ಪಕ್ಷ ಅಪೇಕ್ಷೆ ಪಟ್ಟಲ್ಲಿ ಲೋಕಸಭೆಗೆ ಸ್ಪರ್ಧಿಸುವೆ
ಮಾಲೂರು: ಮುಂದಿನ ಲೋಕಸಭೆಗೆ ತುಮಕೂರಿನಿಂದ ಸ್ಪರ್ಧಿಸಲು ಇಚ್ಚಿಸಿದ್ದು, ಅದು ಪಕ್ಷ ಒಪ್ಪಿಗೆ ನೀಡದರೆ ಮಾತ್ರ ಎಂದು ಕೆಎಸ್ಆರ್ಟಿಸಿ ಬೋರ್ಡ್ ಮಾಜಿ ಉಪಾಧ್ಯಕ್ಷ ಜಗ್ಗೇಶ್ ಹೇಳಿದರು.
ಪತ್ರಕರ್ತರೂಡನೆ ಮಾತನಾಡಿ, ಶಿಸ್ತಿನ ಪಕ್ಷವಾದ ಬಿಜೆಪಿಯಲ್ಲಿ ಶಿಸ್ತಿನ ಸಿಪಾಯಿನಂತೆ ಕಾರ್ಯ ನಿರ್ವಹಿಸುತ್ತಿದ್ದು, ಒಂದು ವೇಳೆ ಪಕ್ಷ ಅಪೇಕ್ಷೆ ಪಟ್ಟಲಿ ತುಮಕೂರಿನಿಂದ ಮುಂದಿನ ಲೋಕಸಭೆಗೆ ಸ್ಪರ್ಧಿಸುವುದಾಗಿ ತಿಳಿಸಿದರು. ಒಂದು ವೇಳೆ ಈ ಬಾರಿ ಟಿಕೇಟ್ ತಪ್ಪಿದರೆ ಬೇಜಾರ್ ಇಲ್ಲ ಎಂದ ಜಗ್ಗೇಶ್ 2017 ರ ತನಕ ಎಂಎಲ್ಸಿಯಾಗಿರುವ ನಾನು ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ದುಡಿಯುವೆ ಎಂದಿದ್ದಾರೆ.ಸ ಾಫ್ಟ್ವೇರ್ ಗಂಡ ಚಲನಚಿತ್ರದ ನಿರ್ಮಾಪಕ ರಾಮಪ್ಪ, ಸಂಪತ್ತು, ನಿರ್ದೇಶಕ ವೆಂಕಟೇಶ್ ಇದ್ದರು.
ಪ್ರಯೋಗಾಲಯ ನಿರ್ಮಾಣಕ್ಕೆ ಗುದ್ದಲಿ ಪೂಜೆ
ಶ್ರೀನಿವಾಸಪುರ: ಪಟ್ಟಣದ ಆಮಾನಿಕೆರೆಯ ಆಂಗಳದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಸ್ಟೆಲ್ನಲ್ಲಿ ನಡೆಯುತ್ತಿರುವ ಅವ್ಯವಹಾರಗಳಿಗೆ ಬ್ರೇಕ್ ಹಾಕಲು ಕಾಲೇಜಿನ ಪ್ರಾಂಶುಪಾಲರು ಹಾಸ್ಟೆಲ್ಗಳ ನಿರ್ವಹಣೆ ವಹಿಸಬೇಕೆಂದು ಶಾಸಕ ಕೆ.ಆರ್. ರಮೇಶ್ ಕುಮಾರ್ ತಾಕೀತು ಮಾಡಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ನೂತನ ಪ್ರಯೋಗಾಲಯ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ವಿದ್ಯಾರ್ಥಿಗಳಿಗಾಗಿ ಸರ್ಕಾರದಿಂದ ಬರುವ ಹಣ ಉಪಯೋಗವಾಗದೆ ಕಳ್ಳಕಾಕರ ಪಾಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಪ್ರಾಂಶುಪಾಲ ಎನ್. ಶಿವಣ್ಣ, ತಹಸೀಲ್ದಾರ್ ಎಚ್. ಜಯ, ದಿಂಬಾಲ ಆಶೋಕ್, ಶ್ರೀನಿವಾಸ ಮತ್ತಿತರರು ಉಪಸ್ಥಿತರಿದ್ದರು.
ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಿ
ಬಂಗಾರಪೇಟೆ: ಶಾಲಾ ಮಕ್ಕಳಿಗೆ ಬಾಲ್ಯದಿಂದಲೇ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಿದರೆ ಮುಂದೆ ಅವರು ರಸ್ತೆ ನಿಯಮಗಳನ್ನು ಪಾಲಿಸುವ ಮೂಲಕ ಅಫಘಾತಗಳನ್ನು ತಡೆಯುವರು ಎಂದು ಪಟ್ಟಣದ ಸಹಾಯಕ ಸಬ್ಇನ್ಸ್ಪೆಕ್ಟರ್ ಗೋವಿದರಾಜು ಹೇಳಿದರು. ತಾಲೂಕಿನ ಕಿಲುಕೊಪ್ಪ ಗ್ರಾಮದ ಶ್ರೀಶನೈಶ್ಚರ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಿ ಮಾತನಾಡಿ, ಇತ್ತೀಚಿಗೆ ಪಟ್ಟಣದಲ್ಲಿ ಜನಸಂಖ್ಯೆ ಹೆಚ್ಚಾಗಿರುವುದರಿಂದ ಕಿರಿದಾದ ರಸ್ತೆಗಳಲ್ಲಿ ವಾಹನಗಳ ಸಂಖ್ಯೆ ಏರಿದೆ. ಇದರಿಂದ ಪ್ರತಿದಿನ ರಸ್ತೆ ಅವಘಡಗಳ ಸಂಖ್ಯೆ ದ್ವಿಗುಣವಾಗುತ್ತಿದೆ. ಇದನ್ನು ತಡೆಗಟ್ಟಲು ರಸ್ತೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿದರೆ ಮಾತ್ರ ಅವಘಡಗಳನ್ನು ನಿಯಂತ್ರಿಸಲು ಸಾಧ್ಯವಾಗಿದೆ ಎಂದರು. ಚಿನ್ನಪ್ಪಯ್ಯ-ಅಶೋಕ್ ಹಾಸ್ಯದ ಮೂಲಕ ಅರಿವು ಮೂಡಿಸಿದರು.
ತಾಲೂಕು ಮಟ್ಟಕ್ಕೆ ಆಯ್ಕೆ
ಗಂಜಿಗುಂಟೆಯ ಜ್ಞಾನೋದಯ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ತಾಲೂಕು ಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕಯಾಗಿದ್ದಾರೆ.
ಅಸಮರ್ಪಕ ವಿದ್ಯುತ್; ಬಂಗಾರಪೇಟೆಯಲ್ಲಿ ಪ್ರತಿಭಟನೆ
ಬಂಗಾರಪೇಟೆ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ವಿದ್ಯುತ್ ಕಡಿತಗೊಳಿಸುತ್ತಿರುವುದರಿಂದ ತೊಂದರೆಯಾಗಿದ್ದು ಕೂಡಲೆ ಅಡಚಣೆಯಿಲ್ಲದೆ ವಿದ್ಯುತ್ ಪೂರೈಕೆ ಮಾಡಬೇಕೆಂದು ಒತ್ತಾಯಿಸಿ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಬೆಸ್ಕಾಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡಿದರು.
ಸರ್ಕಾರದ ಆದೇಶದಂತೆ ಗ್ರಾಮೀಣ ಪ್ರದೇಶಕ್ಕೆ ಹಾಗೂ ಪಟ್ಟಣ ಪ್ರದೇಶಕ್ಕೆ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ರೈತರು ಬೆಳೆದಿರುವ ಬೆಳೆಗಳಿಗೆ ನೀರುಣಿಸಲು ವಿದ್ಯುತ್ ಇಲ್ಲದೆ ಬೆಳೆಗಳು ಒಣಗುವಂತಾಗಿ ಲಕ್ಷಾಂತರ ರುಪಾಯಿ ನಷ್ಟವಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ವಿದ್ಯುತ್ ಕಡಿತಗೊಳಿಸುವುದು ಅನಿವಾರ್ಯವಾದರೆ ವೇಳಾ ಪಟ್ಟಿ ನೀಡಿ ಅದರಂತೆ ಕಡಿತಗೊಳಿಸಿ. ಕುಡಿಯುವ ನೀರಿಗಾದರೂ ವಿದ್ಯುತ್ ನಿಗದಿಪಡಿಸಲಿ ಎಂದು ಅಧಿಕಾರಿಗಳನ್ನು ಆಗ್ರಹಿಸಿದರು.
ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದಸಂಸ ಪ್ರತಿಭಟನೆ
ಚಿಕ್ಕಬಳ್ಳಾಪುರ: ಅಕ್ರಮ ಮರಳು ಗಣಿಗಾರಿಕೆ, ಮಟ್ಕಾ ದಂಧೆಗೆ ಪ್ರೋತ್ಸಾಹ ನೀಡುತ್ತಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಶುಕ್ರವಾರ ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ನಗರದ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಹೊರಟು ನೂತನ ಜಿಲ್ಲಾಡಳಿತ ಭವನಕ್ಕೆ ಬಂದ ಪ್ರತಿಭಟನಾಕಾರರು ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಅಧಿಕಾರಿಗಳ ವಿರುದ್ಧ ಧಿಕ್ಕಾರಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಸಂಘದ ರಾಜ್ಯ ಸಂಘಟನಾ ಸಂಚಾಲಕ ಗಂಗಾಧರ್, ಹಿಂದುಳಿದ ಪ್ರದೇಶವಾದ ಬಾಗೇಪಲ್ಲಿ ತಾಲೂಕಿನಲ್ಲಿ ಮಟ್ಕಾ ದಂಧೆ, ಅಕ್ರಮ ಮರಳು ಗಣಿಗಾರಿಕೆ ಕೆಲ ಪೊಲೀಸರ ನೆರಳಿನಲ್ಲಿಯೇ ರಾಜಾರೋಷವಾಗಿ ನಡೆಯುತ್ತಿದೆ. ಇದರಲ್ಲಿ ಬಾಗೇಪಲ್ಲಿ ಸಬ್ ಇನ್ಸ್ಕ್ಟರ್ ಮುನಿರೆಡ್ಡಿ ಮತ್ತು ಚೇಳೂರು ಠಾಣೆಯ ಸಬ್ ಇನ್ಸ್ಪೆಕ್ಟರ್ ನಾರಾಯಣಸ್ವಾಮಿ ಸಹಕಾರವಿದೆ ಎಂದು ನೇರವಾಗಿ ಆರೋಪಿಸಿದರು. ಮುಖಂಡರಾದ ಸಿ.ವಿ. ಲಕ್ಷ್ಮಣರಾಜು, ತಿರುಪಳ್ಳಪ್ಪ, ಎಸ್. ಆಂಜಿನಪ್ಪ, ವಿಜಯ್ನರಸಿಂಹ ಮತ್ತಿತರರರು ಇದ್ದರು.
ಕೃಷ್ಣ-ಅರ್ಜುನ ವೇಷ ಸ್ಪರ್ಧೆ ಕಾರ್ಯಕ್ರಮ
ಚಿಕ್ಕಬಳ್ಳಾಪುರ; ಪಾಶ್ಚಿಮಾತ್ಯ ರಾಷ್ಟ್ರಗಳು ಸೇರಿದಂತೆ ಅನೇಕ ದೇಶಗಳ ಜನರು ವಿಶ್ವದ ಮಹಾನ್ ಗ್ರಂಥ ಭಗವದ್ಗೀತೆಯ ಮೇಲೆ ಹೆಚ್ಚು ಒಲವು ತೋರುತ್ತಿದ್ದಾರೆ ಎಂದು ವಿವೇಕಾನಂದ ರಾಮಕೃಷ್ಣಾಶ್ರಮದ ಪೂರ್ಣಾನಂದ ಮಹಾರಾಜ್ ಜೀ ಅಭಿಪ್ರಾಯಪಟ್ಟರು.
ಗೀತಾ ಜಯಂತಿ ಪ್ರಯುಕ್ತ ತಾಲೂಕಿನ ಹೊಸಹುಡ್ಯದ ವಿಷ್ಣುಪ್ರಿಯ ಶಾಲಾ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ 16ನೇ ವರ್ಷದ ಜಿಲ್ಲಾ ಮಟ್ಟದ ಅಂತರಶಾಲಾ ಭಗವದ್ಗೀತೆ ಕಂಠಪಾಠ ಮತ್ತು ಕೃಷ್ಣ ಅರ್ಜುನ ವೇಷ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮನಸ್ಸಿನ ಆರೋಗ್ಯಕ್ಕೆ ಯೋಗಾಸನ, ಆಧ್ಯಾತ್ಮಿಕ ವಿಷಯಗಳು ಅವಶ್ಯಕವಾಗಿದ್ದು ಪ್ರತಿಯೊಬ್ಬರು ಜೀವನದಲ್ಲಿ ಭಗವದ್ಗೀತೆಯನ್ನು ಅಧ್ಯಯನ ಮಾಡಬೇಕು. ಭಗವದ್ಗೀತೆ ಹಂತ ಹಂತವಾಗಿ ಜೀವನ ರೂಪಿಸುತ್ತದೆ. ನಮ್ಮಲ್ಲಿ ಹೆಚ್ಚು ಸಂಸ್ಕೃತಿ ಬೆಳೆದಷ್ಟು ಜೀವನ ವೃದ್ಧಿಯಾಗುತ್ತದೆ ಎಂದರು.
