ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕುಡಿಯುವ ನೀರಿನ ಘಟಕ ಉದ್ಘಾಟನೆ

Vishwanath S
Updated On : 11 Dec 2013, 1:04 am

ಗೌರಿಬಿದನೂರು: ತಾಲೂಕಿನ ಮಂಚೇನಹಳ್ಳಿ ಹೋಬಳಿಯ ಗೌಡಗೆರೆ ಗ್ರಾಮದಲ್ಲಿ ರೋಟರಿ ಕ್ಲಬ್ ವಿಜಯನಗರ ಬೆಂಗಳೂರು ಮತ್ತು ಗೌಡಗೆರೆ ಗ್ರಾಪಂ ಸಹಯೋಗದೊಂದಿಗೆ ನೂತನ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಿದ್ದು, ಘಟಕವನ್ನು ಗ್ರಾಪಂ ಅಧ್ಯಕ್ಷೆ ವರಲಕ್ಷ್ಮೀ ಪ್ರಕಾಶ್ ಉದ್ಘಾಟಿಸಿದರು.
  ಗ್ರಾಮದ ಎಲ್ಲರಿಗೆ ಉಪಯೋಗವಾಗುವ ನೀರಿನ ಘಟಕ ಇದಾಗಿದ್ದ್ದು ಗ್ರಾಮದ ಜನತೆ ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಗ್ರಾಮೀಣ ಭಾಗಗಳಲ್ಲಿ ಪ್ಲೋರೈಡ್‌ಯುಕ್ತ ನೀರು ಕಂಡು ಬರುತ್ತಿದ್ದು, ಜನತೆ ಆರೋಗ್ಯದ ಬಗ್ಗೆ ಕಾಳಜಿವಹಿಸಿ ವಿಜಯನಗರದ ರೋಟರಿ ಇಂತಹ ಹತ್ತು ಹಲವು ಸಮಾಜಸೇವಾಕಾರ್ಯ ನಡೆಸುತ್ತಿದೆ ಎಂದು ಕ್ಲಬ್ ಅಧ್ಯಕ್ಷ ರಾಜೇಂದ್ರರಾಜ್ ತಿಳಿಸಿದರು.
 ರೋಟರಿ ಪದಾಧಿಕಾರಿಗಳಾದ ಕೃಷ್ಣಮೂರ್ತಿ, ಕಿರಣ್, ಭೀಮ್‌ಸೇನ್, ಗ್ರಾಮದ ಹಿರಿಯ ಮುಖಂಡ ಜಿ.ವಿ.ನಂಜುಂಡಗೌಡ, ಗ್ರಾಪಂ ಸದಸ್ಯ ರಾಜಶೇಕರ್, ಬಾಲಕೃಷ್ಣ, ಪ್ರಸನ್ನ, ಶೈಲಜ, ಎಂಪಿಸಿಎಸ್ ಅಧ್ಯಕ್ಷ ಹರೀಶ್‌ವಿಎಸ್‌ಎಸ್‌ಎನ್ ಅಧ್ಯಕ್ಷ ಜಿ.ವಿ.ಲಿಂಗಪ್ಪ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ಮಗು-ನಗು ಆಂಬ್ಯುಲೆನ್ಸ್ ಲೋಕಾರ್ಪಣೆ
ಗೌರಿಬಿದನೂರು: ತಾಯಿ ಮಕ್ಕಳ ಆರೋಗ್ಯ ಕಾಪಾಡುವ ಉದ್ದೇಶದಿಂದ ಸರ್ಕಾರ ಪ್ರತ್ಯೇಕ ಅಂಬುಲೆನ್ಸ್ ನೀಡಿದ್ದು, ಇದನ್ನು ಜನತೆ ಸದುಪಯೋಗಪಡಿಸಿ ಕೊಳ್ಳಬೇಕೆಂದು ಡೆಪ್ಯೂಟಿ ಸ್ಪೀಕರ್ ಎನ್.ಎಚ್.ಶಿವಶಂಕರರೆಡ್ಡಿ ತಿಳಿಸಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಮಗು-ನಗು ಅಂಬುಲೆನ್ಸ್ ವಾಹನ ಲೋಕಾರ್ಪಣೆ ಮಾಡಿ ಮಾತನಾಡಿದರು.
