ಬಾಡಿಗೆ ಪಾವತಿಸದ ಅಂಗಡಿಗಳಿಗೆ ಬೀಗ
ಗುಡಿಬಂಡೆ: ಪಟ್ಟಣದ ಮಸೀದಿ ಮುಂಭಾಗ ಪಪಂನಿಂದ ನಿರ್ಮಿಸಿರುವ ತರಕಾರಿ ಮಾರುಕಟ್ಟೆಯ ಅಂಗಡಿಗಳನ್ನು ಬಾಡಿಗೆಗೆ ಪಡೆದಿರುವವರು ಬಾಡಿಗೆ ಪಾವತಿಸದ ಕಾರಣ ಪಪಂ ಮುಖ್ಯಾಧಿಕಾರಿ ಸಿಬ್ಬಂದಿ ಜೊತೆ ತೆರಳಿ ಅಂಗಡಿಗಳಿಗೆ ಬೀಗ ಮುದ್ರೆ ಜಡಿದರು.
ಸುಮಾರು ರು. 19 ಲಕ್ಷ ವೆಚ್ಚದಲ್ಲಿ ಒಟ್ಟು 11 ಅಂಗಡಿಗಳನ್ನು ನಿರ್ಮಿಸಲಾಗಿದ್ದು, 8 ಅಂಗಡಿಗಳನ್ನು ಪಟ್ಟಣದ ತರಕಾರಿ ವ್ಯಾಪಾರಸ್ಥರಿಗೆ ಬಾಡಿಗೆಗೆ ನೀಡಲಾಗಿದೆ. ಆದರೆ ಸಕಾಲಕ್ಕೆ ಬಾಡಿಗೆ ಹಣ ಪಾವತಿಸಿದ ಹಿನ್ನೆಲೆಯಲ್ಲಿ ಕ್ರಮಕೈಗೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಬೇನಾಮಿ ಹಸ್ತಾಂತರ: ಹರಾಜು ಮೂಲಕ ಬಾಡಿಗೆಗೆ ಪಡೆದಿರುವ ಹಲವು ಮೂಲ ಬಾಡಿಗೆದಾರರು ಪಪಂ ಗಮನಕ್ಕೆ ತರದೆ ಬೇನಾಮಿ ವ್ಯಕ್ತಿಗಳಿಂದ ಹಣ ಪಡೆದು ಅಂಗಡಿಗಳನ್ನು ಹಸ್ತಾಂತರ ಮಾಡಿರುವ ವಿಷಯ ಈ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.
ನಿರೀಕ್ಷಿತ ಮಟ್ಟದಲ್ಲಿ ವ್ಯಾಪಾರ ನಡೆಯುತ್ತಿಲ್ಲ. ಆದ್ದರಿಂದ ನಿಗದಿತ ಬಾಡಿಗೆ ಪಾವತಿಸಲು ಆಗುತ್ತಿಲ್ಲ. ಕಾಲಾವಕಾಶ ಕೊಟ್ಟರೆ ಬಾಕಿ ಕಟ್ಟಲು ಸಾಧ್ಯವೆಂದು ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಅಂಗಡಿ ಮಾಲೀಕರಾದ ಶ್ರೀನಿವಾಸ್, ಅಶ್ವತ್ಥಪ್ಪ, ನಾಗೇಶ ತಿಳಿಸಿದರು.
ಅಧಿಕಾರಿ ಸ್ಪಷ್ಟನೆ: ಪಪಂ ಮುಖ್ಯಾಧಿಕಾರಿ ಶ್ರೀರಾಮರೆಡ್ಡಿ ಬಾಡಿಗೆಗೆ ಪಡೆದಿರುವ ಎಂಟು ಮಂದಿ ವ್ಯಾಪರಸ್ಥರಿಂದ ಸುಮಾರು ರು. 2.5 ಲಕ್ಷ ಬಾಡಿಗೆ ಬಾಕಿಯಿದೆ. ಬಾಕಿ ಪಾವತಿಸುವಂತೆ ಈಗಾಗಲೇ ಸಂಬಂಧಪಟ್ಟ ಎಲ್ಲರಿಗೂ ಕಳೆದ ಏಪ್ರಿಲ್, ಜೂನ್ ಮತ್ತು ಸೆಪ್ಟಂಬರ್ ತಿಂಗಳುಗಳಲ್ಲಿ ಮೂರು ಬಾರಿ ಲಿಖಿತ ನೋಟಿಸ್ ನೀಡಲಾಗಿದೆ. ಅಂಗಡಿ ಮಳಿಗೆಗಳ ಅವಧಿ ಮೂರು ವರ್ಷಗಳಾಗಿದ್ದು, 2013 ಜೂನ್ ತಿಂಗಳಿಗೆ ಮುಕ್ತಾಯವಾಗಲಿದೆ. ನಿಯಮಗಳ ಪ್ರಕಾರ ಹಾಲಿ ಬಾಡಿಗೆದಾರರು ಬಾಕಿ ಚುಕ್ತಾ ಮಾಡಿ ಅಂಗಡಿಗಳನ್ನು ತೆರವುಗೊಳಿಸಬೇಕಾಗಿದೆ.
ಆದರೆ ಇವರು ನಿಯಮಗಳನ್ನು ಪಾಲಿಸದ ಕಾರಣ ಕಾನೂನು ಪ್ರಕಾರ ಕ್ರಮ ಜರುಗಿಸಲಾಗಿದೆ ಎಂದು ತಿಳಿಸಿದ್ದಾರೆ.