'ಮಕ್ಕಳಲ್ಲಿ ಸಂಸ್ಕೃತಿ ಬಿತ್ತುವ ಕಾರ್ಯವಾಗಲಿ'
ಗೌರಿಬಿದನೂರು: ಆಧುನಿಕತೆಯ ಭರಾಟೆಯಲ್ಲಿ ಮಾನವನ ಬದುಕನ್ನೇ ನುಂಗುತ್ತಿರುವ ಇಂದಿನ ದಿನಗಳಲ್ಲಿ ಭಾರತೀಯ ಕಲೆ ಮತ್ತು ಸಂಸ್ಕೃತಿಯನ್ನು ಮಕ್ಕಳಲ್ಲಿ ಭಿತ್ತಿ ಬೆಳೆಸಬೇಕಾದ ಅನಿವಾರ್ಯತೆ ಹೆಚ್ಚಾಗಿದೆ ಜ್ಞಾನಮಂದಿರ ಟ್ರಸ್ಟ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಆವಲಪ್ಪ ತಿಳಿಸಿದರು.
ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗಾಗಿ ಗೌತಮಬುದ್ಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಲಾ ಬಳಗ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಲಾ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಚೀನ ಕಾಲದಿಂದಲೂ ಭರತಖಂಡ ಕಲೆಗೆ ಪ್ರಸಿದ್ಧವಾಗಿದ್ದು, ಇಡೀ ಜಗತ್ತಿಗೆ ವಿವಿಧ ಕಲೆಗಳ ರಸದೌತಣ ನೀಡಿದ ದೇಶ. ಆದರೆ ಇಂದಿನ ದಿನಗಳಲ್ಲಿ ಪ್ರಚೋದನಕಾರಿ ವಿಚಾರಗಳನ್ನು ನೋಡುವ ಮತ್ತು ಕೇಳುವ ಮೂಲಕ ನಮ್ಮ ಬದುಕಿನ ನೈಜತೆಯನ್ನೇ ಕಳೆದುಕೊಳ್ಳುತ್ತಿದ್ದೇವೆ ಎಂದ ಅವರು ನಾವು ವಿದ್ಯಾರ್ಥಿಗಳಾಗಿದ್ದಾಗ ಕಲೆ ಮತ್ತು ರಂಗಭೂಮಿ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿತ್ತು. ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿತ್ತು. ಈಗ ಅದನ್ನು ಮಕ್ಕಳಿಗೆ ಒತ್ತಾಯಪೂರ್ವಕವಾಗಿ ತಿಳಿಯಪಡಿಸಬೇಕಾದ ಪರಿಸ್ಥಿತಿ ಬಂದೊದಗಿದೆ ಎಂದರು.
ಮುಖ್ಯ ಅತಿಥಿ ಪುರಸಭೆ ಮುಖ್ಯಾಧಿಕಾರಿ ಹನುಮಂತೇಗೌಡ ಮಾತನಾಡಿ ಗ್ರಾಮೀಣ ಮಕ್ಕಳಲ್ಲಿ ಜನಪದ ಸೊಗಡಿದೆ ಆದರೆ ಪಟ್ಟಣದ ಮಕ್ಕಳಿಗೆ ಅದರ ಅರಿವಿಲ್ಲ. ವ್ಯವಸಾಯ ಮಾಡುವ ಸಂದರ್ಭದಲ್ಲಿ ಕೃಷಿ ಚಟವಟಿಕೆಗಳಲ್ಲಿ ಜಾನಪದ ಹಾಡುಗಳನ್ನು ಕೇಳುತ್ತಿದ್ದವು. ಆದರೆ ಈಗಿನ ಆಧುನಿಕತೆಯಲ್ಲಿ ಇವೆಲ್ಲವೂ ಮಾಯವಾಗುತ್ತಿದೆ. ಇದನ್ನು ಉಳಿಸಬೇಕಾದರೆ ಶಾಲಾಮಕ್ಕಳಿಗೆ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಉಳಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.
ಪ್ರಾಚಾರ್ಯರಾದ ನಾಗರತ್ನ, ಮುಖ್ಯೋಪಾಧ್ಯಾಯ ವೆಂಕಟಶಿವಾರೆಡ್ಡಿ, ದೈಹಿಕ ಶಿಕ್ಷಣಾಧಿಕಾರಿ ಸೂರ್ಯನಾರಾಯಣ, ನಾಗರಾಜ್, ಕೃಷ್ಣಪ್ಪ, ಮುಂತಾದವರು ಉಪಸ್ಥಿತರಿದ್ದರು.
ರಂಗಭೂಮಿ ಕಲಾವಿದ, ಪೊಲೀಸ್ಪೇದೆ ವಿಶ್ವನಾಥ್ ಅವರಿಂದ ಸಂಗೊಳ್ಳಿ ರಾಯಣ್ಣ ಏಕಪಾತ್ರ ಅಭಿನಯ, ಚಂದ್ರಶೇಖರ್, ಸಿ.ಎನ್.ಶಾಸ್ರಿ, ವಿಶ್ವನಾಥ್, ಚಂದ್ರಬಾಬು, ರಾಜಶೇಖರ್, ಮಹಾಲಿಂಗಯ್ಯ,ಚಂದ್ರಶೇಖರ್ ಜಾನಪದ ಗೀತೆಗಳನ್ನು ಹಾಡಿ ರಂಜಿಸಿದರು.ಕುಮಾರಿ ಶಿಲ್ಪ ಪ್ರಾರ್ಥನೆ, ವೈ.ಟಿ.ಪ್ರಸನ್ನಕುಮಾರ್ ನಿರೂಪಿಸಿದರು.