ಕರವೇ ಕಾರ್ಯಕರ್ತರಿಂದ ರಸ್ತೆ ತಡೆ, ಪ್ರತಿಭಟನೆ
ಟೇಕಲ್: ಇಲ್ಲಿನ ರೇಲ್ವೆ ಗೇಟ್ ಸಮೀಪ ತಿರುವಿನಲ್ಲಿ ಸೋಮವಾರ ಜಲ್ಲಿ ತುಂಬಿದ್ದ ಟಿಪ್ಪರ್ ಲಾರಿಯೊಂದು ಚಾಲಕನ ಅಜಾಗೂರಕತೆಯಿಂದ ರಸ್ತೆಯಲ್ಲೆ ಪಲ್ಟಿ ಹೊಡೆದ ಪರಿಣಾಮ ವೃದ್ಧೆಯೊಬ್ಬರ ತಲೆಗೆ ಗಾಯವಾಗಿದೆ. ಸ್ಥಳೀಯ ಕರವೇ ಕಾರ್ಯಕರ್ತರು ಇದನ್ನು ಖಂಡಿಸಿ ಪ್ರತಿ ದಿನ ಕೆಲವು ಟಿಪ್ಪರ್ ಲಾರಿಗಳ ಅಜಾಗೂರಕತೆಯ ಚಾಲನೆಯಿಂದ ದ್ವಿಚಕ್ರ ವಾಹನಗಳು ಓಡಾಡಲು ಸಾಧ್ಯವಾಗುತ್ತಿಲ್ಲವೆಂದು ಪ್ರತಿಭಟಿಸಿ ರಸ್ತೆ ತಡೆ ನಡೆಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಸಮೀಪದ ಭಟ್ಟರಹಳ್ಳಿಯ ಟಿಪ್ಪರ್‌ಲಾರಿಯೊಂದು ಟೇಕಲ್ ಸಮೀಪ ಜಲ್ಲಿ ತುಂಬಿಕೊಂಡು ಬರುತ್ತಿದ್ದಾಗ ರೈಲ್ವೆ ಗೇಟ್ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೆ ಟಿಪ್ಪರ್ ಪಲ್ಟಿ ಹೊಡೆಯಿತು.
ದ್ವಿಚಕ್ರ ವಾಹನದಲ್ಲಿ ಹಿಂದೆ ಕುಳಿತಿದ್ದ ರಾಮಕ್ಕ (70) ಎಂಬ ವೃದ್ಧೆ ಗಾಯವಾಗಿ ಅವರನ್ನು ಪ್ರಥಮ ಚಿಕಿತ್ಸೆಗೆ ಟೇಕಲ್ ಆಸ್ಪತ್ರೆಗೆ ಸೇರಿಸಲಾಯಿತು. ಕಾರ್ಯಕರ್ತರ ಪ್ರತಿಭಟನೆ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಕಾರ್ಯಕರ್ತರ ಬಳಿ ಮಾತನಾಡಿ ರಸ್ತೆ ತಡೆ ಕೈಬಿಡುವಂತೆ ಮಾತುಕತೆ ನಡೆಸಿದ ನಂತರ ಕೈಬಿಡಲಾಯಿತು.
ಪ್ರತಿಭಟನೆ ನೇತೃತ್ವವನ್ನು ಕರವೇ ಕಾರ್ಯದರ್ಶಿ ಉಳ್ಳೇರಹಳ್ಳಿ ಮಂಜುನಾಥ್ ವಹಿಸಿದ್ದರು. ಕರವೇ ಪುಡಶೆಟ್ಟಿಹಳ್ಳಿ ಸತೀಶ್, ಉಳ್ಳೇರಹಳ್ಳಿ ವೆಂಕಟೇಶ್, ದಾಸರಹಳ್ಳಿ ಲೋಕೇಶ್, ಬೈರತ್ನಹಳ್ಳಿ ಮುನಿರಾಜು ಭಾಗವಹಿಸಿದ್ದರು.