ಮಕ್ಕಳಲ್ಲಿನ ಸೂಪ್ತ ಪ್ರತಿಭೆ ಗುರುತಿಸಿ: ಕೂಡಾ ಆಯುಕ್ತ ನಾಗರಾಜಗೌಡ ಸಲಹೆ
ಕೋಲಾರ: ಮಕ್ಕಳಲ್ಲಿ ಅಡಗಿರುವ ಸೂಪ್ತ ಪ್ರತಿಭೆಯನ್ನು ಗುರುತಿಸಿ ಉತ್ತಮ ಅವಕಾಶಗಳನ್ನು ಕಲ್ಪಿಸಿದಲ್ಲಿ ವ್ಯಕ್ತಿತ್ವ ವಿಕಸನದ ಜೊತೆಗೆ ಪ್ರತಿಭಾವಂತರನ್ನಾಗಿ ಮಾಡಬಹುದೆಂದು ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಕೆ.ಎಸ್.ನಾಗರಾಜಗೌಡ ಅಭಿಪ್ರಾಯಪಟ್ಟರು. ತಾಲೂಕಿನ ವಕ್ಕಲೇರಿಯಲ್ಲಿ ಶುಕ್ರವಾರ ಸಮೂಹ ಸಂಪನ್ಮೂಲ ಕೇಂದ್ರ ಆಯೋಜಿಸಿದ್ದ ಪ್ರತಿಭಾ ಕಾರಂಜಿ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡುತ್ತಿದ್ದರು. ಜಿ.ಶ್ರೀನಿವಾಸ್ ಮಾತನಾಡಿ, ಡಾ.ರಾಜ್ಕುಮಾರ್, ರಜನೀಕಾಂತ್, ಸಚಿನ್ ತೆಂಡೂಲ್ಕರ್ ಅಂತಹ ಮೇರು ವ್ಯಕ್ತಿತ್ವದ ಮಹನೀಯರುಗಳು ತಮ್ಮ ಪ್ರತಿಭೆಯಿಂದಲೇ ರಾಷ್ಟ್ರಮನ್ನಣೆ ಪಡೆದಿದ್ದು, ವಿದ್ಯಾರ್ಥಿಗಳು ಪಾಠ, ಪದ್ಯಗಳಲ್ಲಿ ಬರುವ ಸಾಹಿತ್ಯವನ್ನು ಹಾಡು ತಾಳಗಳಿಂದ, ಗುಣಗಾನ ಮಾಡಿ ಸಾಹಿತ್ಯಾಸಕ್ತರಾಗಬೇಕುಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿದ್ಯಾಭಿವೃದ್ಧಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ವೆಂಕಟಸ್ವಾಮಿ ಮಾತನಾಡಿ ಪ್ರಾಥಮಿಕ ಹಂತದಿಂದಲೇ ಕಥೆ, ಕವನ, ನಾಟಕ, ಹಾಸ್ಯ, ಪ್ರಬಂಧಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ಮುಂದಿನ ಸ್ಪರ್ಧಾ ಜಗತ್ತನ್ನೂ ಎದುರಿಸುವ ಶಕ್ತಿ ರೂಪಗೊಳ್ಳುತ್ತದೆ ಎಂದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮುಖಂಡರಾದ ಬೈರೇಗೌಡ, ಚಂದ್ರಪ್ಪ, ತಾಲ್ಲೂಕು ಉಪಾಧ್ಯಕ್ಷ ಸಿ.ಮಂಜುನಾಥ, ಎಸ್.ಆರ್.ವಿ.ಶಾಲೆಯ ಸಂಗಮೇಶ್ ಮತ್ತಿತರರು ಇದ್ದರು.