ಮಿತಿ ಮೀರಿದ ಅವರೇಕಾಯಿ ದಲ್ಲಾಳಿಗಳ ಹಾವಳಿ
ಚಿಂತಾಮಣಿ: ನಗರಸಭೆ ಸ್ಥಳದಲ್ಲಿ ಅವರೇಕಾಯಿ ದಲ್ಲಾಳಿಗಳು ಸಾರ್ವಜನಿಕರು ಸಂಚರಿಸುವ ದಾರಿಯಲ್ಲೇ ಹರಾಜು ಪ್ರಕ್ರಿಯೆ ಮಾಡುತ್ತಿರುವುದರಿಂದ ಸಾರ್ವಜನಿಕರ ಸುಗಮ ಸಂಚಾರಕ್ಕೆ ಕಿರಿಕಿರಿ ಉಂಟಾಗುತ್ತಿದ್ದರೂ ಸಂಬಂಧಪಟ್ಟ ನಗರಸಭೆ ಹಾಗೂ ಎಪಿಎಂಸಿ ಅಧಿಕಾರಿಗಳು ಮೌನವಾಗಿರುವ ಬಗ್ಗೆ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದ ಐಡಿಎಂಸಿ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಹಲವು ಅವರೇಕಾಯಿ ದಲ್ಲಾಳಿಗಳು ಹಾಗೂ ವ್ಯಾಪಾರಸ್ಥರು ಸ್ಥಳವನ್ನು ಅತಿಕ್ರಮಣ ಮಾಡಿಕೊಂಡು ಗ್ರಾಮಾಂತರ ಪ್ರದೇಶದಿಂದ ರೈತರು ತರುವ ಅವರೇಕಾಯಿಯನ್ನು ಬಲವಂತದಿಂದ ಪಡೆದು ಹರಾಜಿನಲ್ಲಿ 100ಕ್ಕೆ 10ರಿಂದ 20ರವರೆಗೂ ಕಮಿಷನ್ ಪಡೆದು ರೈತರಿಗೆ ಬಿಳಿ ಚೀಟಿ ನೀಡಿ ವಂಚನೆ ಮಾಡುತ್ತಿದ್ದಾರೆ. ಈ ವರ್ಷದಲ್ಲಿ ಮಳೆ ಪ್ರಮಾಣ ತೀರ ಕಮ್ಮಿಯಾಗಿರುವುದರಿಂದ ಅವರೇಕಾಯಿ ಬೆಳೆ ಅಲ್ಪ ಪ್ರಮಾಣದಲ್ಲಿ ದೊರೆತಿದ್ದು, ಪ್ರಾರಂಭದಲ್ಲಿಯೇ ರೈತರಿಗೆ ಪ್ರತಿ ಕೆಜಿ ಅವರೇಕಾಯಿಗೆ 20ರಿಂದ 30 ನಿಗದಿಪಡಿಸಿ ದಲ್ಲಾಳಿಗಳು ಮೋಸ ಮಾಡುತ್ತಿದ್ದಾರೆ.
ಬೆವರು ಸುರಿಸಿ ಶ್ರಮದಿಂದ ಅವರೇಕಾಯಿ ಮೂಟೆಗಳನ್ನು ಹಳ್ಳಿಯಿಂದ ನಗರಕ್ಕೆ ತರುವ ರೈತರಿಗೆ ಹಲವು ದಲ್ಲಾಳಿಗಳು ಬಸ್ನಿಂದ ಕೆಳಗೆ ಇಳಿಸುವ ಮುನ್ನವೇ ಬಲವಂತದಿಂದ ನಗರದ ಐಡಿಎಂಸಿ ಕಾಂಪ್ಲೆಕ್ಸ್ ಮುಂಭಾಗದಲ್ಲಿ ರೈತನ ಒಪ್ಪಿಗೆ ಪಡೆಯದೆ ಹರಾಜು ಪ್ರಕ್ರಿಯೆ ನಡೆಸುತ್ತಿದ್ದಾರೆ. ತೂಕದಲ್ಲಿಯೂ ಮೋಸ ಮಾಡಿ ಮತ್ತು ನಿಗಿದಿತ ಬೆಲೆಯೂ ನೀಡದೇ ವಂಚಿಸುತ್ತಿರುವುದಾಗಿ ಸಾರ್ವಜನಿಕರಿಂದ ಆರೋಪಿಸಿದ್ದಾರೆ.