ಮಗುವಿಗೆ ಜನ್ಮ ನೀಡುವ ಸಮಯದಲ್ಲಿ ತಾಯಿ ಮರು ಹುಟ್ಟು ಪಡೆಯುತ್ತಾಳೆ. ಇಂತಹ ತಾಯಿ ಮತ್ತು ಮಗುವಿನ ಆರೋಗ್ಯ ಮತ್ತು ಜೀವವನ್ನು ರಕ್ಷಿಸುವುದು ಬಹಳ ಮುಖ್ಯವಾದ ಕಾರ್ಯವಾಗಿದೆ.
  ಇದನ್ನು ಮನಗಂಡಿರುವ ಸರ್ಕಾರ ಮಗು-ನಗು ಎಂಬ ಯೋಜನೆಯಡಿ ತುರ್ತು ಚಿಕಿತ್ಸಾ ವಾಹನ ನೀಡಿದೆ ಎಂದು ಅವರು ತಿಳಿಸಿದರು.
 ಇದೇ ಸಮಯದಲ್ಲಿ ರೈಮಾಂಡ್ ಕಾರ್ಖಾನೆಯ ಆಡಳಿತ 200 ಹಾಸಿಗೆ, 200 ದಿಂಬು ಕವರ್‌ಗಳು ಮತ್ತು ಹೊದಿಕೆಗಳನ್ನು ಆಸ್ಪತ್ರೆಗೆ ಕೊಡುಗೆಯಾಗಿ ನೀಡಿತು. ತಾಲೂಕು ವೈದ್ಯಾಧಿಕಾರಿ ಡಾ. ಕೆ.ಎನ್.ಗುಂಡೂರಾವ್, ಆಡಳಿತ ವೈದ್ಯಾಧಿಕಾರಿ ಡಾ. ಶ್ಯಾಂಸುಂದರ್, ಡಾ. ಬಾನು, ಮುಖಂಡರಾದ ಎಚ್.ಎನ್.ಪ್ರಕಾಶರೆಡ್ಡಿ, ಪುರಸಭಾ ಮಾಜಿ ಉಪಾಧ್ಯಕ್ಷ ವಿ.ರಮೇಶ್ ಮುಂತಾದವರು ಇದ್ದರು.
ರಕ್ತದಾನ ಶಿಬಿರ
ಕೋಲಾರ: ರಕ್ತದಾನ ಮಾಡುವುದರಿಂದ ಮತ್ತೊಬ್ಬರ ಪ್ರಾಣವನ್ನು ಉಳಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್. ಫಯಾಜ್ ಖಾನ್ ತಿಳಿಸಿದರು.
ನಗರದ ಮುನಿಸಿಪಲ್ ಆಸ್ಪತ್ರೆಯಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ನರೇಂದ್ರ ಮೋದಿ ಅಭಿಮಾನಿ ಮಿತ್ರ ಬಳಗ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ತಾಲೂಕು ವೈದ್ಯಾಧಿಕಾರಿ ಡಾ. ಲತಾ ಪ್ರಮೀಳಾ, ಆಡಳಿತ ವೈದ್ಯಾಧಿಕಾರಿ ಡಾ. ವಿಜಯಕುಮಾರಿ, ಡಾ.ಎಸ್.ಜಿ. ನಾರಾಯಣಸ್ವಾಮಿ, ಎನ್. ಗುರುಪ್ರಕಾಶ್, ಜಿಲ್ಲಾಧ್ಯಕ್ಷ ನಾಗರಾಜ್, ಕಾರ್ಯದರ್ಶಿ ನವೀನ್, ಪ್ರಸಾದ್, ಖಚಾಂಚಿ ಜಗದೀಶ್ ಇದ್ದರು.
