ಕುಡಿವ ನೀರು: ಉದ್ದಟತನ ತೋರಿದಲ್ಲಿ ಹೋರಾಟ
ಕ.ಪ್ರ.ವಾರ್ತೆ , ಕೋಲಾರ , ಡಿ.16
ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ಜಾರಿಗೆ ತಂದಿರುವ ಯೋಜನೆಗಳು ಜಿಲ್ಲಾ ಪಂಚಾಯಿತಿಗೆ ಸಂಬಂಧಿಸಿಲ್ಲವೆಂದು ಅಧಿಕಾರಿಗಳು ಉದ್ದಟತನ ತೋರಿದಲ್ಲಿ ಹೋರಾಟದ ಮೂಲಕ ನಮ್ಮ ಹಕ್ಕು ಪಡೆಯಬೇಕಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ ಎಚ್ಚರಿಕೆ ನೀಡಿದರು.
ಸೋಮವಾರ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ಸರಬರಾಜಿಗಾಗಿ ಸರ್ಕಾರ ಸಾಕಷ್ಟು ಅನುದಾನ ನೀಡಿದ್ದರೂ ಅಧಿಕಾರಿಗಳು ಜಿ.ಪಂ. ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಮಾನ್ಯತೆ ನೀಡದೆ ತಮ್ಮಿಷ್ಟ ಬಂದಂತೆ ಕೆಲಸ ಮಾಡುತ್ತಿರುವುದು ಅಧಿಕಾರ ವಿಕೇಂದ್ರಿಕರಣದ ತತ್ವಗಳಿಗೆ ವಿರುದ್ಧವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕುಡಿಯುವ ನೀರು ಯೋಜನೆಯ ವಿಚಾರದಲ್ಲಿ ಜಿ.ಪಂ ಇಂಜಿನಿಯರಿಂಗ್ ವಿಭಾಗ ಯಾವುದೇ ತಾರತಮ್ಯ ಇಲ್ಲದೆ ಜಿಲ್ಲಾ ಪಂಚಾಯಿತಿಯ ಆಶಯಗಳಿಗೆ ತಕ್ಕಂತೆ ಕೆಲಸ ನಿರ್ವಹಣೆ ಮಾಡಬೇಕು ಎಂದ ಅಧ್ಯಕ್ಷರು, ಜಿಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರು ತಮ್ಮ ಆಕ್ರೋಶ ವ್ಯಕ್ತಪಡಿಸುವ ಸಾಧ್ಯತೆಗಳಿರುವುದರಿಂದ ಅಧಿಕಾರಿಗಳು ತಮ್ಮ ತಪ್ಪು ಸರಿಪಡಿಸಿಕೊಂಡು ಸದಸ್ಯರ ಅಭಿಪ್ರಾಯಕ್ಕೂ ಸ್ಪಂದಿಸಿ ಕೆಲಸ ಮಾಡಬೇಕೆಂದು ಸೂಚಿಸಿದರು.
ಅಧ್ಯಕ್ಷರ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್.ಆನಂದ್, ಜಿಪಂ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರ ದೇವರಾಜ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಜಿಲ್ಲಾ ಪಂಚಾಯಿತಿ ಸದಸ್ಯರನ್ನು ಹೊರಗಿಟ್ಟು ಕಾಮಗಾರಿಗಳನ್ನು ನಡೆಸುತ್ತಿದ್ದಾರೆ. ಶಾಸಕರು ಕೇಳಿದಂತೆ ಕೇಳುತ್ತಿದ್ದಾರೆ, ಜಿ.ಪಂ. ಸದಸ್ಯರಿಗೆ ಪ್ರಶ್ನಿಸುವ ಅಧಿಕಾರ ಇಲ್ಲವೆಂದು ಭಾವಿಸಿದ್ದಲ್ಲಿ ನಾವೇಕೆ ಸದಸ್ಯರಾಗಿಬೇಕು, ಜಿಪಂ ಮತ್ತು ತಾಪಂಗಳನ್ನು ರದ್ದುಪಡಿಸುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ಎಂದು ತಾಕೀತು ಮಾಡಿದರು. ಜಿಪಂ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ತಾವು ಸದಸ್ಯರ ಅಭಿಪ್ರಾಯ ಕೇಳುವುದರಲ್ಲಿ ತಪ್ಪೇನು ಇಲ್ಲ. ಸರ್ಕಾರದ ಯಾವುದೇ ಯೋಜನೆ ಅನುಷ್ಠಾನಕ್ಕೆ ತರುವಾಗ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಸೂಕ್ತ. ಈ ಹಿಂದೆ ತಾವು ಸದಸ್ಯರಾಗಿದ್ದಾಗ ಪ್ಯಾಕೇಜ್ ಕಾಮಗಾರಿಗಳ ಬಗ್ಗೆ ವಿರೋಧ ವ್ಯಕ್ತಪಡಿಸಿ ಕೋರ್ಟಿಗೆ ಹೋಗಿದ್ದೆ. ಆದರೆ, ನಾನೀಗ ಅಧ್ಯಕ್ಷನಾದ ಮೇಲೂ ಪ್ಯಾಕೇಜ್ ಕಾಮಗಾರಿಗಳು ನಡೆಯುತ್ತಿರುವುದು ಬೇಸರ ಉಂಟು ಮಾಡಿದೆ, ಅನೇಕರು ಈ ಬಗ್ಗೆ ನನ್ನನ್ನು ಪ್ರಶ್ನೆ ಮಾಡುತ್ತಿದ್ದು ಉತ್ತರ ನೀಡುವುದಕ್ಕೆ ಕಷ್ಟವಾಗುತ್ತಿದೆ ಎಂದು ಅಳಲು ತೋಡಿಕೊಂಡರು.
