಪಡಿಸಿದ್ದು ಇದರಂತೆ ಭಾನುವಾರ ಧಾರ್ಮಿಕ ಕಾರ್ಯಕ್ರಮಗಳ ಆಚರಣೆ ಮಧ್ಯೆ ದೇವಾಲಯದಲ್ಲಿ ಮೈಕಿನ ಮೂಲಕ ಮಡೆಸ್ನಾನ ಆಚರಣೆ ಮಾಡುವಂತಿಲ್ಲ, ಭಕ್ತಾದಿಗಳು ಸಹಕರಿಸಬೇಕೆಂದು ಕೋರಲಾಯಿತು. ಮತ್ತೊಂದೆಡೆ ಸಿಪಿಎಂ ದೇವಾಲಯ ಸಮೀಪ ಧರಣಿ ಕುಳಿತಾಗ, ಪೊಲೀಸರು ಖುದ್ದಾಗಿ ಕಾರ್ಯಕ್ರಮದ ಸಂಘಟಕರನ್ನು ಕರೆಸಿ ಮಡೆಸ್ನಾನ ಆಚರಣೆ ಮಾಡುತ್ತಿಲ್ಲ ಎಂದು ಪ್ರತಿಭಟನಾಕಾರರಿಗೆ ಹೇಳಿಸಿದರು. ಭರವಸೆ ಕೇಳಿ ಸಮಾಧಾನಗೊಂಡ ಪ್ರತಿಭಟನಾಕಾರರು ಪ್ರತಿಭಟನೆ ವಾಪಸ್ ಪಡೆದು ಹಿಂತಿರುಗಿದರು. ಆದರೂ ಮುಂಜಾಗ್ರತಾ ಕ್ರಮದಿಂದ ಪೊಲೀಸರು ಆಲಯದ ಬಾಗಿಲು ಮುಂದೆ ರಕ್ಷಣೆಗೆ ನಿಂತುಕೊಂಡರು. ಇತ್ತ ಮಧ್ಯಾಹ್ನ 3.15 ಕ್ಕೆ ಮೊದಲ ಪಂಕ್ತಿ ಭೋಜನ ಕಾರ್ಯ ಮುಗಿಯುತ್ತಿದ್ದಂತೆ ಜಮಾಯಿಸಿದ ಮಹಿಳೆಯರು, ಯುವಕ ಯುವತಿಯರು, ಮಕ್ಕಳು ಸೇರಿದಂತೆ ಅನೇಕ ಮಂದಿ ಭಕ್ತಾದಿಗಳು ಎಂಜಲೆಲೆಗಳ ಮೇಲೆ ಉರುಳು ಸೇವೆ ಮಾಡಿ ಬಿಟ್ಟರು. ಅವರನ್ನು ತಡೆಯಲು ಯಾರಿಂದಲೂ ಸಾಧ್ಯವಾಗಲಿಲ್ಲ. ಕೊನೆಗೆ ಸಂಘಟಕರು ಆಚರಣೆಯಲ್ಲಿ ತಲ್ಲೀನರಾಗಿಬಿಟ್ಟರು. ಘೋಷವಾಕ್ಯಗಳೂ ಮುಗಿಲು ಮುಟ್ಟಿದ್ದವು.
ತ್ವರಿತಗತಿಯ ಸೇವೆ: ತಡೆಯಬಹುದೆಂಬ ಭೀತಿಯಲ್ಲಿ ಮಡೆಸ್ನಾನ ಆಚರಣೆ ವೇಗವಾಗಿ ನಡೆಯಿತು. ಇದರಲ್ಲಿ ಎಂಜಿನಿಯರ್, ವೈದ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ವಿದ್ಯಾವಂತರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಪೋಷಕರ ಮಾರ್ಗದರ್ಶನದಂತೆ ಸಣ್ಣ ಮಕ್ಕಳು ಉರುಳಿದರು. ನಂತರ ಹಲವರು ಎಂಜಲೆಲೆಗಳನ್ನು ತಮ್ಮ ತಲೆಯ ಮೇಲಿಟ್ಟುಕೊಂಡು ಹೊರಗಡೆ ಹೋಗಿ ಬಿಸಾಡಿದರು.
