ಶೌಚಾಲಯ ಅತಿಕ್ರಮಣ; ದಲಿತರ ಪ್ರತಿಭಟನೆ
ಚಿಂತಾಮಣಿ: ಸಾಮೂಹಿಕ ಶೌಚಾಲಯ ಕಟ್ಟಡವನ್ನು ರಾಜಕೀಯ ಬಲದಿಂದ ಕೆಡವಿ ಅತಿಕ್ರಮಣ ಮಾಡಿರುವ ಭೂಮಾಫಿಯಾಗಳ ವಿರುದ್ಧ ಸ್ಥಳೀಯ ದಲಿತ ನಿವಾಸಿಗಳು ಪ್ರತಿಭಟನೆ ನಡೆಸಿದರು.
ನಗರದ ತಪತೇಶ್ವರ ಕಾಲೋನಿಯ ದಲಿತ ನಿವಾಸಿಗಳಿಗಾಗಿ ಸರ್ಕಾರ ಸ್ಲಂ ಬೋರ್ಡ್ ವತಿಯಿಂದ ನಿರ್ಮಿಸಿದ್ದ ಸಾಮೂಹಿಕ ಶೌಚಾಲಯವನ್ನು ಅಶ್ವಥರೆಡ್ಡಿ, ಕಿರಿಕ್ ಕೃಷ್ಣ ಮತ್ತಿತರರು ಕೆಡವಿ ಜಾಗವನ್ನು ಅತಿಕ್ರಮಣ ಮಾಡಿ ನಿವೇಶನ ಮಾಡುತ್ತಿರುವುದಾಗಿ ಆರೋಪಿಸಿ ನಗರಸಭೆ ಆಯುಕ್ತರಿಗೆ ಹಾಗೂ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ.
ಸರ್ವೆ ನಂ.76 ಸಬ್ 1 ರ ಕರಾಬ್ 29 ಗುಂಟೆ ಇದ್ದು, ಕಾನೂನು ಅಡಿಯಲ್ಲಿ 22 ಗುಂಟೆ ಜಮೀನು ದಾಖಲೆಗಳ ಸಮೇತ ರಿಜಿಸ್ಟರ್ ಆಗಿದೆ. ಒಟ್ಟು 1 ಎಕರೆ 11 ಗುಂಟೆ ಸ್ಥಳವಿದ್ದು, ಇದರಲ್ಲಿ 22 ಗುಂಟೆ ಕರಾಬ್ ಜಮೀನನ್ನು ಭೂಗಳ್ಳರು ಒತ್ತುವರಿ ಮಾಡಿಕೊಂಡು ನಿವೇಶನಗಳನ್ನು ಮಾಡಿರುವುದಕ್ಕೆ ನಾಗರಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಸ್ಥಳೀಯ ಹಲವು ಮುಖಂಡರೆ ಈ ಕೃತ್ಯಕ್ಕೆ ಕೈ ಹಾಕಿರುವುದು ಹಲವು ಮುಖಂಡರಿಗೆ ನುಂಗಲಾರದ ತುತ್ತಾಗಿ ಪರ್ರಿಮಿಸಿದೆ. ತಪತೇಶ್ವರ ಕಾಲೋನಿ ನಿವಾಸಿಗಳಾದ ಸಕ್ಪಾಲ್, ರಘು, ರೆಡ್ಡೆಪ್ಪ, ವಿಜಯ್, ಮಂಜುನಾಥ,ನಾಗರಾಜ್, ಅಶ್ವಥ್, ಮುನಿರಾಜ, ಗೌರಮ್ಮ,ಭಾಗ್ಯಮ್ಮ, ಲಚ್ಚಕ್ಕ, ನಲ್ಲ ವೆಂಕಟಮ್ಮ, ನರಸಮ್ಮ, ರಾಮಾಂಜಿ ಪ್ರತಿಭಟನೆ ಮುಂದುವರೆಸಿದ್ದಾರೆ.
ಟೇಕಲ್: ಸೂಕ್ತ ಬಸ್ ನಿಲ್ದಾಣವಿಲ್ಲದೆ ಪ್ರಯಾಣಿಕರ ಪರದಾಟ
ಟೇಕಲ್: ಪಟ್ಟಣದಲ್ಲಿ ಸೂಕ್ತ ಬಸ್ ನಿಲ್ದಾಣವಿಲ್ಲದೆ ಪ್ರಯಾಣಿಕರ ಪರದಾಟ ಹೇಳತೀರದಾಗಿದೆ. ಈ ಸಂಬಂಧ ಹತ್ತು ಹಲವು ಬಾರಿ ಇಲಾಖೆಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರ ಏಕೆ ಈ ಬಗ್ಗೆ ಗಮನಹರಿಸುತ್ತಿಲ್ಲ ಎಂಬುದು ಜನತೆಯ ಪ್ರಶ್ನೆಯಾಗಿದೆ. ಸುಮಾರು 40 ವರ್ಷದಿಂದ ಬಸ್‌ನಿಲ್ದಾಣವಿಲ್ಲದೆ ದಿನನಿತ್ಯ ಓಡಾಡುವ ಪ್ರಯಾಣಿಕರು ಎಲ್ಲೆಂದರಲ್ಲೆ ಕೂರುವ ಸ್ಥಿತಿ ಉದ್ಭವಿಸಿದೆ. ಜನರಿಗೆ ನಿಲ್ಲಲು ಸರಿಯಾದ ಸ್ಥಳವಿಲ್ಲದೆ ಬಹಳಷ್ಟು ಶೋಚನೀಯ ಸ್ಥಿತಿ ತಲುಪಿದೆ. ಶಾಸಕರು ಈ ಬಗ್ಗೆ ಗಮನ ಹರಿಸುತ್ತಿಲ್ಲ. ಪಟ್ಟಣ ಬಸ್ ನಿಲ್ದಾಣ ಬಗೆಗಿನ ಪ್ರಸ್ತಾಪ ಅವರ ಕಡತದಲ್ಲೇ ಇಲ್ಲದಾಗಿದೆ. ಪ್ರತಿ ದಿನ ಟೇಕಲ್‌ಗೆ ಮೂರರಿಂದ ನಾಲ್ಕು ಸಾವಿರ ಮಂದಿ ಬಂದು ಹೋಗುತ್ತಾರೆ. ಪಟ್ಟಣದಲ್ಲಿ ಸುಸಜ್ಜಿತ ರೈಲು ನಿಲ್ದಾಣ, ಆರೋಗ್ಯ ಕೇಂದ್ರ, ಕಾಲೇಜು, ಪ್ರೌಢಶಾಲೆ, ವಾಣಿಜ್ಯ ಕೇಂದ್ರ ಇತರೆ ಇಲಾಖಾ ಕೇಂದ್ರಗಳು, ಖಾಸಗಿ ಶಾಲೆಗಳಿದ್ದು ಸುತ್ತಮುತ್ತಲೂ ನೂರಕ್ಕೂ ಹೆಚ್ಚು ಹಳ್ಳಿಗಳಿಂದ ದಿನವಹಿ ಜನ ಇಲ್ಲಿಗೆ ಬಂದು ಹೋಗುತ್ತಾರೆ. ಅದರಲ್ಲೂ ಅತೀ ಹೆಚ್ಚಾಗಿ ಬಸ್ಸಿನಲ್ಲೆ ಓಡಾಡುವ ಜನಕ್ಕೆ ಉತ್ತಮ ಬಸ್‌ನಿಲ್ದಾಣವಿಲ್ಲದೆ ರಸ್ತೆಯ ಅಕ್ಕಪಕ್ಕ ನಿಲ್ಲುವ ಪರಿಸ್ಥಿತಿ ಉಂಟಾಗಿದೆ. ಟೇಕಲ್ ಸರ್ಕಲ್‌ನಲ್ಲೂ ಕೂಡ ಮೂರು ಕಡೆಯಿಂದ ಬಸ್ಸುಗಳು ಬರುತ್ತಿದ್ದು ದಾರಿಯಲ್ಲೆ ನಿತ್ಯ ಪ್ರಯಾಣಿಕರನ್ನು ಇಳಿಸಿ ಹತ್ತಿಸಿಕೊಂಡು ಹೋಗುತ್ತಾರೆ. ಇನ್ನಾದರೂ ಈಗಿನ ಯುವ ಶಾಸಕ ಕೆ.ಎಸ್.ಮಂಜುನಾಥಗೌಡರು ಪ್ರಯಾಣಿಕರ ಅನುಕೂಲಕ್ಕಾಗಿ ಉತ್ತಮ ಬಸ್‌ನಿಲ್ದಾಣ ನಿರ್ಮಿಸಿ ಕೊಡುವರೇ ಎಂಬುದು ಈ ಭಾಗದ ಜನತೆಯ ಆಶಯವಾಗಿದೆ.