ಮಡಿವಾಳ ಜನಾಂಗದ ಸಭೆ
ಗೌರಿಬಿದನೂರು: ಮಡಿವಾಳ ಜನಾಂಗದ ನೋವುಗಳಿಗೆ ರಾಜ್ಯ ಸರ್ಕಾರ ಸ್ಪಂದಿಸುವಂತೆ ಆಗ್ರಹಿಸಿ ಜನವರಿ 5 ರಂದು ಬೆಂಗಳೂರು ನ್ಯಾಷನಲ್ ಕಾಲೇಜು ಆವರಣದಲ್ಲಿ ರಾಜ್ಯ ಮಡಿವಾಳರ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಮಡಿವಾಳರ ಜಾಗೃತಿ ಸಮಾವೇಶದ ಆರ್ಥಿಕ ಸಮಿತಿ ಅಧ್ಯಕ್ಷ ಎಚ್.ಸಿ. ರುದ್ರಪ್ಪ ತಿಳಿಸಿದರು. ಪಟ್ಟಣದ ನದಿದಡ ಆಂಜನೇಯ ಸ್ವಾಮಿ ದೇವಾಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಮಡಿವಾಳರ ಜನಾಂಗದ ಪೂರ್ವ ಭಾವಿ ಸಭಯಲ್ಲಿ ಮಾತನಾಡಿ, ಮಡಿವಾಳ ಜನಾಂಗವನ್ನು ರಾಷ್ಟ್ರದ ಇತರೆ 17ರಾಜ್ಯಗಳಲ್ಲಿ ಪರಿಶಿಷ್ಟ ಜಾತಿಗೆ ಸೇರಿಸಿರುವಂತೆ ರಾಜ್ಯದಲ್ಲಿಯೂ ಮೈಸೂರು ವಿವಿ ಪ್ರೊ. ಅನ್ನಪೂರ್ಣ ರ್ವರ ವರದಿ ಅನುಸಾರ ಪರಿಶಿಷ್ಟ ಜಾತಿಗೆ ಸೇರಿಸುವಂತೆ ಒತ್ತಾಯಿಸುವುದು.
ಕುಲಗುರು ಮಾಚಿದೇವರ ಜನ್ಮ ದಿನವನ್ನು ಸಂವಿಧಾನಾತ್ಮಕವಾಗಿ ಮಾಚಿದೇವ ಜಯಂತಿ ಎಂದು ಘೋಷಿಸುವುದು ಮತ್ತಿತರ ಒತ್ತಾಯಗಳನ್ನು ಸಮಾವೇಶದಲ್ಲಿ ಮಂಡಿಸಲು ತೀರ್ಮಾನಿಸಲಾಯಿತು. ಪುರಸಭೆ ಸದಸ್ಯ ಬಾಲಾಜಿ ಮಾತನಾಡಿ, ಮಡಿವಾಳರು ಸಂಘಟನೆಯಾಗಿ ಸಮಾವೇಶದಲ್ಲಿ ಭಾಗವಹಿಸಬೇಕೆಂದು ತಿಳಿಸಿದರು. ರಾಜ್ಯಾಧ್ಯಕ್ಷ ನಂಜಪ್ಪ, ಶೇಖರ್, ಕೆಂಪರಾಜು, ಜಯಶಂಕರ್, ಮುದುಗೆರೆ ಅಶ್ವತ್ಥ, ಪ್ರಸಾದ್ ಇದ್ದರು.
