ಫಿಲ್ಟರ್ ಮರಳು ದಂಧೆ ಖಂಡಿಸಿ ಪ್ರತಿಭಟನೆ
ಗೌರಿಬಿದನೂರು: ತಾಲೂಕಿನ ಮಂಚೇನಹಳ್ಳಿ ಹೋಬಳಿಯ ಗಡಿಭಾಗದ ಚಿಕ್ಕಬಳ್ಳಾಪುರ ತಾಲೂಕು ವ್ಯಾಪ್ತಿಯ ಪೋಶೆಟ್ಟಹಳ್ಳಿ ಪಂಚಾಯ್ತಿಯ ರಾಗಮಾಕಲಹಳ್ಳಿ ಗ್ರಾಮದ ಕೆರೆ ಅಂಗಳದಲ್ಲಿ ನಿರಂತರವಾಗಿ ಕಳ್ಳಸಾಗಾಣಿಕೆಯಾಗುತ್ತಿದ್ದು ಮರಳು ಫಿಲ್ಟರ್ ಪಾಯಿಂಟ್‌ನಿಂದ ದಂಧೆ ನಿರಂತರವಾಗಿ ನಡೆಯುತ್ತಿದೆ. ಮೇಲಧಿಕಾರಿಗಳು ಈ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದರೂ ಯಾವ ಕ್ರಮ ಕೈಗೊಳ್ಳದಿದ್ದುದನ್ನು ಖಂಡಿಸಿ ಪಲಹಳ್ಳಿ ಗ್ರಾಮದ ಜನ 25 ಟನ್ ಮರಳು ತುಂಬಿದ ಲಾರಿಯನ್ನು ತಡೆದು, ರಾತ್ರಿ ಪೂರ್ತಿ ಧರಣಿ ನಡೆಸಿ ಬೆಳಿಗ್ಗೆ ತಾಲೂಕು ರೈತಸಂಘದ ಮುಖಂಡರನ್ನು ಕರೆಸಿ ಲಾರಿಯನ್ನು ಸಂಬಂಧ ಪಟ್ಟ ಅಧಿಕಾರಿಗಳ ವಶಕ್ಕೆ ಒಪ್ಪಿಸಿದ್ದಾರೆ.
ಮರಳು ಲಾರಿ ಹಿಡಿದ ಗ್ರಾಮದ ಶ್ರೀನಿವಾಸ್ ಮತ್ತು ಕುಟುಂಬದ ಸದಸ್ಯರು ಮರಳು ಲಾರಿ ಹಿಡಿದು ಕೊಟ್ಟಿದ್ದಾರೆಂದು ಮರಳುಗಳ್ಳರ ಗುಂಪು ಗ್ರಾಮದ ಮೂರ್ತಿ, ಲಕ್ಷ್ಮಪ್ಪ, ಮತ್ತು ಕೇಶವ ಅವರ ಮನೆಗಳಿಗೆ ನುಗ್ಗಿ ಹೆಂಗಸರು ಮಕ್ಕಳನ್ನು ಹೊರಗೆಳೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಮನಬಂದಂತೆ ಥಳಿಸಿದ್ದು, ಹೊಡೆದಾಟದಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದು ಎರಡು ಗುಂಪುಗಳು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಗ್ರಾಮಾಂತರ ಪಿ.ಎಸ್.ಐ. ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುವುದಾಗಿ ತಿಳಿಸಿರುತ್ತಾರೆ.
ಹಗಲು ರಾತ್ರಿ ಎನ್ನದೆ ನಡೆಯುತ್ತಿರುವ ಈ ದಂಧೆಯಿಂದ ಸುತ್ತಮುತ್ತಲ ಬಾವಿಗಳು ಬತ್ತಿಹೋಗಿವೆ. ಆದರೂ ಮೂರು ನಾಲ್ಕು ವರ್ಷಗಳಿಂದ ನಿರಂತರವಾಗಿ ರಾತ್ರಿ ಹಗಲು ಎನ್ನದೆ ಫಿಲ್ಟರ್ ಪಾಯಿಂಟ್‌ಗಳು ನಡೆಯುತ್ತಿದ್ದು, ಕೆರೆ ಕೋಡಿಯನ್ನು ಮರಳು ದಂಧೆಕೋರರು ಒಡೆದು ನಿರಂತರವಾಗಿ ಜೀವಜಲ ಪೋಲಾಗುತ್ತಿದ್ದರೂ, ಸುತ್ತಮುತ್ತಲ ಧನ-ಕರುಗಳಿಗೆ ನೀರಿಲ್ಲದಂತೆ ಮಾಡಿದ್ದು, ಗ್ರಾಮದ ಸಣ್ಣ ರಸ್ತೆಯ ಮೇಲೆ ಪ್ರತಿ ದಿನ ನಲವತ್ತು ಇವತ್ತು ಟ್ರ್ಯಾಕ್ಟರ್ ಮರಳು ಮತ್ತು 20 ಲಾರಿಗಳಷ್ಟು ಮರಳು ನಿರಂತರವಾಗಿ ಬೆಂಗಳೂರು ಮತ್ತು ದೊಡ್ಡಬಳ್ಳಾಪುರಕ್ಕೆ ಸಗಾಣೆಯಾಗುತ್ತಿದ್ದು ಒಂದು ಟ್ರ್ಯಾಕ್ಟರ್ ಮರಳಿಗೆ 5 ರಿಂದ 10 ಸಾವಿರಗಳನ್ನು ಪಡೆಯುತ್ತಿದ್ದರನ್ನಲಾಗಿದೆ.
ಪ್ರತಿಭಟನೆ ನಿರತರಾದ ಮುಖಂಡರಾದ ನಾರಾಯಣ್ವಾಮಿ, ಸೋಮಣ್ಣ, ಶಿವಣ್ಣ, ರಾಜಣ್ಣ, ವೆಂಕಟಸ್ವಾಮಿ, ಹನುಮಂತಪ್ಪ, ಮುನಿರಾಜು, ನಾಗಣ್ಣ, ಲಕ್ಷಮ್ಮಪ್ಪ, ಮೂರ್ತಿ ಹಾಗೂ ಗ್ರಾಮದ ಮಹಿಳೆಯರು, ಯುವಕರು ರಾತ್ರಿ ಪೂರ್ತಿ ಮರಳು ಲಾರಿಗೆ ಕಾವಲು ಇದ್ದು ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.