ವಿಶೇಷ ರಥೋತ್ಸವ: ಇದಕ್ಕೂ ಮುನ್ನಾ ಆಲಯದಲ್ಲಿ ಶ್ರೀ ಸುಬ್ರಮಣ್ಯಸ್ವಾಮಿಗೆ ವಿಶೇಷ ಅಭಿಷೇಕ, ಅಲಂಕಾರ ಕೈಗೊಳ್ಳಲಾಯಿತು. ಬೆಳಿಗ್ಗೆಯಿಂದಲೇ ಜನರು ಆಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ಆಲಯದ ಮುಂಭಾಗದಲ್ಲಿ 108 ಬ್ರಹ್ಮಚಾರಿಗಳ ವಿಶೇಷ ಪೂಜಾ ಕಾರ್ಯಕ್ರಮ ನಡೆದಿದ್ದು ಪ್ರಮುಖವಾಗಿ ಶ್ರೀ ಕುಮಾರಸ್ವಾಮಿಯ ರಥೋತ್ಸವ ಮಹಾ ಮಂಗಳಾರತಿಯೊಂದಿಗೆ ಚಾಲನೆ ಪಡೆದುಕೊಂಡು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ರಥೋತ್ಸವ ಮುಗಿಯುವವರೆಗೂ ಪಂಕ್ತಿ ಭೋಜನ ಕಾರ್ಯಕ್ರಮ ಪ್ರಾರಂಭವಾಗಲಿಲ್ಲ.
ನಮ್ಮ ಆಚರಣೆ ನಮ್ಮದು, ಬಿಟ್ಟು ಬಿಡಿ: ಭಕ್ತಿಯಲ್ಲಿ ತನ್ಮಯರಾಗಿ ಮಡೆಸ್ನಾನ ಆಚರಣೆಯಲ್ಲಿ ಪಾಲ್ಗೊಂಡಿದ್ದ ಹಲವರು ತಮ್ಮ ಆಚರಣೆಯನ್ನು ಸಮರ್ಥಿಸಿಕೊಂಡರು. ನಮ್ಮ ಆಚರಣೆ ನಮ್ಮದು, ಇದಕ್ಕೆ ಯಾರನ್ನೂ ಬಲವಂತ ಮಾಡುತ್ತಿಲ್ಲದ ಕಾರಣ ತಲಾಂತರಗಳಿಂದ ಬರುತ್ತಿರುವ ಸಂಪ್ರದಾಯ ಆಚರಿಸಲು ಬಿಡಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹಿಂಸೆಯಾದರೂ ಸರಿ ಸಿಗುವ ಪ್ರಾಣಿಗಳನ್ನು ಬಲಿ ಕೊಟ್ಟು ಮಾಂಸವನ್ನು ಭಕ್ಷಿಸಲಾಗುತ್ತದೆ. ಅದನ್ನು ಯಾರು ವಿರೋಧಿಸುವುದಿಲ್ಲ. ಆದರೆ, ದೇವರ ನಂಬಿಕೆಯಲ್ಲಿ ಸ್ವಯಂಪ್ರೇರಿತವಾಗಿ ಮಡೆಸ್ನಾನ ಆಚರಣೆ ಮಾಡುವುದನ್ನು ವಿರೋಧಿಸಲಾಗುತ್ತದೆ. ಎಂಜಲೋ ಪಂಜಲೋ ನಾವೇ ಅಸಹಸ್ಯಪಡುತ್ತಿಲ್ಲ. ಬೇರೆಯವರಿಗೆ ಏಕೆ ಬಾಧೆ ಎಂದು ಉದ್ಯಮಿ ಶ್ರೀನಿವಾಸ್ ಪ್ರಶ್ನಿಸಿದರು.
ಕಳೆದ ಏಳೆಂಟು ವರ್ಷಗಳಿಂದ ಪ್ರತಿ ವರ್ಷ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ನನಗೆ ಒಳ್ಳೆಯದು ಆಗಿದೆ. ಮುಂದೆ ಇನ್ನೂ ಒಳ್ಳೆಯದಾಗಲಿ ಎಂದು ಬೇಡಿಕೊಂಡಿದ್ದೇನೆ. ಇದಕ್ಕಾಗಿ ಸೇವೆ ಮಾಡುತ್ತಿರುವುದಾಗಿ ಗಿರಿಜಾ ತಿಳಿಸಿದರು.