ವಿದ್ಯಾರ್ಥಿಗಳು ವ್ಯಾಸಂಗದ ಕಡೆ ಗಮನ ಹರಿಸಿ
ಚಿಕ್ಕಬಳ್ಳಾಪುರ: ವಿದ್ಯಾರ್ಥಿಗಳು ವ್ಯಾಸಂಗದ ಕಡೆಗೆ ಹೆಚ್ಚು ಗಮನಕೊಟ್ಟು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಶಾಸಕ ಡಾ.ಕೆ. ಸುಧಾಕರ್ ಸಲಹೆ ನೀಡಿದರು. ತಾಲೂಕಿನ ಪೋಶೆಟ್ಟಿಹಳ್ಳಿ ಸರ್ಕಾರಿ ಮಾಧ್ಯಮಿಕ ಶಾಲೆಯ ಮಕ್ಕಳಿಗೆ ಉಚಿತ ಸೈಕಲ್ ವಿತರಿಸಿ ಮಾತನಾಡಿ, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸರ್ಕಾರ ಸಾಕಷ್ಟು ಸೌಲಭ್ಯ ಒದಗಿಸುತ್ತಿದೆ. ಇದನ್ನು ಬಳಸಿಕೊಂಡು ಮಕ್ಕಳು ಹೆಚ್ಚಿನ ಸಾಧನೆ ಮಾಡುವತ್ತ ಗಮನ ಹರಿಸಬೇಕು ಎಂದರು. ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ 18 ಸಾವಿರ ಕೋಟಿ ರು. ಅನುದಾನ ನೀಡಿದೆ. ಇದರಲ್ಲಿ 14 ಸಾವಿರ ಕೋಟಿ ರು. ಶಿಕ್ಷಕರ ವೇತನಕ್ಕೆ ನೀಡುತ್ತಿದೆ. ಇದರಿಂದ ಸರ್ಕಾರದ ಕಾಳಜಿಯನ್ನು ಪರಿಗಣಿಸಿ ಶಿಕ್ಷಕರು ಜವಾಬ್ದಾರಿ ಅರಿತು ಕಾರ್ಯ ನಿರ್ವಹಿಸಬೇಕು ಎಂದರು. ಕಾಂಪೌಂಡ್ ನಿರ್ಮಿಸಲು ಯೋಜನಾ ವರದಿ ಸಿದ್ಧಪಡಿಸಿಕೊಟ್ಟರೆ, ಆರ್ಥಿಕ ಸಹಕಾರ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು. ಮುಖಂಡರು, ಶಿಕ್ಷಕರು ಉಪಸ್ಥಿತರಿದ್ದರು.
ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಿ
ಬಾಗೇಪಲ್ಲಿ: ನಾಡಿನ ಪ್ರತಿಯೊಬ್ಬರು ಮಾತೃ ಭಾಷೆ ಕನ್ನಡಕ್ಕೆ ಮೊದಲ ಆಧ್ಯತೆ ನೀಡಿದಾಗ ಮಾತ್ರ ಕನ್ನಡ ಭಾಷೆಯನ್ನು ಉಳಿಸಲು ಸಾಧ್ಯ ಎಂದು ಪುರಸಭೆ ಮಾಜಿ ಅಧ್ಯಕ್ಷ ಬಿ.ಆರ್. ನರಸಿಂಹನಾಯ್ಡು ಅಭಿಪ್ರಾಯಪಟ್ಟರು. ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿಯ ಮುಂಭಾಗದಲ್ಲಿ ತಾಲೂಕು ಕನ್ನಡ ಸೇನೆಯಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಟಾಟಿಸಿ ಮಾತನಾಡಿದ ಅವರು, ಕನ್ನಡ ಭಾಷೆಗೆ ಪ್ರಾಧಾನ್ಯತೆಯಿದ್ದರೂ ಇಂಗ್ಲಿಷ್ ವ್ಯಾಮೋಹಕ್ಕೆ ಒಳಗಾಗುತ್ತಿರುವುದರಿಂದ ಕನ್ನಡ ಮಾಯವಾಗುತ್ತಿದೆ ಎಂದು ವಿಷಾಧಿಸಿದರು. ಆಂಧ್ರಪ್ರದೇಶದ ಗಡಿಭಾಗದಲ್ಲಿರುವುದರಿಂದ ತಾಲೂಕು ತೆಲುಗು ಮಯವಾಗಿದೆ. ಗಡಿಭಾಗಕ್ಕೆ ಹೊಂದಿಕೊಂಡಿರುವ ತಾಲೂಕಿನ ಬಹುತೇಕ ಕನ್ನಡಿಗರು ರಾಜ್ಯ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆಯುತ್ತಾರೆ ಆದರೆ ಆಡು ಭಾಷೆಯನ್ನು ಮರೆತಿದ್ದಾರೆ.  ಶ್ರೀಮಂತ ವರ್ಗದವರು ಇಂಗ್ಲಿಷ್ ವ್ಯಾಮೋಹದಿಂದ ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಓದಿಸುತ್ತಿರುವುದರಿಂದ ಮಕ್ಕಳಿಗೆ ಕನ್ನಡ ಭಾಷೆಯ ಪರಿಜ್ಞಾನ ಕಡಿಮೆಯಾಗುತ್ತಿದೆ ಎಂದರು. ಈ ಭಾಗದಲ್ಲಿ ಮರ ಗಿಡಗಳನ್ನು ಕಡಿಯುತ್ತಿರುವುದರಿಂದ ಮಳೆಯ ಕೊರತೆಯಾಗುತ್ತಿದೆ. ಇದರಿಂದ ಪ್ರತಿಯೊಬ್ಬರು ಮರ ಬೆಳೆಸುವ ಕೆಲಸಕ್ಕೆ ಮುಂದಾಗಬೇಕಾಗಿದೆ. ಈ ಸಂಬಂಧ ತಾಲೂಕು ಆಡಳಿತ ಎಚ್ಚೆತ್ತುಕೊಂಡು ಮರಗಿಡಗಳನ್ನು ಕಡಿಯದ ಹಾಗೇ ನೋಡಿಕೊಳ್ಳುವ ಜವಾಬ್ದಾರಿ ವಹಿಸಬೇಕೆಂದರು. ಬಡ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಅಂಗವಿಕಲರಿಗೆ ಬಟ್ಟೆ ಹಾಗೂ ರೈತರಿಗೆ ಸಸಿ ವಿತರಣೆ ಮಾಡಲಾಯಿತು. ತಹಸೀಲ್ದಾರ್ ಎಂ.ಎ. ಪದ್ಮ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು  ಅಧ್ಯಕ್ಷ ಬಿ. ನಾರಾಯಣಸ್ವಾಮಿ, ಕನ್ನಡ ಸೇನೆ ಅಧ್ಯಕ್ಷ ಬಾಬಾಜಾನ್, ರವೀಂದ್ರ, ರಾಮಚಂದ್ರಚಾರಿ, ಯಲ್ಲಂಪಲ್ಲಿ ವೆಂಕಟರವಣ, ಸೀರಾಜ್, ಕರಾಟೆ ರಿಯಾಜ್ ಇದ್ದರು.
ನಗು-ಮಗು ಯೋಜನೆಗೆ ಚಾಲನೆ
ಚಿಂತಾಮಣಿ: ತಾಯಿ ಮಗು ಸುರಕ್ಷಿತವಾಗಿ ಆ್ಯಂಬುಲೆನ್ಸ್‌ನಲ್ಲಿ ತೆರಳಲು ಸರ್ಕಾರ ವಿನೂತನ ಯೋಜನೆ ಜಾರಿಗೆ ತಂದಿರುವುದಾಗಿ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಹೇಳಿದರು. ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ನಗು-ಮಗು ಯೋಜನೆಯ ನೂತನ ಆ್ಯಂಬುಲೆನ್ಸ್‌ಗೆ ಚಾಲನೆ ನೀಡಿ ಮಾತನಾಡಿ, ಗರ್ಭಿಣಿಯರು ಹೆರಿಗೆಯಾದ ನಂತರ ಮನೆಗೆ ಸುರಕ್ಷಿತವಾಗಿ ಆ್ಯಂಬುಲೆನ್ಸ್‌ನಲ್ಲಿ ತೆರಳಲು ಹೊಸ ಯೋಜನೆ ಜಾರಿಗೆ ತಂದಿರುವುದಾಗಿ ಹೇಳಿದರು.
ಔಷಧಿ ಕೊರತೆ ಶಾಸಕರಿಗೆ ದೂರು: ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಿಗಳು ಸಮರ್ಪಕವಾಗಿ ಸರಬರಾಜು ಆಗುತ್ತಿಲ್ಲವೆಂದು ತಾಲೂಕು ಆರೋಗ್ಯಾಧಿಕಾರಿ ಪಿರ್ದೋಸ್ ಫಾತಿಮಾ, ವೈದ್ಯಾಧಿಕಾರಿ ಡಾ. ಜಯಂತಿ ಶಾಸಕರಿಗೆ ಮನವಿ ನೀಡಿದರು.
