'ಸಮಾಜ ಬೆಂಬಲದಿಂದ 4 ಬಾರಿ ಶಾಸಕ ಪದವಿ'
ಗೌರಿಬಿದನೂರು: ತಾಲೂಕಿನ ಎಲ್ಲಾ ಸಮುದಾಯದವರು ತಮ್ಮನ್ನು ಬೆಂಬಲಿಸಿದಂತೆ ನಾಯಕ ಸಮುದಾಯವೂ ತಮ್ಮನ್ನು ಬೆಂಬಲಿಸುತ್ತಾ ಬಂದಿದೆ. ಆದ್ದರಿಂದಲೇ ತಾವು ಸತತವಾಗಿ ನಾಲ್ಕನೆಯ ಬಾರಿ ಶಾಸಕರಾಗಿ ಆಯ್ಕೆಯಾಗಲು ಸಾಧ್ಯವಾಯಿತು ಎಂದು ಉಪಸಭಾಧ್ಯಕ್ಷ ಎನ್.ಎಚ್.ಶಿವಶಂಕರರೆಡ್ಡಿ ಹೇಳಿದರು.
ಪಟ್ಟಣದಲ್ಲಿ ತಾಲೂಕು ನಾಯಕ ಸಂಘ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಚುನಾವಣೆಯಲ್ಲಿ ಮತ ನೀಡಿ ಆಶೀರ್ವದಿಸಿರುವ ತಾವುಗಳಿಂದು ಸನ್ಮಾನ ಮಾಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದೀರಿ. ಇದಕ್ಕೆ ತಾವು ಋಣಿ ಎಂದು ತಿಳಿಸಿದ ರೆಡ್ಡಿ ತಮ್ಮ ಜೊತೆಗೆ ಸನ್ಮಾನ ಸ್ವೀಕರಿಸಿದ ಜಲ ಶಿಕ್ಷಕ ಕೆ.ನಾರಾಯಣಸ್ವಾಮಿ ಒಳ್ಳೆಯ ಪರಿಸರವಾದಿ. ಅವರು ತಮ್ಮ ಶಿಕ್ಷಕ ವೃತ್ತಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದರ ಜೊತೆಗೆ ಶೋಷಿತ ವರ್ಗಗಳ ಏಳ್ಗೆಗೆ ಶ್ರಮಿಸಿದ್ದಾರೆ. ಇವರ ಸೇವಾ ಗುಣವನ್ನು ಗುರುತಿಸಿ ಸರ್ಕಾರ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ ಎಂದು ತಿಳಿಸಿದರು.
ಮುಖಂಡ ಅಶೋಕಕುಮಾರ್ ಮಾತನಾಡಿ ಎನ್.ಎಚ್.ಶಿವಶಂಕರರೆಡ್ಡಿಯವರು ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳೇ ಅವರನ್ನು ನಾಲ್ಕನೆಯ ಬಾರಿ ಶಾಸಕರನ್ನಾಗಿ ಮಾಡಿವೆ. ಹಾಗೆಯೇ ಇಂದು ಸನ್ಮಾನ ಸ್ವೀಕರಿಸುತ್ತಿರುವ ಶಿಕ್ಷಕ ಕೆ.ನಾರಾಯಣಸ್ವಾಮಿ ಶೋಷಿತರ ಧ್ವನಿಯಾಗಿ ಜಿಲ್ಲೆಯಲ್ಲಿನ ಜನಪರ ಹೋರಾಟಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ ಎಂದು ಹೇಳಿದರು.
ರಾಜ್ಯೋತ್ಸವ ಪ್ರಶಸ್ತಿ ವಿಜೇತ ಜಲ ಶಿಕ್ಷಕ ಕೆ.ನಾರಾಯಣಸ್ವಾಮಿ ಮಾತನಾಡಿ ತಾವು ಯಾವುದೇ ಒಂದು ಜನಾಂಗಕ್ಕೆ ಸೀಮಿತವಾದವರಲ್ಲ, ಸಮಾಜದಲ್ಲಿ ಹಲವು ಮಂದಿ ಪ್ರತಿಭಾವಂತರಿದ್ದು, ಅವರಿಗೆ ಸರ್ಕಾರ ಪ್ರಶಸ್ತಿ ನೀಡುವ ಮೂಲಕ ಅವರ ಸೇವೆಯನ್ನು ಗುರುತಿಸಬೇಕೆಂದು ಕೋರಿದರು.
ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ನಾಗರಾಜಪ್ಪ ತಾಲೂಕಿನಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ಸಮುದಾಯದವರು ಮುಂದಾಗಬೇಕೆಂದರು.
ನಿವೃತ್ತ ಉಪವಿಭಾಗಾಧಿಕಾರಿ ಭಕ್ತ ರಾಮೇಗೌಡ ಮಾತನಾಡಿ ಎನ್.ಎಚ್.ಶಿವಶಂಕರರೆಡ್ಡಿ ಮತ್ತು ಕೆ.ನಾರಾಯಣಸ್ವಾಮಿಯವರ ಸೇವಾ ತತ್ಪರತೆಯನ್ನು ಕೊಂಡಾಡಿದರು. ಜಿಪಂ ನಿವೃತ್ತ ಸಿಇಒ ಎಸ್.ರಾಜಾರಾಂ, ಆಯುಕ್ತ ಎಚ್.ವೇಣುಗೋಪಾಲ್ ಮಾತನಾಡಿದರು.
ತಾಪಂ ಅಧ್ಯಕ್ಷೆ ಲಕ್ಷ್ಮಿದೇವಪ್ಪ, ತಾ. ಕಸಾಪ ಅಧ್ಯಕ್ಷ ಡಿ.ಜೆ.ಚಂದ್ರಮೋಹನ್, ಅಂಜನಪ್ಪ, ಡಾ.ಎಂ.ಹನುಮಂತಪ್ಪ, ಸಾಹಿತಿ ಮ.ನಾ.ಕೃಷ್ಣಮೂರ್ತಿ, ತಿಪ್ಪಣ್ಣ, ತಿಮ್ಮಯ್ಯ ವೇದಿಕೆಯಲ್ಲಿದ್ದರು. ಸರಳಾ ಕೃಷ್ಣಮೂರ್ತಿ ಪ್ರಾರ್ಥಿಸಿದರು. ಉಪನ್ಯಾಸಕ ಟಿ.ನಂಜುಂಡಪ್ಪ ಸ್ವಾಗತಿಸಿದರು. ವಕೀಲ ಎಂ.ಎಸ್.ಆನಂದ ನಿರೂಪಿಸಿದರು.