ಗಡಿಯಲ್ಲಿ ಬೀಡು ಬಿಟ್ಟ ಗಜಪಡೆ: ರೈತರಿಗೆ ತಪ್ಪದ ಪ್ರಾಣ ಸಂಕಟ
ಬಂಗಾರಪೇಟೆ: ತಿಂಗಳಿಂದ ಗಡಿ ಭಾಗದಲ್ಲಿ ಬೀಡು ಬಿಟ್ಟಿರುವ ಗಜಪಡೆ ಮತ್ತೆ ತಮಿಳುನಾಡಿನತ್ತ ಕದಲದೆ ಇಲ್ಲೆ ಸುತ್ತಾಡಿಕೊಂಡಿರುವುದರಿಂದ ರೈತರಿಗೆ ಪ್ರಾಣ ಸಂಕಟವಾಗಿದೆ.
ಆಹಾರ ಮತ್ತು ನೀರು ಆರಿಸಿಕೊಂಡು ರಾಜ್ಯ ಗಡಿ ಭಾಗವಾದ ಯರಗೋಳ್, ಬಲಮಂದೆ, ತೊಪ್ಪನಹಳ್ಳಿ, ಮುಷ್ಟ್ರಹಳ್ಳಿ, ಬತ್ತಲಹಳ್ಳಿ, ಕೊಳಮೂರು ಗಾಡಿಗೆ ವಲಸೆ ಬಂದಿರುವ ಗಜಪಡೆಗಳು ತಿಂಗಳಿಂದ ಇಲ್ಲೆ ಸುತ್ತಾಡಿಕೊಂಡು ರೈತರ ಬೆಳೆಗಳನ್ನು ತಿನ್ನುವ ಮೂಲಕ ರೈತರನ್ನು ಪೀಕಲಾಟಕ್ಕೆ ಸಿಲುಕಿಸಿದೆ. ಆನೆಗಳನ್ನು ಪಳಗಿಸುವ ನಿರಿತ ತಜ್ಞರನ್ನು ಬೆಂಗಳೂರಿನಿಂದ ತಿಂಗಳಿಂದೆಯೆ ಕರೆಸಿಕೊಳ್ಳಲಾಗಿತ್ತಾದರೂ ಆ ತಂಡದ ಸದಸ್ಯರು ಪರಿಣಾಮಕಾರಿಯಾಗಿ ಕೆಲಸ ಮಾಡದ ಕಾರಣ ಅರಣ್ಯ ಇಲಾಖೆ ಈಗ ಮತ್ತೊಂದು 7 ಜನರಿರುವ ತಂಡವನ್ನು ಕರೆಸಿಕೊಂಡು ಶನಿವಾರದಿಂದ ಆನೆಗಳನ್ನು ಓಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಆದರೆ ಸುಮಾರು 30ಆನೆಗಳ ಗುಂಪು ಈಗ ಮೂರು ತಂಡಗಳಾಗಿ ಬೇರ್ಪಟ್ಟಿರುವುದರಿಂದ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಗೆ ಮತ್ತೆ ಅಡ್ಡಿಯಾಗಿ ಸಿಬ್ಬಂದಿಗೆ ತಲೆ ನೋವು ತಂದಿದೆ. ಸಿಬ್ಬಂದಿ ಒಂದು ಕಡೆ ಹೋದರೆ ಆನೆಗಳು ಮತ್ತೊಂದು ಕಡೆ ಹೋಗಿ ಬೆಳೆ ನಾಶ ಮಾಡುತ್ತಲೆ ಇವೆ ಇವುಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಶುಕ್ರವಾರ ರಾತ್ರಿ ಸಹ ಒಂದು ಗುಂಪು ಬತ್ತಲಹಳ್ಳಿ ಸುತ್ತಮುತ್ತ, ಮತ್ತೊಂದು ಗುಂಪು ಕೊಳಮೂರು ಹಾಗೂ ತೊಪ್ಪನಹಳ್ಳಿ ಗ್ರಾಮಗಳ ಕಡೆ ಓಡಾಡಿಕೊಂಡಿವೆ ಎಂದು ವಲಯ ಅರಣ್ಯಾಧಿಕಾರಿ ಚಂದ್ರಶೇಖರರೆಡ್ಡಿ ತಿಳಿಸಿದ್ದಾರೆ. ಈಗ ಬೆಂಗಳೂರಿನಿಂದ ಆನೆಗಳನ್ನು ತಮಿಳುನಾಡಿನ ಗಡಿ ದಾಟಿಸುವ ಪರಿಣಿತರ ತಂಡ ಆಗಮಿಸಿದ್ದು ವಾರದೊಳಗೆ ರೈತರಿಗೆ ಹೊಸ ಸುದ್ದಿ ನೀಡುವುದಾಗಿ ಭರವಸೆ ನೀಡಿದ್ದಾರೆ.ತಿಂಗಳಿಂದ ಇದೇ ಭರವಸೆ ನೀಡಿಕೊಂಡು ಬರುತ್ತಿದ್ದರೂ ಭರವಸೆ ಮಾತ್ರ ಭರವಸೆಯಾಗೇ ಉಳಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.