ಗೋವಿಂದ ತೀರ್ಥ ಸ್ವಾಮೀಜಿಗೆ ಕನಕಶ್ರೀ ಪ್ರಶಸ್ತಿ ಪ್ರದಾನ
ಚಿಕ್ಕಬಳ್ಳಾಪುರ: ದಾಸಶ್ರೇಷ್ಠ ಶ್ರೀ ಕನಕದಾಸರ ಜಯಂತಿ ಪ್ರಯುಕ್ತ ಕನಕಶ್ರೀ ಪ್ರಶಸ್ತಿಯನ್ನು ತಾಲೂಕಿನ ಪಂಚವಟಿಯ ಶ್ರೀ ಗೋವಿಂದ ತೀರ್ಥ ಸ್ವಾಮೀಜಿಗೆ ಕರ್ನಾಟಕ ಪ್ರದೇಶ ಕುರುಬರ ಸಂಘದ ಮುಖಂಡರು ಪ್ರದಾನ ಮಾಡಿದರು. ಧಾರ್ಮಿಕ, ಮಾನವೀಯ ಮೌಲ್ಯಗಳನ್ನು ಬೆಳೆಸಲು ಶ್ರಮಿಸುತ್ತಿರುವ ಶ್ರೀ ಗೋವಿಂದ ತೀರ್ಥ ಸ್ವಾಮೀಜಿಯವರ ಸರಳ ಜೀವನ ಮತ್ತು ಅವರು ಸಮಾಜಕ್ಕೆ ನೀಡುತ್ತಿರುವ ಕೊಡುಗೆಗೆ 5 ಸಾವಿರ ನಗದು, ಪ್ರಶಸ್ತಿ ಫಲಕವನ್ನು ನೀಡುವುದರ ಜತೆಗೆ ಸನ್ಮಾಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಮುಖಂಡರಾದ ಸಿ.ಎಸ್. ರಾಮಚಂದ್ರ, ಎಂ. ಆನಂದ್, ವಿ. ನಾರಾಯಣಸ್ವಾಮಿ, ರಾಮಕೃಷ್ಣಪ್ಪ, ಎನ್. ಮಂಜುನಾಥ್ ಉಪಸ್ಥಿತರಿದ್ದರು.
ಉಪನಗರ ಸಂಪರ್ಕ ರೈಲು ಯೋಜನೆಗೆ ಅನುಮತಿ?
ಬೆಂಗಳೂರು: ರಾಜ್ಯದ ಮೂರು ನಗರಗಳ ಮಧ್ಯೆ ಸಂಪರ್ಕ ಕಲ್ಪಿಸುವ ಉಪನಗರ ಸಂಪರ್ಕ ರೈಲು ಯೋಜನೆಗೆ (ಸಬರ್ಬನ್ ರೈಲು) ಮುಂದಿನ ರೇಲ್ವೆ ಬಜೆಟ್‌ನಲ್ಲಿ ಒಪ್ಪಿಗೆ ಸಿಗಲಿದೆಯೇ? ಹೌದು ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ.
