16 ರಂದು ಹೆದ್ದಾರಿ ಬಂದ್
ಕನ್ನಡಪ್ರಭ ವಾರ್ತೆ, ಕೋಲಾರ, ಡಿ.10
ಬಗರ್ಹುಕುಂ ಸಾಗುವಳಿ ಸಕ್ರಮ, ಕಾಲುಬಾಯಿ ರೋಗದಿಂದ ಸತ್ತಿರುವ ಜಾನುವಾರುಗಳಿಗೆ ಪರಿಹಾರ ಹಾಗೂ ಕೃಷಿ ಸಾಲ ಸೇರಿದಂತೆ ರೈತರ ಹಾಗೂ ಕೂಲಿಕಾರರ ಪ್ರಮುಖ ಬೇಡಿಕೆ ಈಡೇರಿಸಲು ರಾಜ್ಯ ಸರ್ಕಾರ ವಿಫಲವಾಗಿರುವುದರಿಂದ ಡಿ.16 ರಂದು ಜಿಲ್ಲೆಯಾಧ್ಯಂತ ಹೆದ್ದಾರಿ ಬಂದ್ ಮಾಡಲಾಗುವುದೆ ಎಂದು ಕರ್ನಾಟಕ ರಾಜ್ಯ ಪ್ರಾಂತ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬಯ್ಯಾರೆಡ್ಡಿ ತಿಳಿಸಿದರು.
ನಗರದ ಸಿಪಿಎಂ ಕಚೇರಿಯಲ್ಲಿ ಮಂಗಳವಾರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತರು ಮತ್ತು ಕೃಷಿ ಕೂಲಿಕಾರರ ಬೇಡಿಕೆ ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಬೆಳಗಾಂನಲ್ಲಿ ನಡೆದ ವಿಧಾನಸಭೆಯ ಅಧಿವೇಶನದಲ್ಲಿ ಸೂಕ್ತ ಭರವಸೆ ಸಿಗುವುದೆಂಬ ವಿಶ್ವಾಸವಿತ್ತು. ಆದರೆ, ಅಧಿವೇಶನದಲ್ಲಿ ರೈತರ ಸಮಸ್ಯೆಗಳ ಕುರಿತು ಚರ್ಚೆ ಆಗಲೇ ಇಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಬಗರ್ಹುಕುಂ ಸಾಗುವಳಿ ಸಕ್ರಮ, ನಿವೇಶನ ರಹಿತರಿಗೆ ಮನೆ ಹಂಚಿಕೆ, ಉದ್ಯೋಗ ಖಾತ್ರಿ ಯೋಜನೆಯ ಸಮರ್ಪಕ ಜಾರಿ, ಬ್ಯಾಂಕ್ಗಳಲ್ಲಿ ಕೃಷಿ ಸಾಲ ನೀಡಿಕೆ, ಕಾಲುಬಾಯಿ ರೋಗದಿಂದ ಸೂಕ್ತ ಪರಿಹಾರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಸಾರಿಗೆ ವ್ಯವಸ್ಥೆಗೆ ಆಗ್ರಹಿಸಿ ಡಿ.16 ರಂದು ಹೋರಾಟ ಹಮ್ಮಿಕೊಳ್ಳಲಾಗಿದ್ದು ಜಿಲ್ಲೆಯ ಜನತೆ ಸಹಕಾರ ನೀಡಬೇಕೆಂದು ಕೋರಿದರು.