ವಿಜ್ಞಾನ, ತಂತ್ರಜ್ಞಾನದ ಬಗ್ಗೆ ಜಾಗೃತಿ ಮೂಡಿಸಿ
ಗುಡಿಬಂಡೆ: ಜಾಗತಿಕ ಮಟ್ಟದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಮಹತ್ತರವಾದ ಪಾತ್ರ ವಹಿಸುತ್ತಿದ್ದು, ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳ ಮೂಲಕ ಜಾಗೃತಿ ಮೂಡಿಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಸಿ. ರವಿಕುಮಾರ್ ತಿಳಿಸಿದರು.
ಪಟ್ಟಣದ ಗಜನಾಣ್ಯ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳ ಕುರಿತು ಶಾಲಾ ಶಿಕ್ಷಕರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಒಂದು ದಿನದ ಪುನಶ್ಚೇತನ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಉಪನ್ಯಾಸಕ ಬಿ. ಅಮೀರ್ ಜಾನ್ ಮತ್ತಿತರರು ಈ ಸಂದರ್ಭದಲ್ಲಿ ಮಾತನಾಡಿದರು.
'ವಿದ್ಯೆ ಕಲಿಸಿದ ಗುರುವಿನ ಋಣ ತೀರಿಸಲು ಅಸಾಧ್ಯ'
ಬಾಗೇಪಲ್ಲಿ: ವಿದ್ಯೆ ಕಲಿಸಿದ ಗುರುವಿನ ಋಣ ತೀರಿಸಲು ಸಾಧ್ಯವಿಲ್ಲ ಎಂದು ರಾಜ್ಯ ಕಾರಾಗೃಹ ಡಿಐಜಿ ವಿ.ಎಸ್. ರಾಜಾ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಚೇಳೂರಿನ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಹಳೇ ವಿದ್ಯಾರ್ಥಿಗಳ ಒಕ್ಕೂಟದ ವತಿಯಿಂದ ಏರ್ಪಡಿಸಲಾಗಿದ್ದ ಗುರುವಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಗುರುಗಳ ಬಗ್ಗೆ ಉದಾಸೀನತೆ ಬಿಟ್ಟು ಗೌರವದಿಂದ ನೋಡುವ ಗುಣ ಬೆಳೆಸಿಕೊಳ್ಳಬೇಕು ಎಂದರು.ಪ್ರಾಥಮಿಕ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಪಿ.ಎಸ್. ರವೀಂದ್ರನಾಥ್ ಮಾತನಾಡಿ, ಚಾರಿತ್ರ್ಯ ರಹಿತ ಬುದ್ದಿವಂತಿಕೆ ವ್ಯರ್ಥ. ಜೀವನವನ್ನು ಸರಿಯಾಗಿ ರೂಪಿಸಿಕೊಳ್ಳಬೇಕಾದುದು ಪ್ರತಿ ವಿದ್ಯಾರ್ಥಿಯ ಕರ್ತವ್ಯ ಎಂದರು. ಇದಕ್ಕೂ ಮೊದಲು ಸನ್ಮಾನಿತರನ್ನು ಚೇಳೂರಿನ ಮಾನಸ ಕಾಲೇಜು ಮುಂಭಾಗದಿಂದ ಪೂರ್ಣಕುಂಭ ಸ್ವಾಗತದ ಮೂಲಕ ಕರೆತರಲಾಯಿತು.
ಪ್ರತಿಭಾ ಕಾರಂಜಿಯಲ್ಲಿ ಮಿಂಚಿದ ಮಕ್ಕಳು
ಕೋಲಾರ: ತಾಲೂಕಿನ ಕೋಡಿ ಕಣ್ಣೂರು ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದರಲ್ಲದೆ ಮೆಚ್ಚುಗೆ ಗಳಿಸಿದರು.
