ಹೆಣ್ಣು ಭ್ರೂಣ ಹತ್ಯೆ ಸಾಮಾಜಿಕ ಪಿಡುಗು
ಚಿಕ್ಕಬಳ್ಳಾಪುರ: ಬಿಗಿಯಾದ ಕಾನೂನು ನಿಯಮಗಳಿದ್ದರೂ ಹೆಣ್ಣು ಭ್ರೂಣ ಹತ್ಯೆ ಸಂಪೂರ್ಣವಾಗಿ ನಿಂತಿಲ್ಲ ಎಂದು ವಿಧಾನಸಭೆ ಉಪಾಧ್ಯಕ್ಷ ಎನ್. ಹೆಚ್. ಶಿವಶಂಕರರೆಡ್ಡಿ ವಿಷಾದ ವ್ಯಕ್ತಪಡಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗಪತ್ತೆ ತಂತ್ರ ನಿಷೇಧ ಕಾಯಿದೆ ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಗಂಡು ಮತ್ತು ಹೆಣ್ಣು ಎರಡು ಸಮಾನ. ಇದರಲ್ಲಿ ಲಿಂಗಭೇದ ತೋರುವಂತಹುದು ಒಳ್ಳೆಯ ಸಮಾಜದ ಲಕ್ಷಣವಲ್ಲ. ಲಿಂಗ ತಾರತಮ್ಯ ನೀತಿಯಿಂದ ಅಹಿತಕರ ಬೆಳವಣಿಗೆಗಳು ಕಂಡು ಬರುತ್ತದೆ.ಪ್ರಸ್ತುತ ಲಿಂಗಾನುಪಾತದಲ್ಲಿನ ವ್ಯತ್ಯಾಸವು ದೊಡ್ಡ ಸಮಸ್ಯೆಯಾಗಿದೆ ಎಂದರು.
ಹೆಣ್ಣೂ ಭ್ರೂಣ ಹತ್ಯೆಯನ್ನು ತಡೆಯುವ ನಿಟ್ಟಿನಲ್ಲಿ ಪ್ರಬಲವಾದ ಕಾನೂನು ನಿಯಮಗಳನ್ನು ರೂಪಿಸಲಾಗಿದೆಯಲ್ಲದೇ ಹೆಣ್ಣು ಮಕ್ಕಳ ಆರೋಗ್ಯ, ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಲಾಗಿದೆ. ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಅಗತ್ಯವಿರುವ ಸವಲತ್ತುಗಳನ್ನು ಒದಗಿಸಲಾಗುತ್ತಿದೆ. ಇದಕ್ಕಾಗಿ ಸರ್ಕಾರ ಜಾರಿಗೆ ತಂದ ಅನೇಕ ಯೋಜನೆಗಳು ಬಹಳಷ್ಟಿವೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಮಹಿಳೆಯರ ಸಂಖ್ಯೆ ಇಳಿಮುಖವಾಗುತ್ತಿದ್ದು, ದೇಶದಲ್ಲಿ ಲಿಂಗಾನುಪಾತದ ಅಸಮತೋಲನದ ವ್ಯತ್ಯಾಸವಿರುವುದು ಆತಂಕಕಾರಿ ಸಂಗತಿ.
ಹೆಣ್ಣು ಭ್ರೂ ಹತ್ಯೆ ಮತ್ತು ಮಹಿಳೆಯರ ಶೋಷಣೆಯನ್ನು ಪರಿಪೂರ್ಣವಾಗಿ ತೊಲಗಿಸಲು, ಲಿಂಗಾನುಪಾತದಲ್ಲಿ ಸಮತೋಲನ ಕಾಪಾಡುವಲ್ಲಿ ಯಶಸ್ವಿಯಾಗದಿರುವುದು ತಲೆ ತಗ್ಗಿಸುವ ವಿಚಾರವಾಗಿದೆ ಎಂದರು.
ಶಾಸಕ ಡಾ.ಕೆ.ಸುಧಾಕರ್ ಮಾತನಾಡಿ, ಹೆಣ್ಣು ಭ್ರೂಣ ಹತ್ಯೆಯನ್ನು ತಡೆಯುವಲ್ಲಿ ವೈದ್ಯರ ಪಾತ್ರ ಮಹತ್ತರವಾಗಿದೆ. ಕಾನೂನಿಗೆ ವಿರುದ್ಧವಾದರೂ ಪೋಷಕರು ಕದ್ದು ಮುಚ್ಚಿ ಹೆಣ್ಣು ಭ್ರೂಣ ಹತ್ಯೆಗೆ ಮುಂದಾದ ಸಂದರ್ಭದಲ್ಲಿ ವೈದ್ಯರು ಹಣದ ಆಸೆಗೆ ಮಾರು ಹೋಗಿ, ದುಷ್ಕೃತ್ಯಕ್ಕೆ ಒಪ್ಪಿಕೊಳ್ಳಬಾರದು ಎಂದರು.
ಜಿಲ್ಲಾಧಿಕಾರಿ ಡಾ.ಆರ್.ವಿಶಾಲ್, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೀಲಾ ಮಂಜುನಾಥ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ ಉಪ ನಿರ್ದೇಶಕ ರಾಹತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಹೆಚ್.ವಿ.ರಂಗಸ್ವಾಮಿ, ಕಾನೂನು ಸಲಹೆಗಾರ್ತಿ ರಾಜೇಶ್ವರಿ, ಡಾ. ಪಿ.ಕೆ. ಶ್ರೀನಿವಾಸ್ ಉಪಸ್ಥಿತರಿದ್ದರು.