ಜಿಲ್ಲೆಯಲ್ಲಿ 13 ಅರ್ಜಿಗಳು ಬಾಕಿ:
ರಾಜ್ಯದಲ್ಲಿ 4.25 ಲಕ್ಷ ರೈತರು ಬಗರ್ಹುಕುಂ ಸಾಗುವಳಿಯ ಸಕ್ರಮಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಕೋಲಾರದಲ್ಲಿ 13 ಸಾವಿರ ಅರ್ಜಿಗಳು ಬಾಕಿ ಇದೆ. ಭೂ ಮಂಜೂರಾತಿ ಸಮಿತಿಗಳು ರಚನೆಯಾಗದೆ ಅರ್ಜಿ ಇತ್ಯರ್ಥವಾಗಿಲ್ಲವೆಂದು ದೂರಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ನಾವು ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದಾಗ 2 ತಿಂಗಳಲ್ಲಿ ಸಮಿತಿ ರಚಿಸಿ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದರಾದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಮಹಾನಗರ ಪಾಲಿಕೆಯ 18 ಕಿಮೀ , ನಗರ ಪಾಲಿಕೆಯ 10 ಕಿಮೀ, ನಗರಸಭೆಯ 8 ಕಿಮೀ ಹಾಗೂ ಪುರಸಭೆಯ 3 ಕಿಮೀ ವ್ಯಾಪ್ತಿಯಲ್ಲಿ ಬಗರ್ಹುಕುಂ ಸಾಗುವಳಿ ಸಕ್ರಮಗೊಳಿಸಲು ಸಾಧ್ಯವಿಲ್ಲ ಎಂಬ ಆದೇಶವಿದೆ. ಪ್ರಸ್ತತ ನಗರ ಪಾಲಿಗೆ ಬೃಹತ್ ಬೆಂಗಳೂರು ಆಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ. ಇದರಿಂದ ಆನೇಕಲ್ ತಾಲೂಕು ಸಂಪೂರ್ಣ, ಬೆಂಗಳೂರು ಉತ್ತರ ಹಾಗೂ ದಕ್ಷಿಣ ತಾಲೂಕುಗಳ ವ್ಯಾಪ್ತಿಯಲ್ಲೂ ಸಕ್ರಮಗೊಳಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಪುನರ್ಪ್ರಿಶೀಲನೆ ನಡೆಸಬೇಕೆಂದು ಬಯ್ಯಾರೆಡ್ಡಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಕೇಂದ್ರದಿಂದ ಪರಿಹಾರ ಕಲ್ಪಿಸಲು ಕೇಂದ್ರ ಸಚಿವರಾದ ಕೆ.ಎಚ್. ಮುನಿಯಪ್ಪ ಮತ್ತು ವೀರಪ್ಪ ಮೊಯ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಾಯಿಸಬೇಕೆಂದರು.
ಇತ್ತೀಚೆಗೆ ನಡೆದ ಅಧಿವೇಶನದಲ್ಲಿ ಎಸ್ಮಾ ಜಾರಿಗೊಳಿಸಲು ಸಿ.ಎಂ ಸಿದ್ದರಾಮಯ್ಯ ತೀರ್ಮಾನ ತೆಗೆದುಕೊಂಡಿದ್ದಾರೆ. ಅವರಿಂದ ಇಂತಹ ಕರಾಳ ಕಾಯಿದೆಯನ್ನು ಹಿಂದಕ್ಕೆ ಪಡೆಯಬೇಕು. ಶಾಸಕ ಕೆ.ಆರ್. ರಮೇಶ್ಕುಮಾರ್ ಕಾಯಿದೆಯನ್ನು ವಿರೋಧಿಸಿದ್ದರು. ಆದರೂ ಸರ್ಕಾರ ಕಾಯಿದೆ ಜಾರಿಗೆ ಮುಂದಾಗಿರುವುದು ಸೂಕ್ತವಲ್ಲವೆಂದರು.
ಕೆಪಿಆರ್ಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಎಂ. ವೆಂಕಟೇಶ್ ಮಾತನಾಡಿ, ಡಿ. 16ರಂದು ರಾಷ್ಟ್ರೀಯ ಹೆದ್ದಾರಿ 4ರ ನರಸಾಪುರದ ಬಳಿ ಹಾಗೂ ಶ್ರೀನಿವಾಸಪುರ, ಬಂಗಾರಪೇಟೆ ರಾಜ್ಯ ಹೆದ್ದಾರಿಗಳಲ್ಲಿ, ಬೇತಮಂಗಲದ ಕಡೆ ರಸ್ತೆ ತಡೆ ನಡೆಸಲಾಗುವುದು ಎಂದು ತಿಳಿಸಿದರು
ಕೆಪಿಆರ್ಎಸ್. ತಾಲೂಕು ಅಧ್ಯಕ್ಷ ಕುರ್ಕಿ ದೇವರಾಜ್, ಮುಖಂಡರಾದ ಪಿ.ಆರ್. ನವೀನ್ಕುಮಾರ್, ಗಂಗಮ್ಮ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.