ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಹೊಸಕೆರೆ ನೀರಿನಿಂದ ತೊಂದರೆಯಿಲ್ಲ

Vishwanath S
Updated On : 14 Dec 2013, 12:26 pm

ಕ.ಪ್ರ.ವಾರ್ತೆ ,  ಗೌರಿಬಿದನೂರು ,  ಡಿ.13
ಪಟ್ಟಣದಲ್ಲಿ ಉಂಟಾಗಿರುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ತಾಲೂಕಿನ ಮಂಚೇನಹಳ್ಳಿ ಹೋಬಳಿ ದಂಡಿಗಾನಹಳ್ಳಿಯ ಹೊಸಕೆರೆಯಿಂದ ಕುಡಿಯುವ ನೀರಿನ ಯೋಜನೆಯೊಂದನ್ನು ರೂಪಿಸಿದೆ.
ಈ ಯೋಜನೆ ತಯಾರಿಸಲು ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅನುಮೋದನೆ ದೊರೆತಿದ್ದು, ಈ ಸಂಬಂಧ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಣ್ಣನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಿಗೆ ಪತ್ರ ಬರೆದು  ಕುಡಿಯುವ ನೀರಿನ ಯೋಜನೆ ತಯಾರಿಸಲು ಹೊಸಕೆರೆಯನ್ನು ಗೌರಿಬಿದನೂರು ಪುರಸಭೆಗೆ ಹಸ್ತಾಂತರಿಸುವಂತೆ ಪತ್ರ ಬರೆದಿದೆ.
ಗೌರಿಬಿದನೂರು ಶಾಸಕ ಎನ್.ಎಚ್. ಶಿವಶಂಕರರೆಡ್ಡಿ ಅವರಿಗೆ ಕಳೆದ 6 ತಿಂಗಳ ಹಿಂದೆ ಪಟ್ಟಣದಲ್ಲಿ ಕುಡಿಯುವ ನೀರಿನ ಗಂಭೀರ ಪರಿಸ್ಥಿತಿ ಬಗ್ಗೆ ಪುರಸಭೆಯಲ್ಲಿ ನಡೆದ ಸಭೆಯಲ್ಲಿ ಮನವರಿಕೆ ಮಾಡಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂದು ಕೋರಲಾಗಿತ್ತು.
ಹೇಮಾವತಿ ನದಿ ನೀರನ್ನು ನಾಲೆಗಳ ಮೂಲಕ ಮಧುಗಿರಿ ಮತ್ತು ಕೊರಟಗೆರೆಗೆ ಬರುತ್ತಿರುವ ನೀರನ್ನು ಪಟ್ಟಣಕ್ಕೂ ಬಳಸಿಕೊಳ್ಳುವ ಬಗ್ಗೆ ಹೇಮಾವತಿ ಯೋಜನೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಈ ಯೋಜನೆಗೆ ಸಮಾರು ರು. 250 ರಿಂದ ರು. 300 ಕೋಟಿ ವೆಚ್ಚಮಾಡಬೇಕು. ಜೊತೆಗೆ ಕೇವಲ 3 ತಿಂಗಳು ಮಾತ್ರ ನೀರು ಲಭ್ಯವಿದ್ದು, ಯೋಜನೆ ಪೂರ್ಣಗೊಳ್ಳಲು ಹಲವು ವರ್ಷಗಳ ಸಮಯ ಬೇಕಾಗುತ್ತದೆ. ಆದ್ದರಿಂದ ಇದನ್ನು ಕೈಬಿಟ್ಟು ದಂಡಿಗಾನಹಳ್ಳಿಯ ಹೊಸಕೆರೆಯನ್ನು ಬಳಸಿಕೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ನೀರಿನ ಅಭಾವಕ್ಕೆ ಕಾರಣ: ತಾಲೂಕಿನಲ್ಲಿ ಅತಿಯಾದ ಮರಳು ಕಳ್ಳಸಾಗಾಣಿಕೆ ಆಗುತ್ತಿರುವುದರಿಂದ ಅಂತರ್ಜಲ ಮಟ್ಟ ಕುಸಿದು ಕೊಳವೆ ಬಾವಿಗಳು ಬತ್ತಿಹೋಗಿವೆ. ನಂದಿ ಬೆಟ್ಟದಲ್ಲಿ ಬಿದ್ದ ಅಲ್ಪಸ್ವಲ್ಪ ಮಳೆಯಿಂದ ಕೋಡಿಹರಿಯುತ್ತಿದ್ದ ಜಕ್ಕಲಮಡುಗು ಡ್ಯಾಂ ನೀರನ್ನು ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ತಾಲೂಕುಗಳಿಗೆ ಕುಡಿಯುವ ನೀರು ಪೂರೈಸಲು ಡ್ಯಾಂನ್ನು ಎತ್ತರಗೊಳಿಸಿರುವುದರಿಂದ ಕೋಡಿಹರಿದು ಬರುತ್ತಿದ್ದ ಉತ್ತರ ಪಿನಾಕಿನಿ ನದಿಯೂ ಕಳೆದ 4ವರ್ಷದಿಂದ ಬತ್ತಿದ್ದು ಪಟ್ಟಣ ಮತ್ತು ಸುತ್ತಮುತ್ತಲಿನ ಕೊಳವೆ ಬಾವಿಗಳು ಬತ್ತಿವೆ.
