ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಪ್ರಚಾರಕ್ಕಾಗಿ ಬಂದಿದ್ದ ಒಡೆಯರ್

Vishwanath S
Updated On : 11 Dec 2013, 1:03 am

ಕೋಲಾರ: ಮೈಸೂರು ರಾಜ ಮನೆತನದ ಯದುಕುಲ ತಿಲಕ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನಕ್ಕೆ ಜಿಲ್ಲೆಯ ಜನತೆ ಅತೀವ ಶೋಕ ವ್ಯಕ್ತಪಡಿಸಿದ್ದಾರೆ.
1991ರ ಮೇ ತಿಂಗಳ 10 ರಂದು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಿದ್ದ ವಿ. ಹನುಮಪ್ಪನವರ ಪರವಾಗಿ ಮತಯಾಚನೆಗಾಗಿ ಮುಳಬಾಗಿಲು ಪಟ್ಟಣಕ್ಕೆ ತಮ್ಮ ಪತ್ನಿ ಸತ್ಯ ಪ್ರಮೋದ ದೇವಿಯವರೊಂದಿಗೆ ಬಂದಿದ್ದರು ಎಂದು ಜನತೆ ನೆನಪು ಮಾಡಿಕೊಂಡಿದ್ದಾರೆ.
ನರಸಿಂಹರಾಜ ಒಡೆಯರ್ ಅವರ ತಂದೆ ಶ್ರೀ ಜಯಚಾಮರಾಜ ಒಡೆಯರ್ ಅವರು ಮುಳಬಾಗಿಲು ತಾಲೂಕಿನ ಪ್ರಸಿದ್ಧ ಕುರುಡುಮಲೆ ಗಣೇಶ ದೇವಾಲಯಕ್ಕೆ ಬರುತ್ತಿದ್ದರು. ಕೋಲಾರದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲೂ ಪಾಲ್ಗೊಂಡಿದ್ದರು ಎಂದು ಹಿರಿಯ ಪತ್ರಕರ್ತ ಕೆ. ಪ್ರಹ್ಲಾದರಾವ್ ಸ್ಮರಿಸಿಕೊಂಡರಲ್ಲದೆ, ನರಸಿಂಹರಾಜ ಒಡೆಯರ್ ನಿಧನದಿಂದ ಮೈಸೂರು ದಸರಾ ಮುಂದಿನ ದಿನಗಳಲ್ಲಿ ಕಳೆಗುಂದಬಹುದೆಂಬ ಅನುಮಾನ ವ್ಯಕ್ತಪಡಿಸಿದರು.
ಇತ್ತೀಚೆಗೆ ತಾನೇ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಒಡೆಯರ್, ಅನೇಕ ಕನಸುಗಳನ್ನು ಕಂಡಿದ್ದರು. ಅಕಾಲಿಕ ನಿಧನಕ್ಕೆ ನೋವಾಗಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಅದೇ ರೀತಿ ಒಡೆಯರ್ ಅವರ ಪತ್ನಿ ಮತ್ತು ಬಂಧುಗಳಿಗೆ ದುಖ- ಭರಿಸುವ ಶಕ್ತಿಯನ್ನು ದೇವರು ನೀಡಲೆಂದು ಪ್ರಾರ್ಥಿಸುತ್ತೇನೆಂದು ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಜೆ.ಜಿ. ನಾಗರಾಜ್, ಪ್ರಧಾನ ಕಾರ್ಯದರ್ಶಿ ಮಾಲೂರು ಅಶ್ವತ್‌ರೆಡ್ಡಿ, ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ, ಮನ್ವಂತರ ಪ್ರಕಾಶನ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ರಾಮರಾಜು ನರಸಿಂಹರಾಜ ಒಡೆಯರ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಕೋಲಾರದಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ಭೂಮಿ ಹುಡುಕುತ್ತಿದ್ದೇವು, ಕ್ರಿಕೆಟ್ ಅಭಿಮಾನಿ ಹಾಗೂ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದ ಒಡೆಯರ್ ಅವರನ್ನು ಭೇಟಿಯಾಗಿ ಮಾರ್ಗದರ್ಶನ ಪಡೆಯಬೇಕೆಂದು ನಿರ್ದರಿಸಿದ್ದೆವು. ಜವರಾಯ ನಮ್ಮ ಆಸೆ ಈಡೇರಿಸಲಿಲ್ಲವೆಂದು ಬಿಜೆಪಿಯ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಓಂಶಕ್ತಿ ಚಲಪತಿ ತಿಳಿಸಿದ್ದಾರೆ.
ಗಣ್ಯರ ಸಂತಾಪ
ಬಂಗಾರಪೇಟೆ: ಮೈಸೂರಿನ ಯದುವಂಶದ ಕೊನೆಯ ಕೊಂಡಿ ಹಾಗೂ ಮಾಜಿ ಸಂಸದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಹೃದಯಾಘಾತದಿಂದ ಮಂಗಳವಾರ ನಿಧನರಾದುದಕ್ಕೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಮಾಜಿ ಶಾಸಕ ಎಂ.ನಾರಾಯಣಸ್ವಾಮಿ, ಮಾಜಿ ಜಿಪಂ ಸದಸ್ಯ ಟಿ.ಮುನಿರಾಜು, ರಾಜು ಕ್ಷತ್ರೀಯ ಸಂಘದ ಕೆ.ರಮೇಶ್, ನಾಗರಾಜ್, ಗೋಪಿನಾಥ್ ಮತ್ತಿತರರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಒಡೆಯರ್ ಉತ್ತಮ ಗುಣವುಳ್ಳ ಹಾಗೂ ನೇರ ನುಡಿ ಸ್ವಭಾವದವರಾಗಿದ್ದರು. ನಾಲ್ಕು ಬಾರಿ ಮೈಸೂರು ಲೋಕಸಭೆ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿ ಉತ್ತಮ ಆಡಳಿತಗಾರನಾಗಿ ಅಪಾರ ಮಿತ್ರರನ್ನು ಹೊಂದಿದ್ದರು. ಇಂತಹ ಅಜಾತಶತೃ ನಿಧನ ದು:ಖದ ಸಂಗತಿ. ಭಗವಂತ ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಟೇಕಲ್‌ನಲ್ಲಿ...