ಬೆಂಗಳೂರು- ಮಂಡ್ಯ, ಬೆಂಗಳೂರು- ಬಂಗಾರಪೇಟೆ, ಬೆಂಗಳೂರು- ತುಮಕೂರು ಮಧ್ಯೆ ಉಪನಗರ ಸಂಪರ್ಕ ರೈಲು ವ್ಯವಸ್ಥೆ ಕಲ್ಪಿಸಲು ರೇಲ್ವೆ ಇಲಾಖೆಗೆ ಮತ್ತೆ ಪ್ರಸ್ತಾವನೆ ಕಳುಹಿಸಲಾಗಿದೆ. ಶೀಘ್ರದಲ್ಲೇ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಈ ಕುರಿತು ಸಮಾಲೋಚಿಸಿ ಮುಂದಿನ ರೇಲ್ವೆ ಬಜೆಟ್‌ನಲ್ಲಿ ಇದಕ್ಕೆ ಸಮ್ಮತಿಸುವಂತೆ ಒತ್ತಾಯಿಸಲಾಗುವುದು. ಕೇಂದ್ರ ಸಚಿವರು ಇದಕ್ಕೆ ಒಪ್ಪುವ ವಿಶ್ವಾಸವಿದೆ ಎಂದು ಸಚಿವರು ತಿಳಿಸಿದರು. ಮೊದಲ ಹಂತದ ಉಪನಗರ ರೈಲು ಸಂಪರ್ಕ ವ್ಯವಸ್ಥೆಗೆ 8500 ಕೋಟಿ ವೆಚ್ಚ ಅಂದಾಜು ಮಾಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲಾ ಶೇ.50ರಷ್ಟು ಅನುದಾನ ನೀಡಲಿದ್ದು, ಭೂಮಿಯನ್ನು ರಾಜ್ಯ ಸರ್ಕಾರವೇ ನೀಡಲಿದೆ. ಹಾಲಿ ಇರುವ ರೇಲ್ವೆ ಹಳಿಗಳ ಪಕ್ಕದಲ್ಲೇ ವಿದ್ಯುತ್ ರೈಲು ಹಳಿಗಳನ್ನು ನಿರ್ಮಿಸಲಾಗುವುದು ಎಂದರು. ಈ ಉಪನಗರ ರೈಲು ಸಂಪರ್ಕ ವ್ಯವಸ್ಥೆ ಕುರಿತಂತೆ ಹಿಂದಿನ ಸರ್ಕಾರ ಯೋಜನೆ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿತ್ತು. ಆದರೆ, ಇದುವರೆಗೆ ಅದಕ್ಕೆ ಒಪ್ಪಿಗೆ ಸಿಕ್ಕಿರಲಿಲ್ಲ. ಈ ಬಾರಿ ಹೇಗಾದರೂ ಮಾಡಿ ಕೇಂದ್ರದ ಮನವೊಲಿಸಲಾಗುವುದು ಎಂದು ತಿಳಿಸಿದರು. ಎರಡನೇ ಹಂತದಲ್ಲಿ ಇನ್ನಷ್ಟು ಉಪನಗರ ರೈಲು ಸಂಪರ್ಕ ಯೋಜನೆ ರೂಪಿಸಲು ನಿರ್ಧರಿಸಲಾಗಿದ್ದು, ಇದರಲ್ಲಿ ಬೆಂಗಳೂರು- ದೊಡ್ಡಬಳ್ಳಾಪುರ ಕೂಡ ಸೇರಿದೆ ಎಂದು ಹೇಳಿದರು.
ಮುಂದುವರಿದ ಅನಿರ್ಧಿಷ್ಟ ಧರಣಿ
ಮುಳಬಾಗಲು: ರಸ್ತೆ ಬದಿ ವ್ಯಾಪಾರಿಗಳ ಒಕ್ಕಲೆಬ್ಬಿಸಿರುವುದನ್ನು ವಿರೋಧಿಸಿ ಹಾಗೂ ಪರ್ಯಾಯ ವ್ಯವಸ್ಥೆಗೆ ಒತ್ತಾಯಿಸಿ ಪಟ್ಟಣದ ಸೌದರ್ಯ ಪ್ಯಾರಡೈಸ್ ಬಳಿ ರಸ್ತೆ ಬದಿ ವ್ಯಾಪಾರಿಗಳ ಹಿತರಕ್ಷಣಾ ಸಮಿತಿಯಿಂದ ನಡೆಯುತ್ತಿರುವ ಅನಿರ್ಧಿಷ್ಟ ಧರಣಿ 5 ನೇ ದಿನಕ್ಕೆ ತಲುಪಿದ್ದು, ತಾಲೂಕು ಆಡಳಿತ ಧರಣಿ ವಾಪಸ್ಸು ಪಡೆಯಲು ನಡೆಸಿದ ಯತ್ನ ವಿಫಲವಾಗಿದೆ.