ನಗರಸಭೆ ನಿರ್ಲಕ್ಷ್ಯ: ಹಿಂದಿನ ನಗರಸಭೆ ಆಯುಕ್ತ ಡಾ. ರಾಮೇಗೌಡ ಐಡಿಎಂಸಿ ಮುಂಭಾಗದಲ್ಲಿ ಅವರೇಕಾಯಿ ಹರಾಜು ಪ್ರಕ್ರಿಯೆಯನ್ನು ನಡೆಸದಂತೆ ಬಿಗಿ ಕ್ರಮ ಕೈಗೊಂಡ ಪರಿಣಾಮ ಎಪಿಎಂಸಿ ಯಾರ್ಡ್ ಬಳಿ ಅವರೇಕಾಯಿ ವ್ಯಾಪಾರ ವಹಿವಾಟು ನಡೆಯುತ್ತಿತ್ತು. ಆದರೆ ಈಗ ಸುಂಕರಹಿತ ಸಾವಿರಾರು ರೂಪಾಯಿ ವಹಿವಾಟು ಚಿಂತಾಮಣಿ ನಗರದಲ್ಲಿ ನಡೆಯುತ್ತಿದ್ದರೂ, ಸ್ಥಳೀಯ ನಗರಸಭೆ ಹಾಗೂ ಎಪಿಎಂಸಿ ಅಧಿಕಾರಿಗಳಿಗೆ ತಿಳಿದೂ ತಮಗೆ ಆರ್ಥಿಕ ನಷ್ಟ ಉಂಟು ಮಾಡುವ ಅವರೇಕಾಯಿ ದಲ್ಲಾಳಿಗಳಿಗೆ ಕಡಿವಾಣ ಹಾಕದೆ ಇರುವ ಬಗ್ಗೆ ಗ್ರಾಹಕರು ಮತ್ತು ನಾಗರಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಸುಗಮ ಸಂಚಾರಕ್ಕೆ ಅಡ್ಡಿ: ಕಾಂಪ್ಲೆಕ್ಸ್ನಲ್ಲಿ ವ್ಯಾಪಾರ ವಹಿವಾಟು ಮಾಡಲು ಬರುವ ಗ್ರಾಹಕರಿಗೆ ಅವರೇಕಾಯಿ ದಲ್ಲಾಳಿಗಳು ಮನ ಬಂದಂತೆ ಪ್ಲಾಸ್ಟಿಕ್ ಪೇಪರನ್ನು ರಸ್ತೆಯಲ್ಲಿಯೇ ಹಾಕಿ ರಾಜಾರೋಷವಾಗಿ ಅವರೇಕಾಯಿ ವ್ಯಾಪಾರ ನಡೆಸುತ್ತಿರುವುದರಿಂದ ನಾಗರಿಕರಿಗೆ ಸುಗಮವಾಗಿ ಸಂಚರಿಸಲು ಆಗುತ್ತಿಲ್ಲ. ಹಲವು ವ್ಯಾಪಾರಿಗಳು ತಳ್ಳುವ ಗಾಡಿಗಳನ್ನು ರಸ್ತೆಗೆ ಅಡ್ಡಲಾಗಿ ಇಟ್ಟಿರುವುದರಿಂದ ಮಹಿಳೆ, ವೃದ್ಧ, ವಿದ್ಯಾರ್ಥಿನಿಯರಿಗೆ ಸುಗಮವಾಗಿ ಸಂಚರಿಸಲು ಕಿರಿಕಿರಿ ಉಂಟಾಗುತ್ತಿದೆಯೆಂದು ಆರೋಪಿಸಿದ್ದಾರೆ.
ಇನ್ನು ಮುಂದಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
-ಎನ್.ಬಾಬು