ಕೋಡಿ ಕಣ್ಣೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಸ್ಪರ್ಧೆಗಳಲ್ಲಿ ಮಕ್ಕಳು ಟಿಪ್ಪು ಸುಲ್ತಾನ್, ಮೈಸೂರು ಮಹಾರಾಜ, ಈಶ್ವರ ಹಾಗೂ ಇನ್ನಿತರ ಪಾತ್ರಧಾರಿಗಳ ವೇಷದಲ್ಲಿ ಮಿಂಚಿದರು.ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಹಾಗೂ ಪ್ರಕೃತಿ ಕಲಾ ತಂಡ ಅಧ್ಯಕ್ಷ ಆರ್. ಮುನಿಸ್ವಾಮಿ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪ್ರತಿಭೆಯನ್ನು ಗುರುತಿಸಬೇಕಾದರೆ ಇತಂಹ ಕಾರ್ಯಕ್ರಮಗಳನ್ನು ಹೆಚ್ಚಾಗಿ ಹಮ್ಮಿಕೊಳ್ಳಬೇಕೆಂದರು. ವಿದ್ಯಾರ್ಥಿ ಎಂ.ಶೇಶಾಂಕ್ ಛದ್ಮವೇಷದಲ್ಲಿ ಪ್ರಥಮ ಬಹುಮಾನ ಗಳಿಸಿದ.
80 ಅಡಿ ರಸ್ತೆ ಕಾಮಗಾರಿಗೆ
ಶಾಸಕಿ ವೈ.ರಾಮಕ್ಕ ಚಾಲನೆ
ಕೆಜಿಎಫ್: ಕ್ಷೇತ್ರದಲ್ಲಿ ಕಳೆದ 5 ವರ್ಷಗಳಲ್ಲಿ ರಸ್ತೆಗಳ ಅಭಿವೃದ್ಧಿ, ದ್ವಿಪಥರಸ್ತೆ ಕಾಮಗಾರಿಗಳಿಂದ ನಗರ ಹಾಗೂ ಗ್ರಾಮೀಣ ಭಾಗದ ಚಿತ್ರಣ ಬದಲಾಗಿದೆ ಎಂದು ಶಾಸಕ ವೈ. ರಾಮಕ್ಕ ಹೇಳಿದರು. ನಗರೋತ್ಥಾನ ಯೋಜನೆಯಡಿ ಬಿಜಿಎಂಲ್ ಗಣಿಗಾರಿಕೆ ಭಾಗದ ಓರಿಯಂಟಲ್ ಲೈನ್ ಬಳಿ 1.5 ಕೋಟಿ ವೆಚ್ಚದಲ್ಲಿ 80 ಅಡಿ ನೂತನ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದಿನ ಸರ್ಕಾರ ನಗರೋತ್ಥಾನ ಯೋಜನೆಯಡಿ 16 ಕೋಟಿ ಅನುದಾನ ಕೆಜಿಎಫ್ ಕ್ಷೇತ್ರದ ನಗರ ಭಾಗದ ಅಭಿವೃದ್ಧಿಗೆ ನೀಡಿತ್ತು. ಈ ಅನುದಾನದಡಿ ಈಗಾಗಲೇ ಟೆಂಡರ್ ಮುಗಿದಿದ್ದು ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿದೆ ಹಾಗೂ ಗಣಿಗಾರಿಕೆ ಭಾಗದಲ್ಲಿ 80 ಅಡಿ ರಸ್ತೆ ನಿರ್ಮಾಣ ಕ್ಷೇತ್ರದ ಇತಿಹಾಸದಲ್ಲಿ ದಾಖಲೆ ನಿರ್ಮಿಸಿದೆ ಎಂದರು.ಮಾಜಿ ಶಾಸಕ ವೈ. ಸಂಪಂಗಿ ಮಾತನಾಡಿದರು.
ಸಭೆ ಮುಂದೂಡಿಕೆ ವಿರೋಧಿಸಿ ಪ್ರತಿಭಟನೆ
ಮಾಲೂರು: ನಿಗದಿಯಾಗಿದ್ದ ಅಟ್ರಾಸಿಟಿ ಸಭೆಯನ್ನು ತಹಸೀಲ್ದಾರ್ ಏಕಾಏಕೀ ಮುಂದೂಡಿರುವುದನ್ನು ವಿರೋಧಿಸಿ ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು ಮಿನಿ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿ ತಹಸೀಲ್ದಾರ್ರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಶಾಸಕರು ಬರಲಿಲ್ಲ ಎಂಬ ಕಾರಣವೊಡ್ಡಿ ತಹಸೀಲ್ದಾರ್ ಅವರು ಅಟ್ರಾಸಿಟಿ ಸಭೆಯನ್ನು ಮಂದೂಡಿರುವುದು ಖಂಡನೀಯ. ಶಾಸಕರ ಸಮ್ಮುಖದಲ್ಲಿ ಕೆಲವು ಪ್ರಕರಣಗಳ ಬಗ್ಗೆ ದಲಿತರು ಮಾತನಾಡಲು ಸಾಧ್ಯವಿಲ್ಲದಿರುವುದರಿಂದ ಅಟ್ರಾಸಿಟಿ ಸಭೆ ಅವರು ಹಾಜರಾತಿಯಲ್ಲೇ ನಡೆಯಬೇಕು ಎಂಬುದು ಸರಿಯಲ್ಲ ಎಂದು ಆರೋಪಿಸಿದರು.
ದಲಿತರ ಸಮಸ್ಯೆಗಳನ್ನು ಹೇಳಕೊಳ್ಳಬಹುದಾದ ಅಟ್ರಾಸಿಟಿ ಸಭೆಅಪರೂಪಕ್ಕೆ ನಡೆಯುತ್ತಿದ್ದು, ಅದನ್ನು ಮುಂದೂಡಿರುವುದು ತಾಲೂಕು ಆಡಳಿತದ ವೈಫಲ್ಯವಾಗಿದ್ದು, ದಲಿತರನ್ನು ಅವಮಾನಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಅಪಾದಿಸಿದರು.
ಉದ್ಘಾಟನೆ ಭಾಗ್ಯ ಕಾಣದ ಗ್ರಾಮ ಪಂಚಾಯ್ತಿ ಕಟ್ಟಡ
ಟೇಕಲ್: ಮಾಸ್ತಿ ಹೋಬಳಿಯ ದಿನ್ನಹಳ್ಳಿ ಗ್ರಾಪಂನ ನೂತನ ಕಟ್ಟಡ ಪೂರ್ಣಗೊಂಡು 7 ತಿಂಗಳು ಕಳೆದಿದ್ದರೂ ಉದ್ಘಾಟನೆ ಭಾಗ್ಯ ಸಿಗುತ್ತಿಲ್ಲ.
ದಿನ್ನಹಳ್ಳಿ ಗ್ರಾಪಂ ಹಳೆಯ ಈಗಿನ ಕಲ್ಲಿನ ಕಟ್ಟಡದಲ್ಲಿ ಮಳೆ ಬಂದರೆ ನೀರು ಜಿನುಗುತ್ತದೆ. ಕಟ್ಟಡದ ಸಿಮೆಂಟ್ ಉದುರುತ್ತಿರುವುದರಿಂದ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಭಯದಿಂದ ಕೆಲಸ ಮಾಡುವಂತಾಗಿದೆ.
ಸುಮಾರು ವರ್ಷಗಳಿಂದ ಹಳೆಯ ಕಟ್ಟಡದಲ್ಲೆ ಗ್ರಾಪಂ ಸಭೆಗಳು ನಡೆಯುತ್ತಿತ್ತು. ಆದರೆ ಈ ಕಟ್ಟಡದಲ್ಲಿ ಜನ ಕೂರಲು ಜಾಗವಿಲ್ಲ. ಸಭೆ ನಡೆಯುವ ವೇಳೆ ಸಾರ್ವಜನಿಕರು ಕಟ್ಟಡದಿಂದ ಹೊರಗೆ ನಿಂತು ಸಭೆ ಆಲಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ಆದಷ್ಟು ಬೇಗ ಸಂಬಂದಪಟ್ಟ ಇಲಾಖಾ ಅಧಿಕಾರಿಗಳು ಹೊಸ ಕಟ್ಟಡಕ್ಕೆ ಬದಲಾಯಿಸಬೇಕೆಂದು ಇಲ್ಲಿನ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸರ್ಕಾರಿ ಸವಲತ್ತುಸದುಪಯೋಗವಾಗಲಿ
ಶಿಡ್ಲಘಟ್ಟ: ಸರ್ಕಾರ ಶಿಕ್ಷಣಕ್ಕೆ ವಿವಿಧ ಸವಲತ್ತುಗಳನ್ನು ನೀಡಿದ್ದು ಸವಲತ್ತುಗಳ ಸದುಪಯೋಗವಾಗಬೇಕೆಂದು ಶಾಸಕ ಎಂ. ರಾಜಣ್ಣ ಹೇಳಿದರು.
