ಅಕ್ರಮ ಮರಳುಗಾರಿಕೆಗೆ ಪೊಲೀಸರ ಕುಮ್ಮಕ್ಕು
ಚಿಕ್ಕಬಳ್ಳಾಪುರ: ಬಾಗೇಪಲ್ಲಿ ತಾಲೂಕಿನಲ್ಲಿ ವ್ಯಾಪಕವಾಗಿ ಮಟ್ಕಾ ದಂಧೆ, ಅಕ್ರಮ ಮರಳುಗಾರಿಕೆ ನಡೆಯುತ್ತಿರುವುದಕ್ಕೆ ಪೊಲೀಸರೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಬಿ.ಎನ್. ಗಂಗಾಧರ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಾಗೇಪಲ್ಲಿ ತಾಲೂಕಿನಲ್ಲಿ ಮರಳು ಗಣಿಗಾರಿಕೆ ಯಥೇಚ್ಚವಾಗಿ ನಡೆಯುತ್ತಿದ್ದು ಗಣಿ ಮಾಲೀಕರಿಂದ ತಿಂಗಳಿಗೊಮ್ಮೆ ಕೆಲ ಪೊಲೀಸರು ಪಾಲು ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು. ಕೂಡಲೇ ಬಾಗೇಪಲ್ಲಿ ಶಾಸಕರು ಸಂಬಂಧಪಟ್ಟ ಪೊಲೀಸರನ್ನು ಮತ್ತು ಸುಳ್ಳು ದೂರು ನೀಡಿದ ವೈದ್ಯಾಧಿಕಾರಿಯನ್ನು ವರ್ಗಾವಣೆ ಮಾಡಿಸಬೇಕೆಂದು ಆಗ್ರಹಿಸಿದರು.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನಲ್ಲಿ ಕಾರ್ತಿಕ್ ಎಂಬ ವ್ಯಕ್ತಿ ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ದಲಿತ ಹೆಣ್ಣು ಮಗಳ ಮೇಲೆ ಸತತ ಅತ್ಯಾಚಾರ ನಡೆಸಿ ಗರ್ಭಿಣಿಯನ್ನಾಗಿಸಿದ ನಂತರ ಗರ್ಭಪಾತ ಮಾಡಿಸಿದ್ದು, ಬಾಲಕಿ ಈ ಬಗ್ಗೆ ದೂರು ನೀಡಿದರೆ ಅಲ್ಲಿನ ಪೊಲೀಸ್ ಠಾಣೆಯ ಅಧಿಕಾರಿಗಳಾದ ತಿರುಮಲೇಶ್ ಹಾಗೂ ನಾಗಮ್ಮ ಮೇಲ್ಜಾತಿಯವರ ಪರ ನಿಂತಿದ್ದಾರೆ. ಬಾಲಕಿ ನೀಡಿದ ಹೇಳಿಕೆ ತಿರುಚಿ ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿದರು.
ದಲಿತ ವಿರೋಧಿ ಪೊಲೀಸ್ ಅಧಿಕಾರಿಗಳ ಅಮಾನತ್ ಹಾಗೂ ಅತ್ಯಾಚಾರಿ ಕಾರ್ತಿಕ್ ಮತ್ತು ಅವರ ಪೋಷಕರನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಡಿ.13 ರಂದು ನಗರದ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಹೊರಟು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು. ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎನ್. ಶ್ರೀನಿವಾಸ್, ಜಿಲ್ಲಾ ಸಂಘಟನಾ ಸಂಚಾಲಕ ವಿಜಯನರಸಿಂಹ, ಕೆ.ವಿ. ವೆಂಕಟೇಶ್, ಕೆ. ನಂಜುಂಡಪ್ಪ, ಡಿ.ಎಂ. ನರಸಿಂಹಯ್ಯ ಇನ್ನೂ ಮೊದಲಾದವರು ಇದ್ದರು.