ಹೊಸ ಕೆರೆ ಹಸ್ತಾಂತರ ಖಂಡಿಸಿ ಪ್ರತಿಭಟನೆ
ಚಿಕ್ಕಬಳ್ಳಾಪುರ: ದಂಡಿಗಾನಹಳ್ಳಿ ಹೊಸ ಕೆರೆಯನ್ನು ಕುಡಿಯುವ ನೀರಿನ ಯೋಜನೆಗಾಗಿ ಗೌರಿಬಿದನೂರು ಪುರಸಭೆಗೆ ಹಸ್ತಾಂತರಿಸುತ್ತಿರುವುದನ್ನು ಖಂಡಿಸಿ ಮಂಚೇನಹಳ್ಳಿ ಹೋಬಳಿ ಜನರು ಇಲ್ಲಿನ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಮಂಡಳಿಯ ಉಪ ವಿಭಾಗದ ಸಹಾಯಕ ಕಾರ್ಯ ಪಾಲಕ ಅಭಿಯಂತರ ಚಂದ್ರಶೇಖರ್ ಅವರನ್ನು ಮುತ್ತಿಕೊಂಡ ಗ್ರಾಮಸ್ಥರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಆಕ್ರೋಶಗೊಂಡಿದ್ದ ಕೆಲವರು ಅವರನ್ನು ಎಳೆದಾಡಿ ಹಲ್ಲೆಗೆ ಯತ್ನಿಸಿದಾಗ ಮುಖಂಡರು ಸಮಾಧಾನಪಡಿಸಿದರು. ಯಾವುದೇ ಕಾರಣಕ್ಕೂ ಹಸ್ತಾಂತರಿಸಬಾರದು.
ಜೊತೆಗೆ ಈಗಾಗಲೇ ಸಣ್ಣ ನೀರಾವರಿ ಇಲಾಖೆಗೆ ಹಸ್ತಾಂತರಕ್ಕೆ ಕೋರಿರುವ ಪತ್ರವನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು.
ರಾಜಕೀಯ ಮಾಡಲು ಇಚ್ಚೆಯಿದ್ದರೆ ಕೆಲಸಕ್ಕೆ ರಾಜಿನಾಮೆ ಕೊಟ್ಟು ಮನೆ ಹೋಗಿ, ಕಚೇರಿಯಲ್ಲಿ ಕುಳಿತು ರಾಜಕೀಯ ಮಾಡಬೇಡಿ ಎಂದು ತರಾಟೆಗೆ ತೆಗೆದುಕೊಂಡ ಜನರು, ಗೌರಿಬಿದನೂರು ಶಾಸಕ ಮತ್ತು ವಿಧಾನಸಭಾ ಉಪ ಸಭಾಪತಿ ಎನ್.ಎಚ್. ಶಿವಶಂಕರರೆಡ್ಡಿಗೆ ಧಿಕ್ಕಾರ ಕೂಗಿ, ಕಚೇರಿಗೆ ಬೀಗ ಜಡಿದರು.
ಇದರಿಂದ ಚಂದ್ರಶೇಖರ್ ಕ್ರಮ ಕೈಗೊಳ್ಳಲು ಪತ್ರ ಬರೆಯುವುದಾಗಿ ಭರವಸೆ ನೀಡಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು. ಪ್ರತಿಭಟನೆಯಲ್ಲಿ ಮಂಚೇನಹಳ್ಳಿ ಗ್ರಾಪಂ ಅಧ್ಯಕ್ಷ ಶ್ರೀರಂಗಪ್ಪ, ಮಾಜಿ ಅಧ್ಯಕ್ಷ ರಿಯಾಜ್, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀನಾರಾಯಣ್, ಬಾಲಕೃಷ್ಣ, ಪ್ರಕಾಶ್, ರಾಜಶೇಖರ್ ರೆಡ್ಡಿ ಭಾಗವಹಿಸಿದ್ದರು.
ಗೌರಿಬಿದನೂರು ಪಟ್ಟಣಕ್ಕೆ ದಂಡಿಗಾನಹಳ್ಳಿ ಕೆರೆಯ ಮೂಲಕ ಕುಡಿಯುವ ನೀರನ್ನು ಒದಗಿಸುವ ಯೋಜನೆಯನ್ನು ರೂಪಿಸಲು ಮುಂದಾಗಿರುವುದು ಅವೈಜ್ಞಾನಿಕ.ಅಧಿಕಾರಿಗಳು ಸಂಬಂಧಪಟ್ಟವರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಈ ಯೋಜನೆಯನ್ನು ತಮ್ಮ ಗಮನಕ್ಕೂ ತಂದಿಲ್ಲ. ಜನರು ಗಲಾಟೆ ಮಾಡಿದ ನಂತರ ತಿಳಿದುಬಂದಿದ್ದು ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತುಕತೆ ನಡೆಸಿ ಸ್ಥಳೀಯವಾಗಿ ವಿರೋಧಿಸುತ್ತಿರುವ ಜನರ ಅಭಿಪ್ರಾಯ ಪರಿಗಣಿಸಬೇಕಾಗಿರುವುದರ ಬಗ್ಗೆ ಗಮನ ಸೆಳೆದಿದ್ದೇನೆ.
- ಡಾ.ಕೆ. ಸುಧಾಕರ್, ಶಾಸಕ