ಜಿಪಂ ಇಂಜಿನಿಯರಿಂಗ್ ವಿಭಾಗದಿಂದ 900 ಕೆಲಸಗಳು ನಡೆಯಬೇಕಾಗಿದೆ, ಎಲ್ಲಾ ಕಾಮಗಾರಿಗಳಗೂ ಟೆಂಡರ್ಕ್ರೆದರೆ ಕೆಲಸ ವಿಳಂಬವಾಗುತ್ತದೆ ಎಂಬ ಕಾರಣಕ್ಕೆ ಕೆಲ ಕಾಮಗಾರಿಗಳನ್ನು ಪ್ಯಾಕೇಜ್ ಅಡಿಯಲ್ಲಿ ನಡೆಸಲಾಗುತ್ತಿದೆ ಎಂದು ಇಇ ದೇವರಾಜ್ ತಿಳಿಸಿದಾಗ, ಹೋ ನಿಮ್ಮ ಅಡ್ಜೆಸ್ಟೆಮೆಂಟ್ಗಾಗಿ ಪ್ಯಾಕೇಜ್ ಮಾಡಿದ್ದೀರಾ, ಟೆಂಡರ್ ಕರೆದರೆ ತಪ್ಪೇನು ಎಂದು ಪ್ರಶ್ನಿಸಿದರಾದರೂ ಉತ್ತರ ಪಡೆಯಲಾಗಲಿಲ್ಲ.
ಸಭೆಯಲ್ಲಿ ಬೆಸ್ಕಾಂನವರು ಕುಡಿಯುವ ನೀರಿನ ಯೋಜನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿರುವುದು ಚರ್ಚೆ ಆಯಿತು. ಕೋಲಾರ ಬೆಸ್ಕಾಂ ಇಇ ಶಿವರಾಂ ಮಾತನಾಡಿ, ಜನತೆಯ ಅನುಕೂಲಕ್ಕಾಗಿ ನಾವು ಯಾವುದೇ ಠೇವಣಿ ಇಲ್ಲದೆ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದರೂ ಜಿಪಂನಿಂದ ಹಣ ಬಿಡುಗಡೆ ಆಗಿಲ್ಲವೆಂದು ದೂರಿದರು. ಕೋಲಾರ ವಿಭಾಗವೊಂದರಲ್ಲೇ 7.67 ಕೋಟಿ ರು. ಬಾಕಿ ಬರಬೇಕಾಗಿದೆ ಎಂದಾಗ, ಪ್ರತ್ಯೇಕವಾಗಿ ಕಾಮಗಾರಿ ವಿವರ ನೀಡಿದಲ್ಲಿ ಹಣ ಪಾವತಿ ಮಾಡುವುದಾಗಿ ಇಇ ದೇವರಾಜ್ ತಿಳಿಸಿದರು. ಅದೇ ರೀತಿ ಕೆಜಿಎಫ್ ವಿಭಾಗದ ಬೆಸ್ಕಾಂ ಇಂಜಿನಿಯರ್ ರಮೇಶ್ ಮಾತನಾಡಿ, 120 ಕುಡಿಯುವ ಯೋಜನೆಗಳಿಗೆ ಕೆಜಿಎಫ್ ವಿಭಾಗದಿಂದ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದು 4.75 ಕೋಟಿ ರು. ಬಾಕಿ ಉಳಿಸಿಕೊಳ್ಳಲಾಗಿದೆ ಎಂದರು.
ಪೈಕಾ ಕ್ರೀಡಾಕೂಟಕ್ಕೆ ಕ್ರೀಡಾ ಇಲಾಖೆಯಿಂದ ಸರಿಯಾದ ಸ್ಪಂದನೆ ಸಿಗುತ್ತಿಲ್ಲ, ಕ್ರೀಡಾಪಟುಗಳಿಗೆ ಭತ್ಯೆ ನೀಡಿಲ್ಲವೆಂಬ ದೂರುಗಳ ಹಿನ್ನೆಲೆಯಲ್ಲಿ ಮಂಗಳವಾರ ಇಲಾಖೆಗೆ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ, ಜಿಪಂ ಉಪಕಾರ್ಯದರ್ಶಿ ಭೇಟಿ ನೀಡಿ ಪರಿಶೀಲನೆ ಮಾಡಿ ವರದಿ ನೀಡಿದಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸಿಇಒ ಝುಲ್ಫಿಖಾರ್ ಉಲ್ಲಾ ತಿಳಿಸಿದರು.
ಅಕ್ರಮ ಜಲ್ಲಿ ಕ್ರಷರ್ಗಳ ವಿರುದ್ಧ ಕ್ರಮ ಕೈಗೊಳ್ಳದಿರುವ ಬಗ್ಗೆ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ್ ಕಿಡಿಕಾರಿದರಲ್ಲದೆ, ನಿಮಗೆ ಸ್ಥಳ ಪರಿಶೀಲನೆ ಮಾಡಲು ಭಯವಿದ್ರೆ ತಿಳಿಸಿ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ಸಂಪತ್ಕುಮಾರ್ ಕೃಷ್ಣ ಅವರಿಗೆ ತಾಕೀತು ಮಾಡಿದರು.
ಜಿಪಂ ಉಪಾಧ್ಯಕ್ಷೆ ಅಲುವೇಲಮ್ಮ, ಜಿಪಂ ಸಿಇಓ ಝಲ್ಫಿಖಾರ್ ಉಲ್ಲಾ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.