ಗ್ರಾಮೀಣ ಮಟ್ಟದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಿಂದ ತಾಲೂಕು ಮಟ್ಟಕ್ಕೆ ಪ್ರಾಥಮಿಕ, ಪ್ರೌಢಶಾಲೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ತಾಲೂಕು ಮಟ್ಟದ ಪ್ರತಿಬಾ ಕಾರಂಜಿ ಕಾರ್ಯಕ್ರಮವನ್ನು ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮತನಾಡಿ, ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಹೊರತರುವ ಉದ್ದೇಶದಿಂದ ಕಾರ್ಯಕ್ರಮ ನಡೆಸಿದ್ದು, ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಬೇಕೆಂದು ತಿಳಿಸಿದರು. ಜಿಪಂ ಸದಸ್ಯ ಎಸ್.ಎನ್. ನಾರಾಯಣ ಸ್ವಾಮಿ ಮಾತನಾಡಿ, ವಿದ್ಯೆ ಮಹತ್ವದ ವಿಷಯವಾಗಿದ್ದು ಮಕ್ಕಳು ಓದಿ ವಿದ್ಯಾವಂತರಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದರು. ತಾಪಂ ಅಧ್ಯಕ್ಷ ಯರಬಚ್ಚಪ್ಪ ಮಾತನಾಡಿದರು. ರಾಮಚಂದ್ರಪ್ಪ ಮತ್ತಿತರರು ಇದ್ದರು.
ರೈತ ಸಂಘ ಪ್ರತಿಭಟನೆ
ಗೌರಿಬಿದನೂರಿನಲ್ಲಿ ಮೆಕ್ಕೆ ಜೋಳಕ್ಕೆ ಬೆಂಬಲ ಬೆಲೆ ನೀಡಬೇಕೆಂದು ಒತ್ತಾಯಿಸಿ ತಹಸೀಲ್ದಾರ್ ಕಚೇರಿ ಎದುರು ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿರುವುದು.
ಮಹಿಳೆಯರಿಗಾಗಿ ಜಾಗೃತಿ ಶಿಬಿರ
ಕೋಲಾರ: ಮಹಿಳೆಯರ ಮತ್ತು ಮಕ್ಕಳ ಮೇಲಿನ ಹಿಂಸೆಯ ನಿವಾರಣೆಯನ್ನು ಕುರಿತು ಜಾಗೃತಿ ಮೂಡಿಸುವ 16 ದಿನಗಳ ಅಂದೋಲನ ಶಿಬಿರ ನಗರದ ಗೌರಿಪೇಟೆಯ ಮಹಿಳಾ ಜಾಗೃತಿ ವೇದಿಕೆ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ಆರೋಗ್ಯ ಸಂವರ್ಧನ ಪ್ರತಿಷ್ಠಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಜಾಗೃತಿ ವೇದಿಕೆ ಸಹಯೋಗದಲ್ಲಿ ಆಯೋಜಿಸಿದ್ದ ಆರೆಂಜ್ ದಿ ವರ್ಲ್ಡ್ ಕಾರ್ಯಕ್ರಮವನ್ನು ಎಸ್ಎನ್ಆರ್ ಜಿಲ್ಲಾ ಆಸ್ಪತ್ರೆ ಪ್ರಸುತಿ ತಜ್ಞ ಡಾ.ಶಿವಣ್ಣ ಉದ್ಘಾಟಿಸಿದರು.
ಮಹಿಳೆಯ ಆರೋಗ್ಯ, ಹಕ್ಕು, ಕರ್ತವ್ಯದ ಬಗ್ಗೆ ಶಿಬಿರದಲ್ಲಿ ತಿಳುವಳಿಕೆ ಪಡೆಯುವ ಮೂಲಕ ಮಹಿಳೆಯರು ಅಭಿವೃದ್ಧಿ ಸಾಧಿಸಬೇಕೆಂದು ಡಾ.ಶಿವಣ್ಣ ಸಲಹೆ ನೀಡಿದರು. ಮಹಿಳಾ ಜಾಗೃತಿ ವೇದಿಕೆ ಕಾರ್ಯದರ್ಶಿ ಮಮತಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ವಸತಿ ನಿಲಯದ ಮೇಲ್ವಿ ಚಾರಕಿ ಲಕ್ಷ್ಮೀ, ಡಿ.ಎಂ.ರತ್ನಮ್ಮ ಉಪಸ್ಥಿತರಿದ್ದರು.
ಇಂದು ಸರ್ದಾರ್ ಪಟೇಲ್
ನೆನಪಿನ ಏಕತಾ ಓಟ
ಕೋಲಾರ: ಸರ್ದಾರ್ ವಲ್ಲಭಬಾಯಿ ಪಟೇಲ್ ಪುಣ್ಯತಿಥಿ ಅಂಗವಾಗಿ ಹಾಗೂ ಗುಜರಾತ್ನಲ್ಲಿ ನಿರ್ಮಾಣಗೊಳ್ಳಲಿರುವ ಬೃಹತ್ ಪ್ರತಿಮೆಗೆ ಕಬ್ಬಿಣ ಸಂಗ್ರಹಣೆಯ ಬಗ್ಗೆ ಜನತೆಯಲ್ಲಿ ಅರಿವು ಮೂಡಿಸಲು ಡಿ.15 ರಂದು ನಗರದಲ್ಲಿ ಏಕತಾ ಓಟ ಹಮ್ಮಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಲೋಹ ಸಂಗ್ರಹ ಸಮಿತಿ ಮುಖಂಡ ಹಾಗೂ ಬಿಜೆಪಿ ಕಿಸಾನ್ ಮೋರ್ಚಾ ರಾಷ್ಟ್ರೀಯ ಕಾರ್ಯದರ್ಶಿ ಶಂಕರನಾರಾಯಣರೆಡ್ಡಿ ತಿಳಿಸಿದರು.
ಈ ಸಂಬಂಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಕತಾ ಪ್ರತಿಮೆ ನಿರ್ಮಾಣಕ್ಕಾಗಿ ಭಾರತದ ರು. 6.50 ಲಕ್ಷ ಹಳ್ಳಿಗಳ ರೈತರು ಕೃಷಿಗಾಗಿ ಬಳಸಿ ಈಗ ನಿರುಪಯುಕ್ತವಾಗಿರುವ ಹಳೆ ಕಬ್ಬಿಣದ ಸಲಕರಣೆ ಸಂಗ್ರಹಿಸಲಾಗುತ್ತಿದೆ ಎಂದರು. ಡಿ.15ರಿಂದ ಜನವರಿ 26 ರತನಕ ಲೋಹ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಭಾನುವಾರ ಬೆಳಿಗ್ಗೆ 9.30 ಗಂಟೆಗೆ ಏಕತಾ ಓಟ ನಡೆಯಲಿದೆ ಎಂದರು.
ಅವರು ಹೇಳಿದ್ದು
ಕೆಲವರು ನನ್ನನ್ನು ಅಹಿಂದ ಪರವಾದ ಮುಖ್ಯಮಂತ್ರಿ ಎನ್ನುತ್ತಾರೆ. ನಾನು ಅಹಿಂದ, ಸಾಮಾಜಿಕ ನ್ಯಾಯದ ಪರ ಮತ್ತು ಎಲ್ಲ ಜಾತಿಯ ಬಡವರ ಪರವೂ ಹೌದು. ಅವಕಾಶ ವಂಚಿತರಿಗೆ ಅವಕಾಶ ಒದಗಿಸುವುದು ಸರ್ಕಾರದ ಉದ್ದೇಶ.
- ಸಿದ್ದರಾಮಯ್ಯ,
ಮುಖ್ಯಮಂತ್ರಿ
ಒಳಮರ್ಮ
ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದೆ. ಕೇವಲ ಅಹಿಂದ ಜಪ ಮಾಡಿದರೆ ವ್ಯತಿರಿಕ್ತ ಪರಿಣಾಮ ಬೀರೀತು ಎಂಬಭಯ ಎದುರಾದಂತಿದೆ!
ಪ್ರಧಾನ ಸಂಪಾದಕರಿಗೆ ಟ್ವೀಟ್ ಮಾಡಿ
@VishweshwarBhat