ರೇಷ್ಮೆ ಇಲಾಖೆ ಕಚೇರಿಗೆ ಸ್ವಂತ ಕಟ್ಟಡವಿಲ್ಲ
ಟೇಕಲ್: ಮಾಲೂರು ತಾ. ಟೇಕಲ್ ಹಾಗೂ ಮಾಸ್ತಿ ಹೋಬಳಿಗಳಲ್ಲಿ ಸುಮಾರು 20 ವರ್ಷಗಳಿಂದ ರೇಷ್ಮೆ ಇಲಾಖೆ ಕಚೇರಿಗೆ ಸ್ವಂತ ಕಟ್ಟಡವಿಲ್ಲದೆ ರೈತ ಸಮುದಾಯ ಭವನದಲ್ಲಿ ಕೆಲಸ ನಿರ್ವಹಿಸುತ್ತಿದೆ. ಸುಮಾರು ವರ್ಷಗಳಿಂದ ಸರ್ಕಾರ, ಜಿಲ್ಲಾಡಳಿತಕ್ಕೆ ಈ ಬಗ್ಗೆ ಮಾಹಿತಿ ಗೊತ್ತಿದ್ದರೂ ಕಣ್ಮುಚ್ಚಿ ಕುಳಿತಿದೆ.
ರೇಷ್ಮೆ ಬೆಳೆಗಾರರು ಟೇಕಲ್ ಹಾಗೂ ಮಾಸ್ತಿ ವ್ಯಾಪ್ತಿಯಲ್ಲಿ 3000 ಕ್ಕೂ ಹೆಚ್ಚು ರೈತರು ಬೆಳೆಗಾರರಿದ್ದು, ಇವರಿಗೆ ಸರಿಯಾದ ಮಾಹಿತಿ, ಪ್ರಾತ್ಯಕ್ಷಿಕೆ, ವಿಚಾರಧಾರೆ ಹಲವಾರು ಸಂಗತಿ ತಿಳಿಯಪಡಿಸುವಲ್ಲಿಯೂ ಸಿಬ್ಬಂದಿ ಕೊರತೆ ಉಂಟಾಗಿದೆ. ರೇಷ್ಮೆ ವಿಸ್ತರಣಾಧಿಕಾರಿಗಳು ಇದ್ದರೆ ರೈತನಿಗೆ ಮಾಹಿತಿ ಸುಲಭದಲ್ಲಿ ಸಿಗುತ್ತದೆ.
ಸಿಬ್ಬಂದಿ ಕೊರತೆ: ಇಲ್ಲಿನ ರೇಷ್ಮೆ ಇಲಾಖೆಯಲ್ಲಿ ಇಬ್ಬರು ರೇಷ್ಮೆ ಪ್ರದರ್ಶಕರು ಇದ್ದಾರೆ. ವಿಸ್ತರಣಾಧಿಕಾರಿ ಅಲ್ಲದೇ ಜವಾನ, ಗುಮಾಸ್ತ, ಕಂಪ್ಯೂಟರ್ ಆಪರೇಟರ್ ಯಾರೂ ಇಲ್ಲ. ಇರುವ ರೇಷ್ಮೆ ಪ್ರದರ್ಶಕರೇ ರೇಷ್ಮೆ ಬೆಳೆಗಾರರಿಗೆ ಪ್ರತಿ ಹಳ್ಳಿ ಹಳ್ಳಿಗೂ ಹೋಗಿ ಕ್ಷೇತ್ರವಾರು ರೇಷ್ಮೆ ಹುಳು ಸಾಕಾಣಿಕೆ ವಿಚಾರಧಾರೆಯನ್ನು ತಿಳಿಯಪಡಿಸುತ್ತಿದ್ದಾರೆ ಹಾಗೂ ಕಚೇರಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ರೈತ ಭವನದಲ್ಲಿ ರೇಷ್ಮೆ ಇಲಾಖೆ: ಟೇಕಲ್ ರೇಷ್ಮೆ ಇಲಾಖೆ ಕಚೇರಿ ಸುಮಾರು 18 ವರ್ಷದಿಂದ ಬಾಡಿಗೆ ಕಟ್ಟಡದಲ್ಲಿತ್ತು. ಈಗ 2 ವರ್ಷದಿಂದ ಇಲ್ಲಿನ ಸಂತೆ ಮೈದಾನದಲ್ಲಿರುವ ರೈತ ಭವನದಲ್ಲಿ ತಾತ್ಕಾಲಿಕವಾಗಿ ಕಚೇರಿ ಸ್ಥಳಾಂತರಗೊಂಡಿದೆ.
ತಾಲೂಕಿನಲ್ಲಿ ತಾ. ರೇಷ್ಮೆ ವಿಸ್ತರಣಾಧಿಕಾರಿ ಬಿಟ್ಟರೆ ಟೇಕಲ್, ಮಾಸ್ತಿಗಳಲ್ಲಿ ಸುಮಾರು 5 ವರ್ಷಗಳಿಂದ ವಿಸ್ತರಣಾಧಿಕಾರಿ ಹುದ್ದೆಗೆ ಯಾರೂ ಬಂದಿಲ್ಲ. ಈ ಬಗ್ಗೆ ಇಲಾಖೆಯಲ್ಲಿ ವಿಚಾರಿಸಿದರೆ ಆ ಹುದ್ದೆಯನ್ನೇ ತೆಗೆಯಲಾಗಿದೆ ಎಂದು ಉತ್ತರಿಸುತ್ತಾರೆ. ಸರ್ಕಾರ ಗಮನ ಹರಿಸಿ ರೇಷ್ಮೆ ಬೆಳೆಗಾರರ ಕಷ್ಟಗಳಿಗೆ ಸ್ಪಂದಿಸಬೇಕೆಂದು ಬೆಳೆಗಾರರು ಆಗ್ರಹಿಸಿದ್ದಾರೆ.