ಕಳೆದ 10ವರ್ಷದಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಸುಮಾರು 83 ಕೊಳವೆ ಬಾವಿಗಳನ್ನು ಕೊರೆದಿದ್ದು, ಅದರಲ್ಲಿ 46 ಒಣಗಿದ್ದು ಉಳಿದ 33ರಲ್ಲಿ ಸಣ್ಣ ಪ್ರಮಾಣದ ನೀರು ಬಂದು ಬತ್ತುವ ಹಂತಕ್ಕೆ ತುಲುಪಿವೆ. ಪ್ರಸ್ತುತ ರೈತರ 4 ಖಾಸಗಿ ಕೊಳವೆ ಬಾವಿಗಳಿಂದ ತಿಂಗಳ ಬಾಡಿಗೆಯಂತೆ ನೀರನ್ನು ಪಡೆಯಲಾಗುತ್ತಿದೆ.
ಪಟ್ಣದ ಜನಸಂಖ್ಯೆ ಸುಮಾರು 38 ಸಾವಿರವಿದ್ದು, ಪ್ರತಿದಿನ 16.34ಲಕ್ಷ ಲೀಟರ್ ನೀರನ್ನು 23ವಾರ್ಡ್‌ಗಳಿಗೆ ಟ್ಯಾಂಕರ್ ಮೂಲಕ ಸರಬರಾಜು ಮಾಡುತ್ತಿದ್ದರೂ ನೀರು ಸಾಲುತ್ತಿಲ್ಲ. ಇನ್ನು ತಾಲೂಕಿನ ಕಿಂಡಿ ಅಣೆಕಟ್ಟಿನ ಬಳಿ ಸುಮಾರು 5 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಕಿಂಡಿ ಯೋಜನೆ ನದಿ ನೀರಿಲ್ಲದ ಕಾರಣ ಬತ್ತಿಹೋಗಿದೆ.
ದಂಡಿಗಾನಹಳ್ಳಿ ಹೊಸಕೆರೆ ಕುಡಿಯುವ ನೀರಿನ ಯೋಜನೆಯಿಂದ ನಾಗರಿಕರಿಗೆ ಕುಡಿಯುವ ನೀರು ಒದಗಿಸುವುದು ಪುರಸಭೆಯ ಗುರಿಯಾಗಿದ್ದು, ಯೋಜನೆಯಿಂದ ಹೊಸಕೆರೆ ಅಚ್ಚುಕಟ್ಟಿನ ರೈತರಿಗೆ ಯಾವುದೇ ತೊಂದರೆಯಿಲ್ಲ ಎಂಬುದು ತಜ್ಞರ ಅಭಿಪ್ರಾಯ. ಕೆರೆಯಿಂದ ನೇರವಾಗಿ ನೀರನ್ನು ತೆಗೆದುಕೊಳ್ಳದೆ ಕರೆಯ ಸಮೀಪದಲ್ಲಿ ಎರಡು ಜಾಕ್‌ವೆಲ್‌ಗಳನ್ನು ಅಳವಡಿಸುವ ಮೂಲಕ ಅಲ್ಲಿಯೇ ನಿರ್ಮಿಸುವ ಟ್ಯಾಂಕ್‌ಗಳಿಗೆ ತುಂಬಿಸಿ ಗುರುತ್ವಾಕರ್ಷಣೆ ಮೂಲಕ ದಂಡಿಗಾನಹಳ್ಳಿ, ಪೆದ್ದ ನಾಗೇನಹಳ್ಳಿ, ಪುರ, ರಾಯನಕಲ್ಲು, ಮಂಚೇನಹಳ್ಳಿ, ಬುದ್ದಿವಂತನಹಳ್ಳಿ, ಗಿಡ್ಡಗಾನಹಳ್ಳಿ, ಕೊಂಡೇನಹಳ್ಳಿ, ಭಕ್ತರಹಳ್ಳಿ, ಬಿಸಲಹಳ್ಳಿ, ಗೌರಿಬಿದನೂರು ಪಟ್ಟಣ, ಹಿರೇಬಿದನೂರು ಮತ್ತು ಕುರುಬರಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ. ಇವುಗಳಲ್ಲಿ 10 ಹಳ್ಳಿಗಳು ಚಿಕ್ಕಬಳ್ಳಾಪುರ ವಿಧಾಸಭಾ ಕ್ಷೇತ್ರದಲ್ಲಿ ಬರುತ್ತದೆ ಹಾಗೂ ಗೌರಿಬಿದನೂರು ಪಟ್ಟಣ ಮತ್ತು 3 ಹಳ್ಳಿಗಳು ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ.
ರೈತರಿಗೆ ತೊಂದರೆಯಿಲ್ಲ
ಹೊಸಕೆರೆ ಗೌರಿಬಿದನೂರು ಪಟ್ಟಣದಿಂದ 23 ಕಿ.ಮೀ ದೂರದಲ್ಲಿದ್ದು, ಸುಮಾರು 526 ಎಕರೆ ಅಚ್ಚುಕಟ್ಟು ಹೊಂದಿದೆ. ಸುಮಾರು 33.15 ಕಿ.ಮೀ. ಅನಿರ್ಬಂಧಿತ ಜಲಾನಯನ ಪ್ರದೇಶವಾಗಿದ್ದು, ಯೋಜನೆಯ ಅನುಷ್ಠಾನದಿಂದ ಮಂಚೇನಹಳ್ಳಿ ಮತ್ತು ದಂಡಿಗಾನಹಳ್ಳಿ ಕೆರೆಯ ಸುತ್ತಮುತ್ತಲ ರೈತರಿಗೆ ತೊಂದರೆಯಾಗುವುದಿಲ್ಲ. ಕಾರಣ ಈ ಕೆರೆಯ ಒಟ್ಟು ಸಾಮರ್ಥ್ಯ 112.12 (ಮೆಟ್ರಿಕ್ ಕ್ಯೂಬಿಕ್ ಫೀಟ್) ಆಗಿದ್ದು ಶೇ. 30ರಷ್ಟು ಇಂಗುವಿಕೆ ಮತ್ತು ಆವಿಯಾಗುವಿಕೆಯಿಂದ ವ್ಯಯವಾಗುವ ಸುಮಾರು 33.63 (ಮೆಟ್ರಿಕ್ ಕ್ಯೂಬಿಕ್ ಫೀಟ್) ಸುಮಾರು 70.70 ಎಸಿಎಫ್‌ಟಿ ನೀರಿನ ಲಭ್ಯತೆ ಇದ್ದು ಇದರಲ್ಲಿ 63.89 ಎ.ಸಿ.ಎಫ್.ಟಿ ನೀರನ್ನು ಬಳಸಿಕೊಂಡು 87,200 ಜನರಿಗೆ ಕುಡಿಯುವ ನೀರು ಪೂರೈಸಬಹುದಾಗಿದೆ. ಪ್ರತಿವರ್ಷ ಫೆಬ್ರವರಿಯಿಂದ ಜೂನ್ ವರೆವಿಗೆ ಕೇವಲ 4ತಿಂಗಳು ಮಾತ್ರ ನೀರನ್ನು ಬಳಕೆ ಮಾಡುಕಳ್ಳುವುದರಿಂದ ಹಾಗೂ ಕೆರೆಯಿಂದ ನೇರವಾಗಿ ನೀರನ್ನು ಬಳಸಿಕೊಳ್ಳದಿರುವುದರಿಂದ, ಕೆರೆ ನೀರನ್ನು ಕುಡಿಯುವ ನೀರಿಗಾಗಿ ಮೊದಲ ಆದ್ಯತೆ ಕೊಡಬಹುದಾಗಿದೆ.



-ವಿ.ಡಿ. ಗಣೇಶ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement