ಕಾಲುಬಾಯಿ ಜ್ವರ; ಬಾರದ ಪರಿಹಾರ
ಮುಳಬಾಗಲು: ತಾಲೂಕಿನಲ್ಲಿ ಕಾಲುಬಾಯಿ ಜ್ವರಕ್ಕೆ ಸಾವಿಗೀಡಾದ ಜಾನುವಾರುಗಳಿಗೆ ಪರಿಹಾರ ಸಿಗದಿರುವುದು ರೈತರಿಗೆ ಚಿಂತೆ 'ಮೂಡಿಸಿದೆ.ಹೆಮ್ಮಾರಿಯಾಗಿ ಬಂದ ಕಾಲುಬಾಯಿ ಜ್ವರ 606 ಜಾನುವಾರುಗಳನ್ನು ಬಲಿತೆಗೆದುಕೊಂಡಿದೆ.
ಪ್ರತಿ ದಿವಸ ಎರಡರಿಂದ ಮೂರು ಜಾನುವಾರುಗಳು ಸಾವಿಗೀಡಾಗುತ್ತಿರುವುದು ರೈತರನ್ನು ಕಂಗಾಲು ಮಾಡಿದೆ. ಆದರೆ ಮುಳಬಾಗಲು ತಾಲೂಕಿನ ಬೈರಕೂರು ಹೋಬಳಿಯ ಹೆಬ್ಬಣಿ ಗ್ರಾಪಂಕೆಲವು ಗ್ರಾಮಗಳ ಹೊರತಾಗಿ ಬೇರೆಡೆ ಕಾಲುಬಾಯಿ ಜ್ವರ ನಿಯಂತ್ರಣಕ್ಕೆ ಬಂದಿದೆ ಎನ್ನುತ್ತಾರೆ ಪಶುಪಾಲನೆ ಸಹಾಯಕ ನಿರ್ದೇಶಕ ಡಾ. ರಮಾನಂದ್. ತಾಲೂಕಿನಲ್ಲಿ 65,515 ಜಾನುವಾರುಗಳಿಗೆ ಈವರೆವಿಗೂ ಲಸಿಕೆ ಹಾಕಲಾಗಿದೆ. 3,840 ಜಾನುವಾರುಗಳು ಕಾಲುಬಾಯಿ ಜ್ವರದಿಂದ ನರಳುತ್ತಿದ್ದು, ಕೆಲ ಜಾರುವಾರುಗಳು ಲಸಿಕೆ ಹಾಕಿಸಿಕೊಂಡು ಗುಣಮುಖವಾಗಿ ತಿಂಗಳ ನಂತರ ಔಷಧಿಯ ಪರಿಣಾಮವಾಗಿ ಸಾವಿಗೀಡಾಗಿದೆ. ಗ್ರಾಮಗಳಲ್ಲಿ ಕಾಲುಬಾಯಿ ಮುಂದುವರಿಸಿದೆ. ಈ ಕಾರಣವಾಗಿ ರೈತರ ಅರ್ಥಿಕ ಪರಿಸ್ಧಿತಿಯ ಮೇಲೆ ತೀವ್ರವಾದ ಪ್ರಭಾವವನ್ನು ಬೀರಿದೆ. ಇದು ಹಾಲು ಉತ್ಪಾದಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಬೆಂಗಳೂರು ನಗರದ ಅಟಾಮಸ್, ಐಎಎಚ್ ಮತ್ತು ವಿಬಿ ಸಂಸ್ಥೆಗಳಯ ವಿಜ್ಞಾನಿಗಳು ಹಲವಾರು ಗ್ರಾಮಗಳಿಗೆ ಭೇಟೆ ನೀಡಿ ಜಾನುವಾರುಗಳ ರಕ್ತ ಹಾಗೂ ಅಂಗಾಂಗಗಳನ್ನು ಪ್ರಯೋಗಲಯಕ್ಕೆ ತೆಗೆದುಕೊಂಡು ಹೋಗಿ ಪರಿಶೀಲಮನೆ ನಡೆಸಿದ್ದಾರೆ.
ಕಾಲು ಬಾಯಿ ಓ ಟೈಪ್ ಎಂದು ದೃಢೀಕರಿಸಿದ್ದಾರೆ. ರಾಜ್ಯ ಸರ್ಕಾರ ಕಾಲುಬಾಯಿ ಜ್ವರದಿಂದ ಮರಣಹೊಂದಿದ ಜಾನುವಾರುಗಳಿಗೆ ಪರಿಹಾರ ನೀಡುವ ಕುರಿತು ಅಕ್ಟೋಬರ್ 17ರಂದು ಆದೇಶ ಹೊರಡಿಸಿದೆ. ಹಸುಗಳಿಗೆ ರು. 25 ಸಾವಿರ, ಎತ್ತುಗಳಿಗೆ ರು. 20 ಸಾವಿರ, ಪಡ್ಡೆಗಳಿಗೆ ರು. 10ಸಾವಿರ, ಕರುಗಳಿಗೆ ರು. 5 ಸಾವಿರ ಎಂದು ನಿಗದಿಪಡಿಸಿದೆ. ಜೊತೆಗೆ ತಹಸೀಲ್ದಾರ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ ಜಾನುವಾರುಗಳು ಮೃತವಾಗಿರುವ ಬಗ್ಗೆ ಕಂದಾಯ ಇಲಾಖೆ ಸಹ ವರದಿ ಸಲ್ಲಿಸಿದೆ.
ಅದರಂತೆ ಪಶುಪಾಲನ ಸಹಾಯಕ ನಿರ್ದೇಶಕ ಡಾ. ರಮಾನಂದ್ ಈಗಾಗಲೇ ಮೊದಲ ಹಂತವಾಗಿ ನವೆಂಬರ್ 16ರಂದು 416 ಜಾನುವಾರುಗಳಿಗೆ ಪರಿಹಾರ ನೀಡಲು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಆದರೆ ಇದುವರೆವಿಗೂ ಬಿಡಿಗಾಸು ಪರಿಹಾರ ಬಂದಿಲ್ಲ. ಎರಡನೇ ಹಂತದಲ್ಲಿ ಮೃತವಾಗಿರುವ ಜಾನುವಾರುಗಳ ಪಟ್ಟಿ ಸಿದ್ಧವಾಗಿದೆ. ಇನ್ನು ಮೊದಲ ಹಂತದಲ್ಲಿಯೇ ಪರಿಹಾರ ಬಾರದ ಬಗ್ಗೆ ತಾಲೂಕಿನ ಮಂಡಿಕಲ್ ಗ್ರಾಮದ ಸಾಮಣ್ಣ, ಭಾಸ್ಕರಾಚಾರಿ, ವೈ. ಕೃಷ್ಣಪ್ಪ ಮತ್ತು ದೊಡ್ಡಗುರ್ಕಿ ಜಾನುವಾರುಗಳನ್ನು ಕಳೆದು ಕೊಂಡ ರೈತರು ಪರಿಹಾರ ವಿಳಂಭಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ. ಪರಿಹಾರ ನೀಡಲು ವಿಳಂಬವೇಕೆ ಎಂದು ರಾಜ್ಯ ಕಿಸಾನ್ ಸಭೆ ಪ್ರಧಾನ ಕಾರ್ಯದರ್ಶಿ ಎಂ. ಗೋಪಾಲ್ ಪ್ರಶ್ನಿಸುತ್ತಾರೆ.
-ಬಿ.ಎನ್. ಮುಕುಂದ