ಕಾರದಪುಡಿ ಎರಚಿಸರ ಕದ್ದಿದ್ದ ಯುವಕನ ಸೆರೆ
ಚಿಂತಾಮಣಿ: ಮಹಿಳೆಯೊಬ್ಬರ ಮೇಲೆ ಕಾರದಪುಡಿ ಎರಚಿ ಲಕ್ಷಾಂತರ ರುಪಾಯಿ ಬೆಲೆ ಬಾಳುವ ಮಾಂಗಲ್ಯ ಸರವನ್ನು ಕಸಿದುಕೊಂಡ ಪರಾರಿಯಾಗಿದ್ದ ಯುವಕನನ್ನು ಪೊಲೀಸರು ಮಾಲು ಸಮೇತ ಬಂಧಿಸಿರುವ ಘಟನೆ ಶುಕ್ರವಾರ ರಾತ್ರಿ ತಿನಕಲ್ಲು ಗ್ರಾಮದಲ್ಲಿ ನಡೆದಿದೆ. ತಾಲೂಕಿನ ತಿನಕಲ್ಲು ಗ್ರಾಮದ ನವೀನ (20) ಪೊಲೀಸರ ಅತಿಥಿಯಾದ ಯುವಕ. ಈತ ಇದೇ ಗ್ರಾಮದ ನಾಯಕ ಜನಾಂಗಕ್ಕೆ ಸೇರಿದ ರತ್ನಮ್ಮ ಕೋಂ ಮುನಿನರಸಿಂಹಪ್ಪ ಎಂಬವರು ತಮ್ಮ ತೋಟದಲ್ಲಿ ಒಬ್ಬಂಟಿಯಾಗಿ ಕೆಲಸ ಮಾಡುತ್ತಿರುವಾಗ ಈತ ಕಾರದಪುಡಿ ಎರಚಿದ್ದಾನೆ. ನಂತರ 50 ಗ್ರಾಂ ತೂಕದ ಮಾಂಗಲ್ಯ ಸರ ತೆಗೆದುಕೊಂಡು ಪರಾರಿಯಾಗಿದ್ದ ಎನ್ನಲಾಗಿದೆ. ತಕ್ಷಣ ಅನುಮಾನಗೊಂಡ ರತ್ನಮ್ಮನ ಪತಿ ಮುನಿನರಸಿಂಹಪ್ಪ ಗ್ರಾಮದ ಹಲವು ಪಡ್ಡೆ ಹುಡುಗರ ಚಲನವಲನಗಳನ್ನು ಗಮನಿಸಿದಾಗ ಇದೇ ಗ್ರಾಮದ ನವೀನ್ ಎಂಬಾತನು ತನ್ನ ದ್ವಿಚಕ್ರ ವಾಹನದಲ್ಲಿ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಿಂತಾಮಣಿ - ಶಿಡ್ಲಘಟ್ಟ ಮಾರ್ಗವಾಗಿ ಹೋಗುತ್ತಿರುವುದನ್ನು ಸುತ್ತಮುತ್ತಲಿನ ಗ್ರಾಮಸ್ಥರಿಂದ ತಿಳಿದುಕೊಂಡ. ನಂತರ ಈ ವಿಚಾರವನ್ನು ಮುನಿನರಸಿಂಹಪ್ಪ ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಿದಾಗ ತಿಳಿಸಿದ್ದಾನೆ. ಕೂಡಲೇ ನವೀನನ್ನು ಪೊಲೀಸರು ವಿಚಾರಣೆಗೊಳಪಡಿಸಿದಾಗ ಕಳ್ಳತನ ಮಾಡಿಲ್ಲವೆಂದು ಹೇಳಿದ. ಆದರೆ ಪೊಲೀಸರು ಬಿಡದೆ ಮತ್ತೆ ವಿಚಾರಿಸಿದಾಗ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ದ್ವಿಚಕ್ರ ವಾಹನದಲ್ಲಿ ವೇಗವಾಗಿ ಹೋಗುತ್ತಿರುವ ಏನಿತ್ತು ಎಂದು ವಿಚಾರಣೆಗೊಳಪಡಿಸಿದಾಗ ತಾನು ಕಳ್ಳತನ ಮಾಡಿದ ಸರವನ್ನು ಹಿಮಾಂಪುರ ರೇಲ್ವೆ ಗೇಟ್ ಬಳಿ ಗುಣಿ ಒಂದರಲ್ಲಿ ಮುಚ್ಚಿಟ್ಟಿರುವುದಾಗಿ ಪೊಲೀಸರ ಮುಂದೆ ಮಾಡಿದ ತಪ್ಪನ್ನು ಒಪ್ಪಿಕೊಂಡ. ಈ ಪ್ರಕರಣಕ್ಕೆ ಸಂಬಂಧಿಸಿ ಡಿವೈಎಸ್ಪಿ ಸಣ್ಣತಿಮ್ಮಪ್ಪ ಮಾಲು ಸಮೇತ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.
ನಕಲಿ ಆಟೋ ಮೊಬೈಲ್ ಮಾರಾಟ: ಬಂಧನ
ಕೋಲಾರ: ನಗರದ ಬೈಪಾಸ್ ಸರ್ವಿಸ್ ರಸ್ತೆಯ ಬಳಿಯ ಕಾರ್ ಆಟೋ ಮೊಬೈಲ್ ಅಂಗಡಿಯ ಮೇಲೆ ನಗರ ಠಾಣೆ ಪೊಲೀಸರು ದಾಳಿ ಮಾಡಿ ನಕಲಿ ಬಿಡಿಭಾಗಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿ ಮಾಲೀಕರನ್ನು ಬಂಧಿಸಿದ್ದಾರೆ. ಪಿಎಸ್ಐ ಸುಧಾಕರ್ ರೆಡ್ಡಿ ತಮಗೆ ಬಂದ ಖಚಿತ ಮಾಹಿತಿಯ ಮೇರೆಗೆ ಆಟೋ ಮೊಬೈಲ್ ಅಂಗಡಿಯ ಮೇಲೆ ದಾಳಿ ಮಾಡಿದಾಗ ಮಹಾಲಕ್ಷ್ಮೀ ಬಡಾವಣೆಯ ಸಜ್ಜೇದಾಸ್, ಮತ್ತೊಂದು ಆಟೋ ಮೊಬೈಲ್ ಅಂಗಡಿಯ ಮಾಲೀಕರ ಹವೇಲಿ ಮೊಹಲ್ಲಾದ ನಿವಾಸಿ ಶೇಖ್ ಸಿಕಂದರ್ ಅವರುಗಳನ್ನು ವಶಕ್ಕೆ ಪಡೆದುಕೊಂಡು ಬಂದು ಪ್ರಕರಣ ದಾಖಲಿಸಿದ್ದಾರೆ.
ಅಕ್ರಮ ಆಧಾರ್ ಕಾರ್ಡ್ ನೋಂದಣಿ: ಐವರ ಬಂಧನ
ಕೋಲಾರ: ತಾಲೂಕಿನ ನಾಯಕರಹಳ್ಳಿಯಲ್ಲಿ ಅಕ್ರಮವಾಗಿ ಆದಾರ್ ಕಾರ್ಡುಗಳ ನೋಂದಣಿ ಮಾಡುತ್ತಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂದಸಿದ್ದಾರೆ. ಖಚಿತ ಮಾಹಿತಿ ಆಧರಿಸಿ ಗ್ರಾಮಾಂತರ ಪೊಲೀಸರು ಗುರುವಾರ ರಾತ್ರಿ ನಾಯಕರಹಳ್ಳಿಯ ಸರ್ಕಾರಿ ಉರ್ದು ಶಾಲೆಯ ಮೇಲೆ ದಾಳಿ ಮಾಡಿದಾಗ ಅಕ್ರಮವಾಗಿ ಆಧಾರ್ ಕಾರ್ಡ್ ನೋಂದಣಿ ಮಾಡಿಸುತ್ತಿದ್ದ ಜಾಲ ಪತ್ತೆಯಾಗಿದೆ. ಚಿಂತಾಮಣಿ ತಾಲೂಕಿನ ಮನಸಹಳ್ಳಿಯ ವೆಂಕಟೇಶ್, ನೇರಳಗುಂಟೆಯ ಆಂಜಿನಪ್ಪ, ಬಂಗಾರಪೇಟೆಯ ಕೆಜಿ ಕೋಟೆಯ ಕಲ್ಯಾಣ್, ಶ್ರೀನಿವಾಸಪುರದ ಉಪ್ಪಕುಂಟೆಯ ಆಂಜಿನಪ್ಪ, ಹಾಗೂ ಕೋಲಾರದ ನಾಗರಾಜ್ ಬಂಧಿತ ಆರೋಪಿಗಳಾಗಿದ್ದು ಇವರಿಂದ ಎರಡು ಲ್ಯಾಪ್ ಟಾಪ್, 2 ಮೊಬೈಲ್, 2 ಪಿಂಗರ್ ಪ್ರಿಂಟ್ಯಂತ್ರ ಹಾಗೂ ದ್ವಿಚತ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಆರೋಪಿಗಳು ಆಧಾರ್ ಕಾರ್ಡ್ಗಳಿಗೆ ಅಕ್ರಮವಾಗಿ ನೋಂದಣಿ ಮಾಡಿಸಿ ಜನರಿಂದ ತಲಾ 25 ರು.ಗಳನ್ನು ಸಂಗ್ರಹಣೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತ; ಬೈಕ್ ಸವಾರ ಸಾವು
ಮಾಲೂರು: ಟಿಪ್ಪರ್ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ಇಇನ್ನೊಬ್ಬ ತೀವ್ರ ಗಾಯಗೊಂಡಿರುವ ಘಟನೆ ಶುಕ್ರವಾರ ಸಂಜೆ ಇಲ್ಲಿನ ಕೋಲಾರ ರಸ್ತೆಯ ಎಸ್ಎಫ್ಎಸ್ ಶಾಲೆ ಬಳಿ ನಡೆದಿದೆ. ಮೃತನನ್ನು ತಮಿಳುನಾಡು ರಾಜ್ಯ ಹೂಸೂರು ಮಧುಸೂಧನ್ರೆಡ್ಡಿ(38)ಎಂದು ಗುರುತಿಸಲಾಗಿದೆ. ಹಿಂಬದಿ ಕುಳಿತಿದ್ದ ನಾರಾಯಣಸ್ವಾಮಿ ತೀವ್ರ ಗಾಯಗೊಂಡಿದ್ದು, ಕೋಲಾರದ ಜಾಲಪ್ಪ ಆಸ್ವತ್ರೆಗೆ ಸೇರಿಸಲಾಗಿದೆ. ಕಾರ್ಯ ನಿಮಿತ್ತ ಹೂಸೂರಿನಿಂದ ಮಾಲೂರು ಮೂಲಕ ಮಧುಸೂಧನ್ ರೆಡ್ಡಿ ತನ್ನ ಸ್ನೇಹಿತ ನಾರಾಯಣಸ್ವಾಮಿ ಜತೆ ಕೋಲಾರ ಕಡೆ ಹೊರಟಾಗ ಈ ಘಟನೆ ಸಂಭವಿಸಿದೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಅತ್ಯಾಚಾರಕ್ಕೆ ಯತ್ನ
ಕೋಲಾರ: ಬಯಲು ಶೌಚಕ್ಕೆ ಹೋಗಿದ್ದ ಯುವತಿಯ ಮೇಲೆ ಅದೇ ಗ್ರಾಮದ ಕಿಶೋರ ಎಂಬುವನು ಅತ್ಯಾಚಾರಕ್ಕೆ ಯತ್ನಿಸಿ ಪ್ರಾಣ ಬೆದರಿಕೆ ಹಾಕಿರುವ ಘಟನೆ ತಾಲೂಕಿನ ವಕ್ಕಲೇರಿಯ ಮಲ್ಲೇಶ್ವರ ನಗರದಲ್ಲಿ ನಡೆದಿದೆ. ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಿದ್ದಾರೆ.