ಟೇಕಲ್: ಯದುವಂಶದ ಕೊನೆಯ ಕುಡಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಹಠಾತ್ ನಿಧನದಿಂದ ರಾಜ್ಯ ಉತ್ತಮ ರಾಜಕಾರಿಣಿಯೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಕೋಲಾರ ಜಿಲ್ಲಾ ಸಮಿತಿ ಹಿಂದುಳಿದ ವರ್ಗಗಳ ರಾಜ್ಯ ವಿಭಾಗದ ಅಧ್ಯಕ್ಷ ಟಿ.ಆರ್.ಅಶೋಕ್‌ಕುಮಾರ್, ಮಾಸ್ತಿ ಬ್ಲಾಕ್ ಕಾಂಗ್ರೆಸ್‌ನ ಚನ್ನರಾಯಪ್ಪ, ಕೆಪಿಸಿಸಿಯ ಆರ್.ರಾಜಣ್ಣ, ಮುಖಂಡ ಯಲ್ಲಪ್ಪ ಮುಂತಾದವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ...
ಚಿಕ್ಕಬಳ್ಳಾಪುರ: ಮೈಸೂರು ಸಾಮ್ರಾಜ್ಯದ ರಾಜ ವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನಕ್ಕೆ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ.
ನಗರದ ಶ್ರೀ ಭುವನೇಶ್ವರಿ ವೃತ್ತದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಕನ್ನಡಪರ ಸಂಘಟನೆಗಳ ಮುಖಂಡರು ಸೇರಿದಂತೆ ಹಲವರು ಮೇಣದ ಬತ್ತಿಗಳನ್ನು ಅಂಟಿಸಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದರು. ಎರಡು ನಿಮಿಷಗಳ ಮೌನ ಆಚರಿಸಿ ಆತ್ಮಕ್ಕೆ ಶಾಂತಿ ಕೋರಿದರು. ನಂತರ ಒಡೆಯರ್ ಬಗ್ಗೆ ಗುಣಗಾನ ಮಾಡಿದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಟಿ.ಎಸ್. ನಾಗೇಂದ್ರ ಬಾಬು, ಹೆಚ್.ವಿ. ಸೋಮಶೇಖರ್, ಚಿ. ವೀರಶೇಖರ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಪಿ. ನವಮೋಹನ್ ಉಪಸ್ಥಿತರಿದ್ದರು.
ಕನ್ನಡಸೇನೆ: ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ನಿಧನಕ್ಕೆ ಕನ್ನಡಸೇನೆ ಬಾಗೇಪಲ್ಲಿ ತಾಲೂಕು ಅಧ್ಯಕ್ಷ ಬಿ.ಎ. ಬಾಬಾಜಾನ್, ಕರವೇ ಮುಖಂಡ ಬಿಟಿಸಿ ಸೀನಾ, ಪುರಸಭೆ ಮಾಜಿ ಅಧ್ಯಕ್ಷ ಬಿ.ಆರ್. ನರಸಿಂಹನಾಯ್‌ಡು, ಮಾಜಿ ಸದಸ್ಯ ವಿ. ಶಂಕರ್. ಹಾಲಿ ಸದಸ್ಯರಾದ ಮಮತ ನಾಗರಾಜರೆಡ್ಡಿ, ಶ್ರೀನಿವಾಸ ಅಪ್ಪಯ್ಯ ಬಾಬು, ಪುರಸಭೆಯ ಮಾಜಿ ಸದಸ್ಯ ಪಿ.ಎಲ್. ಗಣೇಶ್, ಜ್ಯೋತಿ ಗೋವರ್ಧನಚಾರಿ, ಜಿ.ಪಂ. ಸದಸ್ಯ ಬಿ. ಸಾವಿತ್ರಮ್ಮ ಮುನಿಶಾಮಿ ಮುಂತಾದವರು ಸಂತಾಪ ಸೂಚಿಸಿದ್ದಾರೆ.
ಶಿಡ್ಲಘಟ್ಟದಲ್ಲಿ...
ಶಿಡ್ಲಘಟ್ಟ: ತಾಲೂಕಿನ ಯಾದವ ಸಂಘದ ಸದಸ್ಯರು ಮೈಸೂರಿನ ಶ್ರೀ ಕಂಠ ದತ್ತರಾಜ ಒಡೆಯರ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಪಟ್ಟಣದ ಕೃಷ್ಣ ಸ್ವಾಮಿ ದೇವಾಲಯದಲ್ಲಿ ತಾಲೂಕು ಯಾದವ ಸಂಘದ ಸದಸ್ಯರು ಸಭೆ ಸೇರಿ ಮೈಸೂರಿನ ಶ್ರೀಕಂಠ ದತ್ತ ರಾಜ ಒಡೆಯರ್ ನಿಧದನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಚಿಕ್ಕಬಳ್ಳಾಪುರ ಪ್ರದಾನ ಯಾದವ ಸಂಘದ ಕಾರ್ಯದರ್ಶಿ ಬಿ.ಆರ್. ನರಸಿಂಹ ರಾಜು ಹಾಗೂ ಸದಸ್ಯರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement