ರೈತರ ಅಧ್ಯಯನ ಪ್ರವಾಸ ಬಗ್ಗೆ ವಿವರಣೆ
ಚಿಂತಾಮಣಿ: ಜಿಲ್ಲೆಯ ಮಾವಿನ ಹಣ್ಣುಗಳನ್ನು ವಿದೇಶಕ್ಕೆ ರಪ್ತು ಮಾಡುವ ಕುರಿತು ಮಾಡಲಾಗಿರುವ ಅಧ್ಯಯನ ಪ್ರವಾಸವು ಹೆಚ್ಚು ಅನುಕೂಲವಾಗಿದ್ದು, ಅಧಿಕಾರಗಳಿಂದ ಹೆಚ್ಚು ಮಾಹಿತಿ ಸಂಗ್ರಹವಾಗಿದೆ ಎಂದು ಕೆ.ಶ್ರೀನಿವಾಸಗೌಡ ಸಂಕ್ಷಿಪ್ತವಾಗಿ ವಿವರಿಸಿದರು. ನಗರದ ಸಿದ್ದಾರ್ಥ ಪಪೂ ಕಾಲೇಜಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ಮಿತ್ರರ ಜೊತೆ ಮಾತನಾಡಿದ ಕೆ.ಶ್ರೀನಿವಾಸಗೌಡರು, ಮಹಾರಾಷ್ಟ್ರದ ದಪೋಲಿ ಸಂಶೋಧನ ಸಂಸ್ಥೆ, ರತ್ನಗಿರಿ ಬಾದಾಮಿ ಮತ್ತು ದೇವಗಡ ಮಾವು ರೈತರ ತೋಟಗಳ ಅವರ ಸಹಕಾರ ಸಂಘಗಳ ಬಗ್ಗೆ ಮತ್ತು ಸಂಸ್ಕರಣ ಘಟಕಗಳು ಮತ್ತು ಪುನಶ್ಚೇತನ, ವಿಶೇಷ ತಳಿಗಳ ಬಗ್ಗೆ, ವಿದೇಶಿ ತಳಿ ಅಧ್ಯಯನ ಕೈಗೊಳ್ಳಲಾಗಿತ್ತು.
ಈ ಪ್ರವಾಸವನ್ನು ತೋಟಗಾರಿಕೆ ಇಲಾಖೆ ವತಿಯಿಂದ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ರೈತರನ್ನು 5 ದಿನಗಳ ಆಯೋಜಿಸಲಾಗಿತ್ತು ಎಂದು ಮಾವು ಬೆಳೆಗಾರರ ಸಹಕಾರ ಸಂಘದ ಜಿಲ್ಲಾಧ್ಯಕ್ಷ ಕೆ.ಶ್ರೀನಿವಾಸಗೌಡ ವಿವರಿಸಿದರು.
ಪ್ರಮಾಣ ಪತ್ರ ವಿತರಣೆ
ಶಿಡ್ಲಘಟ್ಟ: ಮಾಜಿ ಸಚಿವ ವಿ. ಮುನಿಯಪ್ಪನವರ ಕಾಲಾವಧಿಯಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳೇ ತಮ್ಮ ಗೆಲುವಿಗೆ ಶ್ರೀರಕ್ಷೆ ಎಂದು ಮಳಮಾಚನಹಳ್ಳಿ ಗ್ರಾಪಂ ಸದಸ್ಯ ರಾಮಾಂಜಿನಪ್ಪ ಹೇಳಿದರು. ತಾಲೂಕು ಕಚೇರಿಯ ಚುನಾವಣೆ ಶಾಖೆಯಲ್ಲಿ ಸಾಮೂಹಿಕವಾಗಿ ಪ್ರಮಾಣ ಪತ್ರ ಸ್ವೀಕರಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಳಮಾಚನಹಳ್ಳಿ ಗ್ರಾಪಂ ಸದಸ್ಯ ಅರುಣಮ್ಮ ವೆಂಕಟೇಶಪ್ಪ, ಮುನಿರತ್ನಮ್ಮ ರಾಮಾಂಜಿನಪ್ಪ, ಡಿ.ವಿ. ವೆಂಕಟೇಶಪ್ಪ, ಭಾಗ್ಯಮ್ಮ ಪಾಪಣ್ಣ, ಜಯಮ್ಮದ್ಯಾವಪ್ಪ, ಪದ್ಮಮ್ಮ ಆಂಜಿನಪ್ಪ(ಚಿಕ್ಕದಾಸರಹಳ್ಳಿ)ಅವರನ್ನು ಚುನಾವಣೆ ಶಾಖೆಯ ಶಿರಸ್ತೆದಾರ ಪ್ರಕಾಶ್ ಹಾಗೂ ಚುನಾವಣಾಧಿಕಾರಿ ನರಸಿಂಹಮೂರ್ತಿ ಪ್ರಮಾಣಪತ್ರಗಳನ್ನು ವಿತರಿಸಿದರು.
5ರಂದೇ ವೇತನ ನೀಡಲು ಒತ್ತಾಯ
ಕೋಲಾರ: ಪ್ರಾಥಮಿಕ ಶಾಲಾ ಶಿಕ್ಷಕರಿಗೆ ವೇತನ ಬಿಡುಗಡೆ ವಿಳಂಬವಾಗುತ್ತಿರುವುದರಿಂದ ಇನ್ನು ಮುಂದೆ ಪ್ರತಿ ತಿಂಗಳು 5ನೇ ತಾರೀಕಿನೊಳಗೆ ವೇತನ ಬಿಡುಗಡೆ ಮಾಡುವಂತೆ ಬಂಗಾರಪೇಟೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮುಖಂಡರು ಜಿಪಂ ಅಧ್ಯಕ್ಷರಿಗೆ ಮನವಿ ಪತ್ರ ಮೂಲಕ ಒತ್ತಾಯಿಸಿದ್ದಾರೆ. ತಿಂಗಳ ಮೊದಲ ದಿನವೇ ಸರ್ಕಾರಿ ನೌಕರರಿಗೆ ವೇತನ ನೀಡಬೇಕೆಂಬ ಸರ್ಕಾರದ ನಿಯಮವಿದ್ದರೂ ನವೆಂಬರ್ ತಿಂಗಳ ವೇತನ ಇನ್ನೂ ಬಿಡುಗಡೆವಾಗಿಲ್ಲವಾದ್ದರಿಂದ ಶಿಕ್ಷಕರ ಜೀವನ ನಿರ್ವಹಣೆಗೆ ತೊಂದರೆಯಾಗಿದೆ ಎಂದು ಸಂಘದ ಪದಾಧಿಕಾರಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ. ಈ ವೇಳೆ ಬಂಗಾರಪೇಟೆ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಹರಿನಾರಾಯಣ, ಪತ್ರಿಕಾ ಕಾರ್ಯದರ್ಶಿ ಎಂ.ಆರ್.ದೇವರಾಜ್, ಮಾಜಿ ಅಧ್ಯಕ್ಷ ಬಿ.ಆರ್.ಚಿನ್ನಪ್ಪರೆಡ್ಡಿ, ಪ್ರತಿನಿಧಿಗಳಾದ ಆರ್.ಸಂಜೀವಪ್ಪ, ಎಂ.ಆರ್.ಆಂಜನೇಯಗೌಡ, ಎ.ರಮೇಶ್, ಎಂ.ಆರ್.ಮಾರ್ಕೊಂಡಪ್ಪ ಇದ್ದರು.
ಗುಣಮಟ್ಟದ ಹಾಲು ಸರಬರಾಜು ಮಾಡಲು ಕರೆ
ಮುಳಬಾಗಲು: ಗುಣಟ್ಟದ ಹಾಲು ಸರಬರಾಜು ಮಾಡಲು ಹಾಲು ಉತ್ಪಾದಕರಿಗೆ ಕೋಮುಲ್ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್ ಸೂಚಿಸಿದರು. ತಾಲೂಕಿನ ಕಾಡೇನಹಳ್ಳಿ ಮತ್ತು ಆಲಂಗೂರು ಗ್ರಾಮಗಳಲ್ಲಿ ಕೋಚಿಮುಲ್‌ನಿಂದ ನಿರ್ಮಿಸಿರುವ ಬಲ್ಕ್‌ಮಿಲ್ಕ್ ಕೂಲರ್‌ಗಳನ್ನು ಪ್ರಾರಂಭಿಸಿ ಮಾತನಾಡಿ, ಗುಣಮಟ್ಟದ ಹಾಲು ನೀಡದಿದ್ದಲ್ಲಿ ಹಾಲು ಉತ್ಪಾದಕ ಸಹಕಾರ ಸಂಘಗಳ ನಂತರ ಕೋಚಿಮುಲ್‌ಗೆ ಭವಿಷ್ಯ ಇರುವುದಿಲ್ಲವೆಂದರು. ಕೋಚಿಮುಲ್ ರೈತರಿಗೆ ಮೇವು ಮುಂತಾದ ಹಲವಾರು ಸವಲತ್ತುಗಳನ್ನು ನೀಡುತ್ತಿದ್ದು ಅವುಗಳ ಸದುಪಯೋಗ ಪಡೆದುಕೊಳ್ಳಲು ಕರೆ ನೀಡಿದರು. ತಾಲೂಕು ಜೆಡಿಎಸ್ ಅಧ್ಯಕ್ಷ ಆಲಂಗೂರು ಶಿವಣ್ಣ, ಡಾ. ಶಿವರಾಜ್ ಇದ್ದರು.
ಉಚಿತ ಆರೋಗ್ಯ ಶಿಬಿರ ಇಂದು
ಕೋಲಾರ: ಆರ್.ಎಲ್.ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ದೇವರಾಜ್ ಅರಸ್ ವೈದ್ಯಕೀಯ ಮಹಾ ವಿದ್ಯಾಲಯವು ಚಿಂತಾಮಣಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ಡಿ.14 ರಂದು ಶನಿವಾರ ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ. ಈ ಶಿಬಿರದಲ್ಲಿ ಎಲ್ಲಾ ತಜ್ಞರು ಭಾಗವಹಿಸಲಿದ್ದು ಕಾಯಿಲೆಗಳಿಗೆ ಸಂಬಂಧಪಟ್ಟ ತಜ್ಞರಿಂದ ಚಿಕಿತ್ಸೆ ನೀಡಲಿದ್ದಾರೆಂದು ಆರ್.ಎಲ್.ಜಾಲಪ್ಪ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಕೃಷ್ಣಮೂರ್ತಿ ಮತ್ತು ಎನ್.ಅಕ್ಷಯ್ ಕುಮಾರ್ ತಿಳಿಸಿದ್ದಾರೆ.
ಅಧಿಕಾರ ವಹಿಸಿಕೊಂಡ ಡಿವೈಎಸ್‌ಪಿ
ಕೆಜಿಎಫ್: ಕೆಜಿಎಫ್ ಪೊಲೀಸ್ ಜಿಲ್ಲೆಯ ನೂತನ ಉಪರಕ್ಷಣಾಧಿಕಾರಿಯಾಗಿ ಎ.ಕೆ. ವಿವೇಕಾನಂದ ಎರಡನೇ ಬಾರಿಗೆ ವರ್ಗಾವಣೆಗೊಂಡು ಶುಕ್ರವಾರ ಪರಭಾರೆ ವಹಿಸಿಕೊಂಡರು. ಹಾಲಿ ಕೆಜಿಎಫ್ ಡಿವೈಎಸ್ಪಿಯಾಗಿದ್ದ ಎಚ್.ಪಿ. ರಾಜಣ್ಣ ಅವರಿಗೆ ಬೆಂಗಳೂರು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ಈ ಹಿಂದೆ ಸೆ.27 ರಂದು ಎ.ಕೆ. ವಿವೇಕಾನಂದ ಅವರು ಡಿವೈಎಸ್ಪಿಯಾಗಿ ಅಧಿಕಾರಿ ವಹಿಸಿಕೊಂಡಿದ್ದರು.
ಇಂದು ಕಾರ್ಯಾಗಾರ
ಕೋಲಾರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಡಿ.14 ರಂದು ಬೆಳಗ್ಗೆ 11 ಗಂಟೆಗೆ ಒಂದು ದಿನದ ಕುಟುಂಬ ಕಲ್ಯಾಣ ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಡಾ.ಫಯಾಜ್ ಖಾನ್ ತಿಳಿಸಿದ್ದಾರೆ. ಡಾ.ಎನ್.ರಾಜಕುಮಾರ್, ಡಾ.ಸುಧಾ, ಡಾ.ಜಗನ್ನಾಥ್ ಭಾಗವಹಿಸಲಿದ್ದಾರೆ.