ಧರಣಿ ನಿರತರು ಕೋಲಾರ ಜಿಲ್ಲಾಧಿಕಾರಿಗಳು ಬಂದು ಸಮಸ್ಯೆ ಪರಿಹರಿಸದೆ ಧರಣಿ ಹಿಂಪಡೆಯುವುದಿಲ್ಲ ಎಂದು ಹೇಳಿದರು. ತಹಸೀಲ್ದಾರ್ ಡಿ.ವಿ. ರಾಮಮೂರ್ತಿ, ಡಿವೈಎಸ್ಪಿ ಟಿ. ಸಿದ್ದಪ್ಪ ಮತ್ತು ಪುರಸಭೆ ಮುಖ್ಯಾಧಿಕಾರಿ ಅಶೋಕ್ ಕುಮಾರ್ ಧರಣಿ ಸ್ಥಳಕ್ಕೆ ಬಂದು ಧರಣಿ ನಿಲ್ಲಿಸಲು ಕೋರಿದರು. ಇದಕ್ಕೆ ಒಪ್ಪದ ಅವರು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಟೈಲರ್ ಸುರೇಶ್, ರಂಜಿತ್ ಕುಮಾರ್, ಕೆ.ಎಲ್. ಲಕ್ಷ್ಮಿನಾರಾಯಣ್,ನರಸಿಂಹ ಇದ್ದರು.
ಬ್ರಹ್ಮರಥೋತ್ಸವ       
ಮಧುಗಿರಿ: ಶ್ರೀಕಲ್ಯಾಣ ಆಂಜನೇಯಸ್ವಾಮಿ ಜಯಂತಿ ಪ್ರಯುಕ್ತ  ಮತ್ತು ಬ್ರಹ್ಮರಥೋತ್ಸವದ ಕಾರಣದಿಂದಾಗಿ ಡಿ.13 ರಿಂದ 16ರವರೆಗೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ 4 ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ. 13ನೇ ಶುಕ್ರವಾರ ಬೆಳಿಗ್ಗೆ ವಿನಾಯಕ ಸ್ವಾಮಿ ಶ್ರೀಆಂಜನೇಯಸ್ವಾಮಿ ಮತ್ತು ನವಗ್ರಹಗಳಿಗೆ ಪಂಚಾಮೃತ ಅಭಿಷೇಕ, ವೇದ ಪರಾಯಣ, 9ಕ್ಕೆ ಸಹಸ್ರನಾಮ ಅರ್ಚನೆ, 11.30ಕ್ಕೆ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ 6. 30ಕ್ಕೆ ಸೇವಾ ಕರ್ತರಿಂದ  ಶ್ರೀಸೀತಾರಾಮರ ಕಲ್ಯಾಣೋತ್ಸವ ನಡೆಯಲಿದೆ. 14ರ ಶನಿವಾರ ಹನುಮ ಜಯಂತಿ ಅಂಗವಾಗಿ ಬೆಳಿಗ್ಗೆ 8ಕ್ಕೆ ವೇದ ಪಾರಾಯಣ, ಪಂಚಾಮೃತ ಅಭಿಷೇಕ, ನವಗ್ರಹ ಪೂಜೆ ಜಪ ಮಧ್ಯಾಹ್ನ 12-30ಕ್ಕೆ ಬ್ರಹ್ಮರಥೋತ್ಸವ ಹೂವಿನ ರಥದಲ್ಲಿ ವಾಸವಿ ಮಹಿಳಾ ಸಂಘದವರಿಂದ ಭಜನೆ ಕಾರ್ಯಕ್ರಮ, 7ಕ್ಕೆ ಉಯ್ಯಾಲೋತ್ಸವ, 15ರ ಭಾನುವಾರ ಪಂಚಾಮೃತ ಅಭಿಷೇಕ ಹಾಗೂ ಪೂಜಾ ಕಾರ್ಯಕ್ರಮ ವಸಂತೋತ್ಸವ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement