ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ ನೀಡಲು ಒತ್ತಾಯ
ಕೋಲಾರ: ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲಾ ಸಹ ಶಿಕ್ಷಕರ ಹುದ್ದೆಗೆ ಜೇಷ್ಠತೆ ಹಾಗೂ ನಿಯಮಗಳನ್ನು ಪರಿಗಣಿಸದೇ ಏಕಪಕ್ಷೀಯವಾಗಿ ಬಡ್ತಿ ನೀಡಲು ಮುಂದಾಗಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದ್ದೇಶಕರ ಕ್ರಮ ಸರಿಯಲ್ಲ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್. ಮಂಜುನಾಥ್ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಸದರಿ ಬಡ್ತಿ ನೀಡುವ ತಪ್ಪು ನಿರ್ಧಾರದ ಕುರಿತು ಕಳೆದ ಡಿ.6 ರಂದು ಜಿಪಂ ಸಿಇಒ ಹಾಗೂ ಅಧ್ಯಕ್ಷರನ್ನು ಸಂಘದ ಪದಾಧಿಕಾರಿಗಳು ಭೇಟಿ ಮಾಡಿ ಈ ಬಗ್ಗೆ ಗಮನ ಸೆಳೆದಿದ್ದರು. ಈ ಸಂದರ್ಭದಲ್ಲಿ ಸಿಇಒ ಅವರು, ಡಿಡಿಪಿಐ ಅವರಿಗೆ ಸೂಚನೆ ನೀಡಿ, ನಿಯಮಾನುಸಾರ ಜೇಷ್ಠತಾ ಪಟ್ಟಿ ಪ್ರಕಟಿಸಬೇಕು, ಶಿಕ್ಷಕರಿಂದ ಆಕ್ಷೇಪಣೆಗಳನ್ನು ಪಡೆದು ನಂತರ ಖಾಲಿ ಇರುವ ಶೇ.50 ರಷ್ಟು ಹುದ್ದೆಗಳನ್ನು ಬಡ್ತಿ ಮೂಲಕ ತುಂಬುವಂತೆ ಸೂಚಿಸಿದರು ಎಂದು ತಿಳಿಸಿದ್ದಾರೆ. ಆದರೆ ಡಿಡಿಪಿಐ ಅವರು, ಸಿಇಒ ಅವರ ಸೂಚನೆಯನ್ನು ಪಾಲಿಸಿಲ್ಲ, ಇದುವರೆಗೂ ಜೇಷ್ಠತಾ ಪಟ್ಟಿ ಪ್ರಕಟಿಸಿಲ್ಲ, ತಾಲೂಕುವಾರು ಹಾಗೂ ವಿಷಯವಾರು ಖಾಲಿ ಹುದ್ದೆಗಳ ಪಟ್ಟಿಯನ್ನು ಇದುವರೆಗೂ ಪ್ರಕಟಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದುವರೆಗೂ ಖಾಲಿ ಇರುವ ಹುದ್ದೆಗಳನ್ನು ಪ್ರಕಟಿಸಿದೇ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ಶಿಕ್ಷಕರ ಸಂಘದ ಪ್ರತಿನಿಧಿಗಳು ಹಲವಾರು ಬಾರಿ ಮನವಿ ನೀಡಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ. ಡಿಡಿಪಿಐ ಅವರು ಶಿಕ್ಷಕರ ಸಂಘದ ಪ್ರತಿನಿಧಿಗಳನ್ನು ಕಡೆಗಣಿಸಿ, ನಿಯಮಗಳನ್ನು ಪಾಲಿಸದೇ ಕೆಲವು ಹೊರ ಶಕ್ತಿಗಳ ಪ್ರಭಾವಕ್ಕೆ ಒಳಗಾಗಿ ಬಡ್ತಿ ನೀಡಲು ಮುಂದಾಗಿದ್ದಾರೆಂಬ ಮಾಹಿತಿ ಇದ್ದು, ಇದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಈ ಬಗ್ಗೆ ಗಮನಹರಿಸಿ ಶಿಕ್ಷಕರಿಗೆ ನ್ಯಾಯ ಒದಗಿಸದಿದ್ದಲ್ಲಿ ರಾಜ್ಯ ಸಂಘದ ನೇತೃತ್ವದಲ್ಲಿ ಇಲಾಖೆಯ ಆಯುಕ್ತರು ಮತ್ತು ಪ್ರಧಾನ ಕಾರ್ಯದರ್ಶಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.